ಗದಗ: ಎಕ್ಸಿಟ್ ಪೋಲ್ ಮೇಲೆ ಅವಲಂಬನೆ ಆದರೆ ಮತ ಎಣಿಕೆ ಮಾಡುವ ಅವಶ್ಯಕತೆಯೇ ಇರುವುದಿಲ್ಲ. ಪೋಲ್ ನೀಡಿರುವ ಮಾಹಿತಿ ನೋಡಿ ರಿಸಲ್ಟ್ ಡಿಕ್ಲೇರ್ ಮಾಡಿಬಿಡೋಣ ಎಂದು ಕಂದಾಯ ಸಚಿವ ಆರ್.ವಿ ದೇಶಪಾಂಡೆ ವ್ಯಂಗ್ಯವಾಡಿದ್ದಾರೆ.
ಎನ್‍ಡಿಎ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರ ಸ್ಥಾಪನೆ ಮಾಡಲಿದೆ ಎನ್ನುವ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಚುನಾವಣೋತ್ತರ ಸಮೀಕ್ಷೆಯಲ್ಲಿ ಎಲ್ಲವೂ ಸರಿಯಾಗಿರುವುದಿಲ್ಲ. ಎಕ್ಸಿಟ್ ಪೋಲ್ ಅನುಭವ ಬಹಳಷ್ಟು ಕಡೆ ಸರಿಯಾಗಿಲ್ಲ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಬರುತ್ತೆ ಅಂದಿದ್ದರೋ ಅದಕ್ಕಿಂತ ಹೆಚ್ಚು ಸ್ಥಾನ ಬಂದಿತ್ತು. ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಅನೇಕ ಕಡೆಯಲ್ಲಿ ಸಮೀಕ್ಷೆಗಳು ನುಡಿದಂತೆ ಫಲಿತಾಂಶ ಬಂದಿಲ್ಲ ಎಂದು ಹೇಳಿದರು.
ಎಲ್ಲಾ ವಿಚಾರದಲ್ಲೂ ತಾಳ್ಮೆ ಬೇಕು ಆದರಲ್ಲೂ ರಾಜಕೀಯ ವಿಚಾರದಲ್ಲಿ ರಾಜಕಾರಣಿಗಳಿಗೆ ಬಹಳ ತಾಳ್ಮೆ ಬೇಕು. ಗೆಲ್ಲುವವರು ಪಟಾಕಿ ಹೊಡೆಯಲು ಗಡಿಬಿಡಿ ಮಾಡಬಾರದು. ಇದೇ ತಿಂಗಳು ಮೇ 23 ಕ್ಕೆ ಫಲಿತಾಂಶ ಇದೆ ಅವತ್ತು ಏನೂ ಎಂಬುದು ಗೊತ್ತಾಗುತ್ತೆ. ಆಗ ನೀವು ಈ ಪ್ರಶ್ನೆ ಕೇಳಿದರೆ ನಾನು ಸರಿಯಾದ ಉತ್ತರ ನೀಡುತ್ತೇನೆ ಎಂದು ತಿಳಿಸಿದರು.