ರಾಜ್ಯದಲ್ಲಿ ಆಡಳಿತ ಪಕ್ಷವೂ ಇಲ್ಲ, ವಿರೋಧ ಪಕ್ಷವೂ ಇಲ್ಲ: ಸಿಎಂ ಇಬ್ರಾಹಿಂ

Public TV
2 Min Read

ಧಾರವಾಡ: ರಾಜ್ಯದಲ್ಲಿ ಆಡಳಿತ ಪಕ್ಷವೂ (Ruling Party) ಇಲ್ಲ, ವಿರೋಧ ಪಕ್ಷವೂ (Opposition Party) ಇಲ್ಲ. ಎರಡೂ ಪಕ್ಷಗಳು ಭ್ರಮನಿರಸವಾಗಿವೆ. ಆಡಳಿತ ಪಕ್ಷಕ್ಕೆ ಸರ್ಕಾರ ಹೇಗೆ ನಡೆಸಬೇಕು ಎಂಬುದು ಗೊತ್ತಿಲ್ಲ. ಕಾಂಗ್ರೆಸ್‌ಗೆ (Congress) ವಿರೋಧ ಪಕ್ಷದಲ್ಲಿ ಹೇಗಿರಬೇಕೆಂಬುದೇ ಗೊತ್ತಿಲ್ಲ. ಕೆಲವರು ಜೈಲಿನಲ್ಲಿದ್ದರೆ, ಇನ್ನೂ ಕೆಲವರು ಬೇಲ್ ಮೇಲೆ ಇದ್ದಾರೆ. 9 ತಿಂಗಳು ಜೈಲಿನಲ್ಲಿದ್ದು ಬಂದವರು ಜಿಲ್ಲೆಯ ಹೊರಗಡೆ ಅದ್ದೂರಿ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ವಾಗ್ದಾಳಿ ನಡೆಸಿದರು.

ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಆಡಳಿತಾರೂಢ ಹಾಗೂ ವಿರೋಧ ಪಕ್ಷದವರು ಇಬ್ಬರೂ ಭರತನಾಟ್ಯ ಮಾಡುತ್ತಾ ಕುಳಿತವರು. ರಾಹುಲ್ ಗಾಂಧಿ ಭಾರತ್ ಜೋಡೋ ಮಾಡುತ್ತಿದ್ದಾರೆ. ಅದ್ಯಾವ ಕಾರಣಕ್ಕೆ ಅವರು ಅದನ್ನು ಮಾಡುತ್ತಿದ್ದಾರೋ ಅವರಿಗೇ ಗೊತ್ತಿಲ್ಲ. ರಾಹುಲ್ ಗಾಂಧಿ ಮೊದಲು ಡಿಕೆಶಿ, ಸಿದ್ದರಾಮಯ್ಯ ಜೋಡೋ ಮಾಡಬೇಕು. ಕಾಂಗ್ರೆಸ್ ಕೈಕಾಲು ಬಿದ್ದು ಕುಮಾರಸ್ವಾಮಿ ಅವರನ್ನು ಸಿಎಂ ಆಗಿ ಮಾಡಿದ್ರು. ಆದರೆ 14 ತಿಂಗಳು ಸರ್ಕಾರ ನಡೆಯಲು ಬಿಡಲಿಲ್ಲ. ಈ ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಮೇಲಿನವರಿಗೆ ಕಪ್ಪ ಕೊಡಬೇಕು. ಸಿದ್ದರಾಮಯ್ಯನವರು ಹೇಳಲಿ ನೋಡೋಣ, ಅವರ ಸರ್ಕಾರದಲ್ಲಿ ಯರ‍್ಯಾರು ದುಡ್ಡು ಮಾಡಿದ್ದಾರೆ ಅನ್ನೋದನ್ನು ನಾನೇ ಹೇಳ್ತೀನಿ ಎಂದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಹಾಕಿಕೊಳ್ಳಲು ಚಪ್ಪಲಿ ಇರಲಿಲ್ಲ. ಈಗ ಜೋಶಿ ನೂರಾರು ಕೋಟಿಯ ಒಡೆಯ. ಶೆಟ್ಟರ್ ಸಿಕ್ಕಾಪಟ್ಟೆ ಆಸ್ತಿ ಮಾಡಿದ್ದಾರೆ. ಎಸ್.ಆರ್ ಬೊಮ್ಮಾಯಿ ನನ್ನ ಜೊತೆ ಕಾರ್ಯದರ್ಶಿ ಇದ್ದವರು. ಇಂದಿರಾ ಗಾಂಧಿಗಿಂತ ಮೋದಿಗೆ ಹೆಚ್ಚು ಅವಕಾಶ ಸಿಕ್ಕಿದೆ. ಆದರೆ ಅವರು ಬೆಳೆಸಿದ್ದು ಅದಾನಿ ಹಾಗೂ ಅಂಬಾನಿಯನ್ನು. ಬಿಜೆಪಿಯವರು ಎಲ್ಲವನ್ನೂ ಮಾರುತ್ತಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣವನ್ನೂ ಮಾರುತ್ತಾರೆ. ಆದರೆ ಅವರಿಗೆ ಗಿರಾಕಿ ಸಿಕ್ಕಿಲ್ಲ ಎಂದು ಟಾಂಗ್ ನೀಡಿದರು.

