ಸಿನಿಮಾ ಸ್ಟೈಲ್‍ನಲ್ಲಿ ಬ್ರ್ಯಾಂಡೆಡ್ ಶೂಗಳ ಕಳ್ಳತನ

Public TV
2 Min Read

ಆನೇಕಲ್: ಕೋಟಿ ಮೌಲ್ಯದ ಬ್ರಾಂಡೆಡ್ ಶೂಗಳು. ಅವುಗಳನ್ನು ತುಂಬಿದ್ದ ಈಚರ್ ವಾಹನ ಸಮೇತ ಸಿನಿಮಾ ಸ್ಟೈಲ್‍ನಲ್ಲಿ ಕಳ್ಳತನ ಮಾಡಲಾಗಿತ್ತು. ಸಣ್ಣ ಸುಳಿವು ನೀಡದೇ ಕಾಸ್ಲ್ಟಿ ಶೂಗಳನ್ನು ಕದ್ದಿದ್ದ ಖದೀಮರನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಸುಭಾನ್ ಪಾಷಾ, ಮನ್ಸರ್ ಅಲಿ ಮತ್ತು ಶಹಿದ್ದುಲ್ ರೆಹಮಾನ್ ಬಂಧಿತರು. ಇದೀಗ ಇವರು ಬ್ರಾಂಡೆಡ್ ನೈಕಿ ಶೂಗಳನ್ನು ಕದ್ದು ಜೈಲು ಪಾಲಾಗಿದ್ದಾರೆ. ಕಳೆದ ತಿಂಗಳು 21 ರಂದು ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ಶೆಟ್ಟಿಹಳ್ಳಿ ಬಳಿಯ ನೈಕಿ ಗೋದಾಮಿನಿಂದ ಹೊಸಕೋಟೆ ಬಳಿಯ ಮಿಂತ್ರ ಗೋದಾಮಿಗೆ ಹೊರಟಿದ್ದ ಶೂ ಹೊತ್ತ ಈಚರ್ ವಾಹನ ಕಾಣೆಯಾಗಿತ್ತು. ಸುಮಾರು ಒಂದು ಕೋಟಿ ಹತ್ತು ಲಕ್ಷ ಮೌಲ್ಯದ 1,558 ಜೊತೆ ಶೂ ಸಹಿತ ಈಚರ್ ವಾಹನ ಕಳುವಾದ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ನಾಪತ್ತೆಯಾದ ಈಚರ್ ವಾಹನ ಚಾಲಕನ ಹಿಸ್ಟರಿ ಚೆಕ್ ಮಾಡಿದ್ದಾರೆ. ಆತ ಈ ಹಿಂದೆ ಕಾಸ್ಟ್ಲಿ ಬೆಲೆಯ ಬ್ರಾಂಡೆಡ್ ಬಟ್ಟೆಗಳನ್ನು ಇದೇ ರೀತಿ ವಾಹನ ಸಮೇತ ಕದ್ದು, ಜೈಲು ಸೇರಿದ್ದ ಎಂಬ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಶೂಗಳ ಜೊತೆ ಅಸ್ಸಾಂ ಮೂಲದ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆನೇಕಲ್ ಗೋದಾಮಿನಿಂದ ಶೂಗಳನ್ನು ತುಂಬಿಕೊಂಡ ಹೊರಟ ವಾಹನವನ್ನು ಹೊಸಕೋಟೆ ಬದಲು ನಗರದ ರಜಾಕ್ ಪಾಳ್ಯಕ್ಕೆ ಕದ್ದೊಯ್ದಿದ್ದಾರೆ. ಅಲ್ಲಿನ ಮನೆಯೊಂದರಲ್ಲಿ ಅನ್ ಲೋಡ್ ಮಾಡಿದ ಅಸಾಮಿಗಳು ಈಚರ್ ವಾಹನವನ್ನು ಚಿಕ್ಕಜಾಲದ ಬಳಿ ಬಿಟ್ಟು ಪರಾರಿಯಾಗಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಸತ್ತೇ ಹೋದೆ ಅಂದ್ಕೊಂಡೆ – ಅವಘಡಕ್ಕೀಡಾದ ವಿಮಾನದೊಳಗಿದ್ದ ಪ್ರಯಾಣಿಕ

ಈ ನಡುವೆ ಅತ್ತಿಬೆಲೆ ಪೊಲೀಸರ ಹೊಸೂರು ಮುಖ್ಯರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ಸಾಗುತ್ತಿದ್ದ 407 ವಾಹನವನ್ನು ಅಡ್ಡಗಟ್ಟಿದಾಗ ನಿಲ್ಲಿಸದೇ ಮುಂದೆ ಸಾಗಿದ್ದಾರೆ. ಪೊಲೀಸರು ಚೇಸ್ ಮಾಡುತ್ತಿದ್ದಂತೆ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಪರಿಶೀಲನೆ ವೇಳೆ ಕಂಚಿನ ದೇವರ ವಿಗ್ರಹ, ಕಳಶ ದೀಪದ ಕಂಬಗಳು ಪತ್ತೆಯಾಗಿದ್ದು, ತನಿಖೆ ವೇಳೆ ತಮಿಳುನಾಡಿನ ಹೊಸೂರಿನ ಅಂಗಡಿಯೊಂದರಲ್ಲಿ ಕದ್ದ ವಸ್ತುಗಳು ಎಂದು ತಿಳಿದು ಬಂದಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಒಟ್ಟಿನಲ್ಲಿ ಸಣ್ಣ ಸುಳಿವು ನೀಡದೇ ಪಕ್ಕಾ ಸಿನಿಮಾ ಸ್ಟೈಲ್ ನಲ್ಲಿ ಬ್ರಾಂಡೆಡ್ ನೈಕಿ ಶೂಗಳನ್ನು ಎಗರಿಸಿದ್ದವರಲ್ಲಿ ಪ್ರಮುಖ ಆರೋಪಿ ಸಲೇ ಮಹಮದ್ ಲಷ್ಕರ್ ತಲೆ ಮರೆಸಿಕೊಂಡಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ಅತ್ತಿಬೆಲೆ ಪೊಲೀಸರು ಬಲೆ ಬೀಸಿದ್ದಾರೆ.

Share This Article