ರಾಜ್ಯದಲ್ಲಿ ಪಿಎಫ್‍ಐ ನಿಷೇಧಿಸುವ ಪ್ರಶ್ನೆಯೇ ಇಲ್ಲ: ಕೆ.ಸಿ. ವೇಣುಗೋಪಾಲ್

Public TV
1 Min Read

ವಿಜಯಪುರ: ರಾಜ್ಯದಲ್ಲಿ ಪಿಎಫ್‍ಐ ಸಂಘಟನೆಯನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

2018ರ ವಿಧಾನಸಭೆ ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ವಿಜಯಪುರಯಕ್ಕೆ ಆಗಮಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯವರೇ ಅಪರಾಧ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದಾರೆ. ಬಿಜೆಪಿ ಕ್ರಿಮಿನಲ್ ರಾಜಕೀಯದಿಂದ ಹೊರ ಬರಬೇಕು. ಕರಾವಳಿಯಲ್ಲಿ ನಡೆಯುತ್ತಿರುವ ಕೊಲೆ ಮತ್ತು ಅಪರಾಧ ಪ್ರಕರಣಗಳಲ್ಲಿ ಒಂದು ಕಡೆ ಬಿಜೆಪಿ ಮತ್ತೊಂದು ಕಡೆ ಆರ್ ಎಸ್‍ಎಸ್ ಕೈವಾಡ ಇದೆ ಎಂದು ಆರೋಪಿಸಿದರು.

ಜನರನ್ನು ಕೋಮು ಆಧಾರದ ಮೇಲೆ ವಿಭಜಿಸಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಸಲು ಬಿಜೆಪಿ ಮತ್ತು ಆರ್ ಎಸ್‍ಎಸ್ ಪ್ರಯತ್ನಿಸುತ್ತಿವೆ. ಕರ್ನಾಟಕದ ಜನತೆ ಜಾಣರಿದ್ದು, ಬಿಜೆಪಿ ಮತ್ತು ಆರ್ ಎಸ್‍ಎಸ್ ಕೋಮು ವಿಭಜನೆಯ ತಂತ್ರವನ್ನು ಬಲ್ಲವರಾಗಿದ್ದಾರೆ. ಚುನಾವಣೆಯಲ್ಲಿ ಕನ್ನಡಿಗರು ಇದಕ್ಕೆ ಅವಕಾಶ ನೀಡುವುದಿಲ್ಲ. ಆರ್‍ಎಸ್‍ಎಸ್ ಅಷ್ಟೇ ಅಲ್ಲ, ಹಿಂದೂ ಮೂಲಭೂತವಾದಿಗಳಾಗಲಿ ಬೇರೆ ಯಾರೇ ಕೋಮವಾದಿಗಳಾಗಿ ಅವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ ಎಂದರು.

 

ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಯಾವುದೇ ಭಿನ್ನಮತವಿಲ್ಲ. ಕಳೆದ ಬಾರಿಗಿಂತ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಲಿದೆ ಎಂದು ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದರು.

ಬುಧವಾರ ರಾತ್ರಿ ಸುಮಾರು 11.30ಕ್ಕೆ ವಿಜಯಪುರಕ್ಕೆ ಆಗಮಿಸಿದ ವೇಣುಗೋಪಾಲ್ ಮಧ್ಯರಾತ್ರಿ 2.30 ಗಂಟೆವರೆಗೆ ಆರು ಜನ ಕಾಂಗ್ರೆಸ್ ಶಾಸಕರೊಂದಿಗೆ ಸುದೀರ್ಘ ಸಭೆ ನಡೆಸಿದ್ದಾರೆ. ಸಚಿವ ಡಾ.ಎಂ.ಬಿ. ಪಾಟೀಲ, ಶಾಸಕರಾದ ಸಿ.ಎಸ್. ನಾಡಗೌಡ, ಯಶವಂತರಾಯಗೌಡ ವಿ.ಪಾಟೀಲ, ಶಿವಾನಂದ ಪಾಟೀಲ, ಪ್ರೊ. ರಾಜು ಆಲಗೂರ, ಡಾ. ಮಕ್ಬೂಲ ಬಾಗವಾನ ಸುದೀರ್ಘ ಸಭೆಯಲ್ಲಿ ಭಾಗಿಯಾಗಿದ್ದರು. ಗುರುವಾರ ಕಳೆದ ಚುನಾವಣೆಯಲ್ಲಿ ಸೋತ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ವಿಜಯಪುರ ನಗರ ಮತಕ್ಷೇತ್ರದ ಭೂತಮಟ್ಟದ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ.

 

 

Share This Article
Leave a Comment

Leave a Reply

Your email address will not be published. Required fields are marked *