ನೀರಾವರಿ ಇಲಾಖೆಯಲ್ಲಿ ಹೆಚ್ಚು ಎಂಜಿನಿಯರ್‌ಗಳಿಲ್ಲ: ಸಿಎಸ್‌ಗೆ ಖಾರವಾದ ಪತ್ರ ಬರೆದಿದ್ದಕ್ಕೆ ಡಿಕೆಶಿ ಸಮರ್ಥನೆ

By
2 Min Read

ಬೆಂಗಳೂರು: ನೀರಾವರಿ ಇಲಾಖೆಯಲ್ಲಿ ಹೆಚ್ಚು ಎಂಜಿನಿಯರ್‌ಗಳಿಲ್ಲದ ಕಾರಣ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಜಲಸಂಪನ್ಮೂಲ ಇಲಾಖೆ ಎಂಜಿನಿಯರ್‌ಗಳ ವರ್ಗಾವಣೆ ಕುರಿತು ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಲಸಂಪನ್ಮೂಲ ಇಲಾಖೆಯಲ್ಲಿ ಹೆಚ್ಚು ಎಂಜಿನಿಯರ್‌ಗಳಿಲ್ಲ. ನಮಗೆ ತುರ್ತಾಗಿ ಇಂಜಿನಿಯರ್‌ಗಳು ಬೇಕು. ಹೀಗಾಗಿ ನಮ್ಮ ಇಲಾಖೆಯಿಂದ ಯಾರನ್ನೂ ಬೇರೆಡೆಗೆ ಕಳಿಸಬೇಡಿ ಎಂದು ಪತ್ರ ಬರೆದಿದ್ದೇನೆ. ನಮ್ಮ ಇಲಾಖೆಗೆ ಬಂದು ಬಡ್ತಿ ಪಡೆದು ನಂತರ ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಇತರ ಇಲಾಖೆಗಳಿಗೆ ವರ್ಗಾವಣೆ ಪಡೆಯುತ್ತಾರೆ ಎಂದು ಸ್ಪಷ್ಟನೆ ನೀಡಿದರು.ಇದನ್ನೂ ಓದಿ: ಸಿಎಂ Vs ಡಿಸಿಎಂ ಮಧ್ಯೆ ವರ್ಗಾವಣೆ ಸಂರ್ಘರ್ಷ – ನಿಜಕ್ಕೂ ಆಗಿದ್ದೇನು? ಡಿಕೆಶಿ ಆಕ್ಷೇಪ ಏಕೆ?

ನಿಮ್ಮ ಅನುಮತಿ ಇಲ್ಲದೆ ಯಾರು ವರ್ಗಾವಣೆ ಮಾಡಿದ್ದಾರೆ ಎಂದು ಕೇಳಿದಾಗ, ಉನ್ನತ ಮಟ್ಟದಲ್ಲಿ ಈ ರೀತಿ ವರ್ಗಾವಣೆ ಮಾಡಲು ಅವಕಾಶ ಇದೆ. ಅನೇಕ ಶಾಸಕರು ತಮಗೆ ಬೇಕಾದವರನ್ನು ಬೇರೆ ಇಲಾಖೆಗೆ ಕಳಿಸಿಕೊಡಿ ಎಂದು ಒತ್ತಡ ಹಾಕುತ್ತಾರೆ. ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡಲು ಎಂಜಿನಿಯರ್‌ಗಳು ಮುಂದೆ ಬರುತ್ತಿಲ್ಲ. ಈ ದೃಷ್ಟಿಯಿಂದ ನನ್ನ ಗಮನಕ್ಕೆ ತರದೇ ಯಾರನ್ನೂ ವರ್ಗಾವಣೆ ಮಾಡಬೇಡಿ ಎಂದು ಹೇಳಿದ್ದೇನೆ ಎಂದರು.

ಡಿಕೆಶಿ ಸಿಎಸ್‌ಗೆ ಬರೆದ ಪತ್ರದಲ್ಲಿ ಏನಿತ್ತು?
ನನ್ನ ಇಲಾಖೆಗೆ ಒಳಪಡುವ ವಿಭಾಗಗಳಿಗೆ ಸಂಬಂಧಿಸಿದಂತೆ ವರ್ಗಾವಣೆ, ನೇಮಕಾತಿ ಆದೇಶಕ್ಕೆ ನನ್ನ ಅನುಮತಿ ಬೇಕು. ಡಿಪಿಎಆರ್‌ನಿಂದ ಆದೇಶ ಹೊರಡಿಸಬೇಕಾದರೆ ನನ್ನ ಪೂರ್ವಾನುಮತಿ ಪಡೆದ ನಂತರವೇ ಹೊರಡಿಸಬೇಕು. ಈ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿಯೇ ಟಿಪ್ಪಣಿ ಮೂಲಕ ನಿಮಗೆ ತಿಳಿಸಲಾಗಿತ್ತು. ನಂತರ ಮುಖ್ಯ ಎಂಜಿನಿಯರ್‌ಗಳ ಕರ್ತವ್ಯಕ್ಕೆ ಸಂಬಂಧಿಸಿದ ಕಾರ್ಯವ್ಯಾಪ್ತಿಯನ್ನು ಜಲಸಂಪನ್ಮೂಲ ಇಲಾಖೆಯಿಂದ ಡಿಪಿಎಆರ್‌ಗೆ ವಹಿಸುವ ಕಡತದಲ್ಲಿಯೂ ಸೂಚನೆ ಕೊಡಲಾಗಿತ್ತು.

ನನ್ನ ಗಮನಕ್ಕೆ ತಂದು ನನ್ನ ಅನುಮೋದನೆ ಪಡೆದ ನಂತರವೇ ಡಿಪಿಎಆರ್‌ನಿಂದ ಆದೇಶ ಹೊರಡಿಸಬಹುದೆಂದು ಸ್ಪಷ್ಟವಾಗಿ ಸೂಚನೆ ನೀಡಿದ್ದೇನೆ. ಆದರೆ ಮೇ 9ರಂದು ಹೊರಡಿಸಿದ ಆದೇಶದಲ್ಲಿ ನನ್ನ ಅನುಮೋದನೆ ಪಡೆಯದೇ ಕೆಲವು ಮುಖ್ಯ ಎಂಜಿನಿಯರ್‌ಗಳನ್ನು ಜಲಸಂಪನ್ಮೂಲ ಇಲಾಖೆಗೆ ವರ್ಗಾವಣೆ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ.

ನನ್ನ ಸೂಚನೆಯನ್ನು ಕಡೆಗಣಿಸಿ ಆದೇಶ ಹೊರಡಿಸಿರುವುದನ್ನು ನಾನು ಆಕ್ಷೇಪಿಸುತ್ತಿದ್ದೇನೆ. ಆದ್ದರಿಂದ ಈ ಆದೇಶವನ್ನು ಕೂಡಲೇ ವಾಪಸು ಪಡೆಯಬೇಕು.ಇಂತಹ ವಿಚಾರಗಳ ಬಗ್ಗೆ ಯಾವುದೇ ಆದೇಶ ಹೊರಡಿಸಬೇಕಾದರೆ ನನ್ನ ಪೂರ್ವಾನುಮತಿ ಪಡೆಯಬೇಕು.ಇದನ್ನೂ ಓದಿ: ಸಿಎಂ Vs ಡಿಸಿಎಂ – ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ವರ್ಗ, ಡಿಕೆಶಿ ಕೆಂಡಾಮಂಡಲ

Share This Article