ತಲಕಾವೇರಿಯಲ್ಲಿ ಇಂದು ಪವಿತ್ರ ತೀರ್ಥೋದ್ಭವ

Public TV
2 Min Read

ಮಡಿಕೇರಿ: ಜೀವನದಿ ತಲಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಇಂದು ಮಧ್ಯಾಹ್ನ 12.33 ನಿಮಿಷಕ್ಕೆ ತೀರ್ಥೋದ್ಭವವಾಗಲಿದೆ. ಒಂದು ತಿಂಗಳ ಕಾಲ ನಡೆಯುವ ಈ ಕಾವೇರಿ ತುಲಾಸಂಕ್ರಮಣ ಜಾತ್ರೆಗೆ ಜಿಲ್ಲಾಡಳಿತ ಸಕಲಸಿದ್ಧತೆ ಮಾಡಿಕೊಂಡಿದ್ದು, ಸಹಸ್ರಾರು ಭಕ್ತರು ತೀರ್ಥಸ್ವರೂಪಿಣಿ ಕಾವೇರಿ ಮಾತೆಯನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

ಕೊಡವರ ಕುಲದೇವತೆ ಕರ್ನಾಟಕದ ಜೀವನದಿ ಕಾವೇರಿಯ ತೀರ್ಥೋದ್ಭವಕ್ಕೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಇದಕ್ಕಾಗಿ ಜಿಲ್ಲಾಡಳಿತ ಕೂಡ ತಯಾರಿ ಮಾಡಿದೆ. ವರ್ಷಕ್ಕೊಮ್ಮೆ ಘಟಿಸುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಆದ್ದರಿಂದ ತಲಕಾವೇರಿ ಹಾಗೂ ತ್ರಿವೇಣಿ ಸಂಗಮ ಭಾಗಮಂಡಲ ಸಕಲ ರೀತಿಯಲ್ಲಿ ಸಿದ್ಧವಾಗಿದೆ. ಇಂದು ಮಧ್ಯಾಹ್ನ 12.33 ನಿಮಿಷಕ್ಕೆ ತುಲಾ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಜರುಗಲಿದ್ದು, ಬ್ರಹ್ಮ ಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿ ಬರುತ್ತದೆ ಎಂದು ದೇವಾಲಯದ ಮುಖ್ಯಸ್ಥ ಮೋಟ್ಟಯ್ಯ ಹೇಳಿದ್ದಾರೆ.

ಬ್ರಹ್ಮಗಿರಿಯ ಮಡಿಲಿನಲ್ಲಿ ಹುಟ್ಟುವ ಕಾವೇರಿಮಾತೆ ರಾಜ್ಯದಲ್ಲಿ ಹರಿದು ರೈತರ ಹೊಲಗದ್ದೆಗಳನ್ನು ಹಸಿರಾಗಿಸಿ, ಅನ್ನದಾತೆಯಾಗಿ ಹರಿಯುತ್ತಾಳೆ. ಹಾಗಾಗಿ ಕಾವೇರಿ ನೀರನ್ನು ಬಳಸುವ ಮಂಡ್ಯ, ಮೈಸೂರು, ಬೆಂಗಳೂರು, ಹಾಸನ ಜಿಲ್ಲೆಗಳಿಂದ ಸೇರಿದಂತೆ ತಮಿಳುನಾಡು, ಕೇರಳಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಅಲ್ಲಿ ಭಗಂಡೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ಕಾವೇರಿ ಮಾತೆಯ ದರ್ಶನ ಪಡೆಯುತ್ತಾರೆ.

ತೀರ್ಥೋದ್ಭವವಾಗುತ್ತಿದ್ದಂತೆ ಮುಗಿಬೀಳುವ ಜನರು ತೀರ್ಥವನ್ನು ಸಂಗ್ರಹಿಸಿ ಮನೆಗೆ ಕೊಂಡೊಯ್ಯುತ್ತಾರೆ. ಈ ಬಾರಿ ಪ್ರಾತಃಕಾಲದಲ್ಲಿ ತೀರ್ಥೋದ್ಭವ ಸಂಭವಿಸುತ್ತಿದ್ದು, ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸೋ ನಿರೀಕ್ಷೆಯಿದೆ. ಸೋಮವಾರದಿಂದಲೇ ಭಕ್ತರ ದಂಡು ತಲಕಾವೇರಿಯತ್ತ ಆಗಮಿಸಿದ್ದು. ದೂರದಿಂದಲೇ ಲೈಟಿಂಗ್ ವ್ಯವಸ್ಥೆಗಾಗಿ 500ಕ್ಕೂ ಹೆಚ್ಚು ಟ್ಯೂಬ್ ಲೈಟ್‍ಗಳು, ತಾತ್ಕಾಲಿಕ ಶೌಚಾಲಯ, ಅನ್ನದಾನಕ್ಕೆ ವ್ಯವಸ್ಥೆ, ಭದ್ರತೆಗಾಗಿ 700 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಕಾವೇರಿ ಮಾತೆಯ ದರ್ಶನಕ್ಕೆ ಸಹಸ್ರ ಸಹಸ್ರ ಭಕ್ತರು ಲಗ್ಗೆಯಿಡುತ್ತಿದ್ದು, ಯಾವುದೇ ರೀತಿಯಲ್ಲಿ ನೂಕು ನುಗ್ಗಲು ಉಂಟಾಗದಂತೆ ಏಕಮುಖ ಸಂಚಾರದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ತೀರ್ಥ ಸ್ವರೂಪಿಣಿಯಾದ ಕಾವೇರಿಮಾತೆಯ ದರ್ಶನಕ್ಕಾಗಿ ಭಕ್ತರು ಕಾಯುತ್ತಿದ್ದು, ಒಂದು ತಿಂಗಳ ಜಾತ್ರೆಗೆ ಜಿಲ್ಲಾಡಳಿತ ಕೂಡ ಸಜ್ಜಾಗಿದೆ ಎಂದು ಪ್ರದಾನ ಅರ್ಚಕ ಶಂಕರ್ ಅವರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *