ಬಿಜೆಪಿ ತನ್ನ ‘ಉತ್ಪನ್ನ’ವನ್ನು ಚೆನ್ನಾಗಿ ಮಾರ್ಕೆಟ್ ಮಾಡಿದ್ದರಿಂದ ನಮಗೆ ಸೋಲು- ತರೂರ್

Public TV
2 Min Read

ತಿರುವನಂತಪುರಂ: ಬಿಜೆಪಿ ತನ್ನ ಪ್ರೊಡಕ್ಟ್ ನರೇಂದ್ರ ಮೋದಿಯನ್ನು ಚೆನ್ನಾಗಿ ಮಾರ್ಕೆಟ್ ಮಾಡಿದ್ದರಿಂದ ಕಾಂಗ್ರೆಸ್ಸಿಗೆ ಸೋಲಾಗಿದೆ ಎಂದು ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ಮಾಧ್ಯಮಕ್ಕೆ ಸಂದರ್ಶನ ನೀಡಿದ ಅವರು, ಸಾವಿರಾರು ಸಾಮಾಜಿಕ ಜಾಲತಾಣ ಸೈನಿಕರು, ಮಾಧ್ಯಮಗಳು ಕ್ಯಾಮೆರಾಮನ್‍ಗಳ ಪ್ರಚಾರದಿಂದ ಮೋದಿಗೆ ಈ ಚುನಾವಣೆಯಲ್ಲಿ ಗೆಲುವು ಸಿಕ್ಕಿದೆ ಎಂದು ತಿಳಿಸಿದರು.

ಸರ್ಕಾರದ ಯಾವುದೇ ಯೋಜನೆಯನ್ನು ಚೆನ್ನಾಗಿ ಮಾರ್ಕೆಟ್ ಮಾಡುವ ಕಲೆ ಬಿಜೆಪಿಯಲ್ಲಿದೆ. ಅದನ್ನು ಅವರು ಈ ಚುನಾವಣೆಯಲ್ಲೂ ಬಳಸಿಕೊಂಡರು. ನಾವು ವಾಸ್ತವಕ್ಕೆ ಹತ್ತಿರುವ ಇರುವ ಯೋಜನೆಯನ್ನು ತಂದಿದ್ದರೂ ನಮ್ಮ ಪ್ರಚಾರ ಯಶಸ್ವಿಯಾಗಲಿಲ್ಲ. ಅಷ್ಟೇ ಅಲ್ಲದೇ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಜನರ ಮನಸ್ಥಿತಿ ಏನು ಎನ್ನುವುದನ್ನು ಅರಿತುಕೊಳ್ಳಲು ವಿಫಲರಾದೆವು ಎಂದು ಕಾರಣ ನೀಡಿದರು.

ಕಾಂಗ್ರೆಸ್ ಪಕ್ಷದ ಹಿನ್ನಡೆ ಕುರಿತು ಕೇಳಲಾದ ಪ್ರಶ್ನೆಗೆ, 45 ವರ್ಷದಲ್ಲೇ ಅತಿ ಹೆಚ್ಚು ನಿರುದ್ಯೋಗ, ನೋಟು ನಿಷೇಧದಂತಹ ಗಂಭೀರ ವಿಚಾರಗಳಿದ್ದರೂ ನಾವು ಸೋತಿದ್ದು ಯಾಕೆ ಎನ್ನುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದರ ಜೊತೆಯಲ್ಲಿ ನಮ್ಮ ಪಕ್ಷದ ಒಳಗಡೆಯೇ ಹಲವು ಸಮಸ್ಯೆಗಳಿದ್ದು ಅವುಗಳನ್ನು ನಾವು ಪರಿಹರಿಸಿಕೊಳ್ಳಬೇಕು. ನಮ್ಮ ಪ್ರಣಾಳಿಕೆಯಲ್ಲಿ ನ್ಯಾಯ ಯೋಜನೆಯನ್ನು ಪ್ರಕಟಿಸಿದ್ದೆವು. ಇದೊಂದು ಕ್ರಾಂತಿಕಾರಕ ಯೋಜನೆಯಾಗಿದ್ದು ಇದನ್ನು ಜನರಿಗೆ ತಲುಪಿಸಲು ನಾವು ವಿಫಲರಾದೆವು ಎಂದು ತಿಳಿಸಿದರು.

ಈ ಚುನಾವಣೆಯ ಹಿನ್ನಡೆ ಕೇವಲ ತಾತ್ಕಾಲಿಕ. ಪಂಜಾಬ್ ಮತ್ತು ಕೇರಳದಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಸ್ಪರ್ಧೆ ನೀಡಬಹುದಾದ ಏಕೈಕ ರಾಷ್ಟ್ರೀಯ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರ. ಚುನಾವಣೆಯ ಸೋಲಿನ ಹೊಣೆಯನ್ನು ರಾಹುಲ್ ಗಾಂಧಿ ಹೊತ್ತಿದ್ದರೂ ನಾವು ಸಹ ಹೊಣೆಗಾರರು ಎಂದು ತಿಳಿಸಿದರು.

ಬಂಗಾಳ ಮತ್ತು ಒಡಿಶಾದಲ್ಲಿ ಜಯಗಳಿಸಿದ ಬಳಿಕ ಮುಂದಿನ ನಮ್ಮ ಗುರಿ ಕೇರಳ ಎಂದು ಬಿಜೆಪಿ ಹೇಳಿದೆ. ಬಿಜೆಪಿ ಈ ಗುರಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಕ್ಕೆ, ಕೇರಳದಲ್ಲಿ ಬಿಜೆಪಿಯ ಈ ಕೋಮುವಾದದ ತಂತ್ರ ನಡೆಯುವುದಿಲ್ಲ ಎನ್ನುವ ವಿಶ್ವಾಸ ನನಗಿದೆ. ಆರ್ಥಿಕ ಶಕ್ತಿ, ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ಇದ್ದರೂ ನಾನು ಪ್ರತಿನಿಧಿಸುವ ತಿರುವನಂತಪುರಂದಲ್ಲಿ ಸ್ವಲ್ಪ ಮತವನ್ನು ಬಿಜೆಪಿ ಏರಿಸಿಕೊಂಡಿದೆ. ಬಿಜೆಪಿಯ ಎಲ್ಲ ಅಭ್ಯರ್ಥಿಗಳು ಮೂರನೇ ಸ್ಥಾನ ಪಡೆದಿದ್ದಾರೆ. ಕಾಸ್ಮೋಪಾಲಿಟನ್ ರಾಜ್ಯ ಮತ್ತು ಸಾಕ್ಷರರ ಸಂಖ್ಯೆ ಜಾಸ್ತಿ ಇರುವ ಕಾರಣ ಕೇರಳದಲ್ಲಿ ಬಿಜೆಪಿಯ ತಂತ್ರಗಳು ಕೆಲಸ ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟರು.

Share This Article
Leave a Comment

Leave a Reply

Your email address will not be published. Required fields are marked *