ಬಿಜೆಪಿಯ (BJP) ಕೆಲವರು ವೀಡಿಯೋದಲ್ಲಿ ಸೆರೆಯಾಗಿದ್ದಾರೆ. ಸದಾನಂದಗೌಡರು ಕೂಡ ವೀಡಿಯೋದಲ್ಲಿ ಸೆರೆ ಸಿಕ್ಕಿದ್ದರು. ಅದನ್ನು ಪ್ರಸಾರ ಮಾಡದಂತೆ ಹೈಕೋರ್ಟ್ ತಡೆಯಾಜ್ಞೆ ತಂದರು. ಆ ವೀಡಿಯೋದಲ್ಲೇನಿದೆ ಎಂದು ನಾನು ಸದಾನಂದ ಗೌಡರನ್ನು ಕೇಳಿದೆ. ಆದರೆ ಅವರು ನಕ್ಕು ಸುಮ್ಮನಾದರು ಎಂದು ಇಬ್ರಾಹಿಂ ಸದಾನಂದಗೌಡರಂತೆ ನಕ್ಕು ಹಾಸ್ಯ ಮಾಡಿದರು. ಗೋಪಾಲಯ್ಯ ನಾನು ಏನೂ ಮಾಡಿಲ್ಲ ಎನ್ನುತ್ತಾನೆ. ಆ ಭಾರ ಇಟ್ಟುಕೊಂಡು ಅವರು ಏನು ಮಾಡಲು ಸಾಧ್ಯ? ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ದೇಶದಲ್ಲಿ ಬಿಕ್ಕಟ್ಟು ಉಂಟಾದಾಗ ಅಣ್ಣ-ತಂಗಿ ವಿದೇಶಕ್ಕೆ ಓಡಿ ಹೋಗ್ತಾರೆ: ರಾಹುಲ್, ಪ್ರಿಯಾಂಕಾಗೆ ಯೋಗಿ ಟಾಂಗ್

ಈ ಬಾರಿ ನಾವು 123 ಮಿಷನ್ ಹೊಂದಿದ್ದೇವೆ. ನಮಗೆ ಪೂರ್ಣ ಬಹುಮತ ಸಿಗದಿದ್ದರೆ ನಾವು ಇನ್ನೊಬ್ಬರ ಜೊತೆ ಸೇರಿ ಸರ್ಕಾರ ಮಾಡುವುದಿಲ್ಲ. ಯಡಿಯೂರಪ್ಪ ಸಿಎಂ ಆದಾಗ ಲಿಂಗಾಯತರು ಉದ್ಧಾರ ಆಗಿದ್ದಾರಾ? ನನ್ನ ಜೊತೆ ರಾಜಕಾರಣ ಮಾಡಿದ ಶೆಟ್ರು ಸತ್ತು ಹೋದರು. ಈಗ ಇರುವ ಜಗದೀಶ್ ಶೆಟ್ಟರ್ ನಕಲಿ ಎಂದರು. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಇನ್ನೆಂದೂ ಬರುವುದಿಲ್ಲ. ವರುಣಾದಲ್ಲಿ ಮಾತ್ರ ಪ್ರಯಾಸದ ಗೆಲುವು ಸಾಧಿಸಬಹುದು. ಟಿಪ್ಪು ಜಯಂತಿಗೆ ಹುಬ್ಬಳ್ಳಿಯ ಈದ್ಗಾ ಮೈದಾನ ಕೇಳುವುದು ತಪ್ಪು. ನಮ್ಮಲ್ಲಿ ಹಾರ ಹಾಕುವ ಪದ್ಧತಿ ಇಲ್ಲ. ಹಿಂದಿ ಹೇರಿಕೆಯನ್ನು ನಾನು ವಿರೋಧ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಹಿಂದೂ ಪದದ ಅರ್ಥವೇ ಅಶ್ಲೀಲ – ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್‌

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *