ಮದ್ಯ ಸೇವಿಸಿದ್ದಕ್ಕೆ ಪ್ರಿಯತಮೆ ಕಿರಿಕ್ – ಮನನೊಂದು ಯುವಕ ನೇಣಿಗೆ ಶರಣು

Public TV
1 Min Read

ಬಾಗಲಕೋಟೆ: ಮದ್ಯ ಸೇವಿಸಿದ ವಿಚಾರಕ್ಕೆ ಪ್ರಿಯಕರ ಹಾಗೂ ಪ್ರಿಯತಮೆ ನಡುವೆ ಗಲಾಟೆಯಾಗಿ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೀಳಗಿ (Bilagi) ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನು ಅಜಯ್ (24) ಎಂದು ಗುರುತಿಸಲಾಗಿದೆ. ಅಜಯ್ ಪ್ರೇಯಸಿ ಅನು ಜೊತೆ ಸ್ನೇಹಿತನ ಊರಾದ ನಿಂಗಾಪುರಕ್ಕೆ ತೆರಳಿದ್ದ. ಈ ವೇಳೆ ಸ್ನೇಹಿತ ನವೀನ್ ಎಂಬಾತನ ಜೊತೆ ಸೇರಿ ಅಜಯ್ ಮದ್ಯ ಸೇವಿಸಿದ್ದ. ಈ ವಿಚಾರಕ್ಕೆ ಪ್ರೇಯಸಿ ಕೋಪಗೊಂಡಿದ್ದಾಳೆ. ಬಳಿಕ ಅಲ್ಲಿಂದ ಊರಿಗೆ ಬಿಟ್ಟು ಬರುವಂತೆ ಪಟ್ಟು ಹಿಡಿದು, ನವೀನ್ ಜೊತೆ ಬೈಕಲ್ಲಿ ತೆರಳಿದ್ದಳು.

ನವೀನ್ ಅನುವನ್ನು ಬೈಕ್‌ನಲ್ಲಿ  (Bike) ಕರೆದೊಯ್ಯುತ್ತಿದ್ದ ವೇಳೆ, ನನ್ನ ಬಿಟ್ಟು ಹೊರಟರೆ ನೇಣು ಹಾಕಿಕೊಂಡು ಸಾಯುವುದಾಗಿ ಅಜಯ್ ವಿಡಿಯೋ ಕಾಲ್ ಮಾಡಿದ್ದ. ಬಳಿಕ ಅನು ಹಾಗೂ ನವೀನ್ ವಾಪಸ್ ಬರುವಷ್ಟರಲ್ಲಿ ಆತ ನೇಣು ಹಾಕಿಕೊಂಡಿದ್ದ. ನೇಣು ಬಿಡಿಸಿ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಅಜಯ್ ಸಾವನ್ನಪ್ಪಿದ್ದಾನೆ. ಬಳಿಕ ನವೀನ್ ತನ್ನ ಮೇಲೆ ಆಪಾದನೆ ಬರುತ್ತದೆ ಎಂದು ಅನು ಹಾಗೂ ಶವವನ್ನು ಬಿಟ್ಟು ಓಡಿ ಹೋಗಿದ್ದ.

ಈ ಸಂಬಂಧ, ಬೀಳಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article