ಸಂತೋಷ್ ಪಾಟೀಲ್ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಇಲ್ಲ: ಭಾಸ್ಕರ್ ರಾವ್

Public TV
2 Min Read

ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ನನಗೆ ಇಲ್ಲ ಎಂದು ಆಮ್ ಆದ್ಮಿ ಮುಖಂಡ, ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಭಾಸ್ಕರ್ ರಾವ್, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಕುಟುಂಬಕ್ಕೆ ನ್ಯಾಯ ಸಿಗುವುದು ಅನುಮಾನ. ಜವಾಬ್ದಾರಿ ಸ್ಥಾನದಲ್ಲಿರುವ ಪಕ್ಷ ನಾಲ್ಕು ಕೋಟಿ ರೂ. ಮಾಡಿರುವ 108 ಕಾಮಗಾರಿಯನ್ನು ತನಿಖೆ ಮಾಡಿಸಿ ಅವರ ಆತ್ಮಹತ್ಯೆಗೆ ನ್ಯಾಯ ಒದಗಿಸಿಕೊಡುವುದಾಗಿ ಹೇಳಲಿಲ್ಲ. ಬೇರೆ ಯಾರಾದರೂ ಈ ಪ್ರಕರಣದಲ್ಲಿ ಇದ್ದರೆ ಅವರ ಬಂಧನವಾಗುತ್ತಿತ್ತು. ಸಂತೋಷ್ ಸಾವಿಗೆ ಸರ್ಕಾರ ನ್ಯಾಯ ಕೊಡಿಸುವುದೇ ಆಗಿದ್ದರೆ ಈ ಪ್ರಕರಣ ನ್ಯಾಯಾಂಗದ ತನಿಖೆ ಮೂಲಕ ನಡೆಸಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ಪಾಲಕ್ಕಾಡ್‍ನಲ್ಲಿ RSS ಮುಖಂಡ ಹತ್ಯೆ

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಪ್ರಚಾರಕ್ಕೆ ಬಂದಾಗ 10% ಕಮಿಷನ್ ಸರ್ಕಾರ ಎಂದು ಆರೋಪ ಮಾಡಿದ್ದರು. ಆದರೆ ಈಗ ಅವರ ಡಬಲ್ ಎಂಜಿನ್ ಸರ್ಕಾರದಲ್ಲಿ 40% ಕಮಿಷನ್ ಆರೋಪ ಕೇಳಿ ಬರುತ್ತಿದೆ. ಎರಡೂ ಪಕ್ಷದವರು ಭ್ರಷ್ಟಾಚಾರ ನಡೆಸಿದ್ದಾರೆ. ಇದರ ವಿರುದ್ಧ ಆಮ್ ಆದ್ಮಿ ಹೋರಾಟ ನಡೆಸುತ್ತದೆ ಎಂದರು.

ಸಂತೋಷ್ ಪಾಟೀಲ್ ಪ್ರಧಾನಿಗೆ ದೂರು ಕೊಟ್ಟಾಗ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಆ ದೂರು ಇಲ್ಲಿಯವರೆಗೂ ತನಿಖೆಯಾಗಿಲ್ಲ. ಸಚಿವ ಈಶ್ವರಪ್ಪ ಮೇಲೆ ಪ್ರಕರಣ ದಾಖಲಾಗಿದೆ. ಈ ಕೂಡಲೇ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದ ಧ್ವನಿ ಎತ್ತುತ್ತಾರೆ. ಆದರೆ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ. ಪ್ರಾದೇಶಿಕ ಪಕ್ಷ ಇದ್ದರೂ ಜನರಿಗೆ ನ್ಯಾಯ ಸಿಗುತ್ತಿಲ್ಲ. ಆದ್ದರಿಂದ ಆಮ್ ಆದ್ಮಿ ಪಕ್ಷದಿಂದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕರು ಮೇಕೆದಾಟಿಗೆ ಹೋಗಿ ಬಿರಿಯಾನಿ ತಿಂದು ಬಂದಿದ್ದಾರೆ ಈಗ ಮಹದಾಯಿಗೆ ಹೊರಟಿದ್ದಾರೆ: ಪ್ರಜ್ವಲ್ ರೇವಣ್ಣ ಕಿಡಿ

ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ 108 ಕೆಲಸಗಳನ್ನು ಮಾಡಿರುವುದಕ್ಕೆ ಯಾವುದೇ ಮಂಜೂರಾತಿ ನೀಡದೇ ಅವಮಾನ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಯಿತು. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಎರಡೂ ಪಕ್ಷದವರಿಗೆ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂತೋಷ್ ಪಾಟೀಲ್ ಮಾನವೀಯತೆಯಿಂದ ಕೆಲಸ ಮಾಡಿರುವುದು ಗ್ರಾಮದ ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ರಾಜಕಾರಣಿಗಳು ಮೊಸಳೆ ಕಣ್ಣೀರು ಹಾಕಿ ಹೋಗುವುದು ಸರಿಯಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ರಾಜಕಾರಣಿಗಳಿಗೆ ಯಾವುದೇ ನೈತಿಕತೆ ಇಲ್ಲ. ಇರುವುದು ಒಂದೇ ಪಕ್ಷ ಆಮ್ ಆದ್ಮಿಗೆ ಮಾತ್ರ ಎಂದರು.

Share This Article
Leave a Comment

Leave a Reply

Your email address will not be published. Required fields are marked *