ಜನರ ಮೇಲೆ ಹೊಗೆ ಪ್ರಯೋಗಿಸಿ ಕಳ್ಳತನ- ಕಳ್ಳರಿಗೆ ತಾನಾಗಿಯೇ ಚಿನ್ನ, ಹಣ ತಂದುಕೊಟ್ಟ ಮಹಿಳೆ!

Public TV
1 Min Read

ಉಡುಪಿ: ಜಿಲ್ಲೆಯ ಕಾಪು ತಾಲೂಕಿನಲ್ಲಿ ಮೂವರು ನಕಲಿ ಫಕೀರರು ಬಂದು ಮಹಿಳೆ ಮೇಲೆ ಧೂಪ ಮಿಶ್ರಿತ ಹೊಗೆಯನ್ನು ಪ್ರಯೋಗಿಸಿ ಅವರಿಂದ ಚಿನ್ನಾಭರಣವನ್ನು ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ಬೆಲ್ ಬಾಟಂ ಚಿತ್ರದ ರೀತಿಯಲ್ಲೇ ಕಳ್ಳತನ ಮಾಡಲಾಗಿದೆ.

ನಟ ರಿಷಬ್ ಶೆಟ್ಟಿ ಅಭಿನಯದ ಬೆಲ್ ಬಾಟಂ ಚಿತ್ರದಂತೆ ಫಕೀರರ ವೇಷ ಧರಿಸಿ ಬಂದ ಮೂವರು ಕಳ್ಳರು, ನಗದನ್ನು ಎಗರಿಸಿ ಪರಾರಿಯಾಗಿದ್ದಾರೆ. ಕಟಪಾಡಿ ಏಣಗುಡ್ಡೆ ಗ್ರಾಮದ ಮುಸ್ಲಿಂ ಸಮುದಾಯದ ಮನೆಯೊಂದಕ್ಕೆ ಆಗಮಿಸಿದ ಮೂವರು, ಸುತ್ತಮುತ್ತಲ ಮನೆಗಳಿಗೆ ಭೇಟಿ ನೀಡಿದರು. ಮನೆಯೊಂದಕ್ಕೆ ತೆರಳಿದ ಮೂರು ಮಂದಿ ನಕಲಿ ಫಕೀರ ವೇಷಧಾರಿಗಳು ಮನೆಯ ಸುತ್ತಲೂ ಓಡಾಡಿ ತಮ್ಮ ಹಾಡಿನ ಮೂಲಕ ಮನೆ ಮಂದಿ ಹೊರಬರುವಂತೆ ಮಾಡಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಮನೆಗೆ ಕಳುಹಿಸದ ಅತ್ತೆಗೆ ಬ್ಲೇಡ್‌ನಿಂದ ಹಲ್ಲೆ ಮಾಡಿದ ಅಳಿಯ

ಹೊರ ಬಂದ ಮನೆಯ ಮಹಿಳೆಯ ಮೇಲೆ ಬೂದಿ ಮಿಶ್ರಿತ ಹೊಗೆಯನ್ನು ಪ್ರಯೋಗಿಸಿದ್ದಾರೆ. ಈ ಸಂದರ್ಭ ಮಹಿಳೆ ತನ್ನ ಮೈಮೇಲಿನ ಚಿನ್ನಾಭರಣ ಮತ್ತು ಮನೆಯೊಳಗಿನಿಂದ ನಗದನ್ನು ತಂದು ಕೊಟ್ಟು ಫಕೀರರ ಜೋಳಿಗೆಯನ್ನು ತುಂಬಿಸಿದ್ದಾರೆ. ಮಹಿಳೆಯಿಂದ ಚಿನ್ನಾಭರಣ ಮತ್ತು ನಗದು ಪಡೆದ ಬಳಿಕ ಫಕೀರರು ಸ್ಥಳದಿಂದ ಕಾಲ್ಕಿತ್ತಿದ್ದು, ಮಹಿಳೆ ಎಚ್ಚರಗೊಂಡಾಗ ತಾನು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.

ವೇಷಧಾರಿ ನಕಲಿ ಫಕೀರರ ಜೋಳಿಗೆಯನ್ನು ತಾನಾಗಿಯೇ ತುಂಬಿರುವುದಾಗಿ ಮಹಿಳೆ ಮಾಹಿತಿ ನೀಡಿದ್ದಾಳೆ. ಮನೆಗೆ ಬಂದ ಫಕೀರರು ಮನೆಯಂಗಳದಲ್ಲಿ ಓಡಾಡಿದ ಮತ್ತು ಪೇಟೆಯಲ್ಲಿ ನಡೆದಾಡಿದ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಟಪಾಡಿ ಭಾಗದಿಂದ ಉಡುಪಿ ಕಡೆಗೆ ಮೂವರು ತೆರಳಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಶುರುವಾಗಿದೆ ಹೈಟೆಕ್ ಡ್ರಗ್ಸ್ ಪೆಡ್ಲಿಂಗ್

ಆ ವೀಡಿಯೋಗಳನ್ನು ವೈರಲ್ ಮಾಡಲಾಗಿದೆ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರು ಆರೋಪಿಗಳನ್ನು ಕಂಡಲ್ಲಿ ಮಾಹಿತಿ ನೀಡುವಂತೆ ಪೊಲೀಸರು ವಿನಂತಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದ್ದು, ಅಪರಿಚಿತರ ಬಗ್ಗೆ ಜಾಗರೂಕತೆ ವಹಿಸುವಂತೆ ಜನಜಾಗೃತಿ ಮೂಡಿಸಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *