ಇಲ್ಲಿ ಯಾರು ಜೈಲಿನಲ್ಲಿರುವ ಪುತ್ರ ದುಷ್ಯಂತ್ ಚೌಟಾಲಾ ಇಲ್ಲ: ಶಿವಸೇನೆ

Public TV
2 Min Read

– ಬಿಜೆಪಿ, ಜೆಜೆಪಿ ಮೈತ್ರಿಯನ್ನ ಟೀಕಿಸಿದ ಶಿವಸೇನೆ

ಮುಂಬೈ: ಶಿವಸೇನೆಯಲ್ಲಿ ಯಾರು ದುಷ್ಯಂತ್ ಚೌಟಾಲ ಇಲ್ಲ. ಅವರ ತಂದೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ನಮ್ಮದು ಧರ್ಮ ಮತ್ತು ಸತ್ಯದ ರಾಜಕೀಯ ಎಂದು ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಹರ್ಯಾಣ ಮೈತ್ರಿಯನ್ನ ಟೀಕಿಸಿದ್ದಾರೆ.

ಬಿಜೆಪಿ, ಎನ್‍ಸಿಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗುತ್ತಿದೆ ಎಂಬ ಲೆಕ್ಕಾಚಾರಗಳು ಮಹಾರಾಷ್ಟ್ರದ ರಾಜಕೀಯ ಅಂಗಳಲ್ಲಿ ಕೇಳಿ ಬರುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಸಂಜತ್ ರಾವತ್, ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಬಂಡಾಯ ಬಂದು ಪಕ್ಷ ರಚನೆ ಮಾಡಿದ್ದಾರೆ. ನನ್ನ ಪ್ರಕಾರ ಶರದ್ ಪವಾರ ಬಿಜೆಪಿ ಜೊತೆ ಹೋಗಲ್ಲ ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಶಿವಸೇನೆ ಬೇರೆ ವಿಚಾರಗಳು ಮತ್ತು ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸಿಲ್ಲ. ಶಿವಸೇನೆ ಮುಂದೆ ಹಲವು ಅವಕಾಶಗಳಿದ್ದು, ಆದ್ರೆ ನಾವು ಅದರತ್ತ ಹೋಗಿ ಪಾಪ ಮಾಡಲ್ಲ. ಶಿವಸೇನೆ ಯಾವಾಗಲೂ ಸತ್ಯದ ರಾಜಕಾರಣ ಮಾಡಿಕೊಂಡು ಬಂದಿದೆ. ನಾವು ಅಧಿಕಾರಕ್ಕಾಗಿ ಹಸಿದು ಕುಳಿತಿಲ್ಲ ಎಂದು ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಬಂದು ಐದು ದಿನ ಕಳೆದರೂ ಇದೂವರೆಗೂ ಸರ್ಕಾರ ರಚನೆಯಾಗಿಲ್ಲ. ಬಿಜೆಪಿ ಮತ್ತು ಶಿವಸೇನೆ ಮೈತ್ರಿಗೆ ಸ್ಪಷ್ಟ ಬಹುಮತ ಹೊಂದಿದ್ದರೂ, ಎರಡು ಪಕ್ಷಗಳ ನಡುವೆ ಸಿಎಂ ಪದವಿಗಾಗಿ ಶೀತಲ ಸಮರ ಏರ್ಪಟ್ಟಿದೆ. ಶಿವಸೇನೆಯ 50:50 ಫಾರ್ಮುಲಾ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಅಕ್ಟೋಬರ್ 24ರಂದು ಫಲಿತಾಂಶ ಹರ್ಯಾಣದಲ್ಲಿ ಜೆಜೆಪಿ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಮನೋಹರ್ ಲಾಲ್ ಖಟ್ಟರ್ ಎರಡನೇ ಬಾರಿ ಸಿಎಂ ಆದ್ರೆ, ಜೆಜೆಪಿಯ ದುಷ್ಯಂತ್ ಚೌಟಾಲಾ ಡಿಸಿಎಂ ಆಗಿದ್ದಾರೆ.

2014ರ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದವು. ಶಿವಸೇನೆ 63 ಮತ್ತು ಬಿಜೆಪಿ 122 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. ನಂತರ ಎರಡೂ ಪಕ್ಷಗಳು ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲಾಗಿತ್ತು.

2019ರಲ್ಲಿ ಬಿಜೆಪಿ ಚುನಾವಣೆ ಪೂರ್ವದಲ್ಲಿಯೇ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಇತ್ತ ಕಾಂಗ್ರೆಸ್ ಮತ್ತು ಎನ್‍ಸಿಪಿ ಮೈತ್ರಿ ರಚನೆ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದವು. ಬಿಜೆಪಿ 105, ಶಿವಸೇನೆ, 56, ಎನ್‍ಸಿಪಿ 54, ಕಾಂಗ್ರೆಸ್ 44 ಮತ್ತು ಇತರರು 29 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.

ಚೌಟಾಲಾ ತಂದೆಗೆ ಪೆರೋಲ್:
ದುಷ್ಯಂತ್ ಚೌಟಾಲಾ ತಂದೆ ಅಜಯ್ ಚೌಟಾಲಾ ಜೂನಿಯರ್ ಬೇಸಿಕ್ ಟ್ರೆಂಡ್ (ಜೆಬಿಟಿ) ಶಿಕ್ಷಕರ ಹುದ್ದೆ ಭರ್ತಿಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ತಿಹಾರ್ ಜೈಲು ಸೇರಿದ್ದಾರೆ. ಅಜಯ್ ಚೌಟಾಲಾಗೆ ಸಿಬಿಐ ವಿಶೇಷ ನ್ಯಾಯಾಲಯ 10 ವರ್ಷ ಶಿಕ್ಷೆ ವಿಧಿಸಿ ಜೈಲಿಗೆ ಕಳುಹಿಸಿದೆ. ಸದ್ಯ ಎರಡು ವಾರಗಳ ಪೆರೋಲ್ ಪಡೆದುಕೊಂಡು ಹೊರ ಬಂದಿದ್ದಾರೆ. ತಿಹಾರ್ ಜೈಲಿನಲ್ಲಿರುವ ಅಜಯ್ ಚೌಟಾಲಾರ ಬಳಿ ಮೊಬೈಲ್ ಪತ್ತೆಯಾಗಿತ್ತು. ಅಧಿಕಾರಿಗಳು ಜೂನ್ ನಲ್ಲಿ ಅಜಯ್ ಚೌಟಾಲಾರನ್ನು ಪರಿಶೀಲನೆಗೆ ಒಳಪಡಿಸಿದಾಗ ಮೊಬೈಲ್ ಪತ್ತೆಯಾಗಿತ್ತು. ತಿಹಾರ್ ಜೈಲಿನಲ್ಲಿ ಅಜಯ್ ಚೌಟಾಲಾರಿಗೆ ಫೋನ್ ನೀಡಿದ್ದು ಯಾರು ಎಂಬುದರ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿದ್ದವು.

Share This Article
Leave a Comment

Leave a Reply

Your email address will not be published. Required fields are marked *