ಸೇರ್ಪಡೆಯಾಗಿ 2 ವರ್ಷದ ನಂತ್ರ ಯುನೆಸ್ಕೋದಿಂದ ಹೊರ ಬಂದ ಅಮೆರಿಕ

Public TV
2 Min Read

ವಾಷಿಂಗ್ಟನ್‌: ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ (USA) ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ಯುನೆಸ್ಕೋದಿಂದ (UNESCO) ಹೊರ ಬಂದಿದೆ.

ಡೊನಾಲ್ಡ್‌ ಟ್ರಂಪ್‌ ಮೊದಲಿನಿಂದಲೂ ಯುನೆಸ್ಕೋ ನಡೆಯನ್ನು ಟೀಕಿಸುತ್ತಾ ಬಂದಿದ್ದರು. ಯುನೆಸ್ಕೋ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಇಲ್ಲ ಮತ್ತು ಇಸ್ರೇಲ್ (Isreal) ವಿರೋಧಿ ಧೋರಣೆ,  ಚೀನಾ ಪರ ನೀತಿಯಿಂದ  ನಾವು ಹೊರ ಬಂದಿದ್ದೇವೆ ಎಂದು ಅಮೆರಿಕ ಹೇಳಿದೆ.

ಡೊನಾಲ್ಡ್ ಟ್ರಂಪ್ (Donald Trump) ಅವರ ಮೊದಲ ಆಡಳಿತದ ಅವಧಿಯಲ್ಲಿ ಅಮೆರಿಕ 2018 ರಲ್ಲಿ ಯುನೆಸ್ಕೋದಿಂದ ಹೊರ ಬಂದಿತ್ತು. ಜುಲೈ 2023 ರ ಬೈಡನ್‌ ಅವಧಿಯಲ್ಲಿ ಮತ್ತೆ ಯುನೆಸ್ಕೋವನ್ನು ಅಮೆರಿಕ ಸೇರಿತ್ತು.

ವಿದೇಶಾಂಗ ಇಲಾಖೆಯ ವಕ್ತಾರ ಟ್ಯಾಮಿ ಬ್ರೂಸ್ ಪ್ರತಿಕ್ರಿಯಿಸಿ, ಪ್ಯಾಲೆಸ್ಟೈನ್‌ನ್ನು ಸದಸ್ಯ ರಾಷ್ಟ್ರವಾಗಿ ಒಪ್ಪಿಕೊಳ್ಳುವ ಯುನೆಸ್ಕೋದ ನಿರ್ಧಾರವು ಹೆಚ್ಚು ಸಮಸ್ಯಾತ್ಮಕವಾಗಿದೆ ಮತ್ತು ಇದು ಅಮೆರಿಕದ ನೀತಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶದ ವಾಯುಪಡೆ ವಿಮಾನ ದುರಂತ ಸಾವಿನ ಸಂಖ್ಯೆ 27ಕ್ಕೆ ಏರಿಕೆ

ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO), UN ಮಾನವ ಹಕ್ಕುಗಳ ಮಂಡಳಿ, ಪ್ಯಾರಿಸ್ ಹವಾಮಾನ ಒಪ್ಪಂದ ಮತ್ತು ಇರಾನ್ ಪರಮಾಣು ಒಪ್ಪಂದ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಅಮೆರಿಕ ಹೊರಬಂದಿತ್ತು. ಎರಡನೇ ಅವಧಿಯಲ್ಲಿ ಟ್ರಂಪ್‌ ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಂದೆ ಸರಿಯುವಂತೆ ಆದೇಶಿಸಿದ್ದಾರೆ ಮತ್ತು ಪ್ಯಾಲೆಸ್ಟೀನಿಯನ್ ಪರಿಹಾರ ಸಂಸ್ಥೆ UNRWA ಗೆ ಹಣವನ್ನು ನಿಲ್ಲಿಸಿದ್ದಾರೆ.

1945 ರಲ್ಲಿ ರಚನೆಯಾದ ಯುನೆಸ್ಕೋದ ಸ್ಥಾಪಕ ಸದಸ್ಯ ರಾಷ್ಟ್ರವಾಗಿರುವ ಅಮೆರಿಕ ಯುನೆಸ್ಕೋದ ಒಟ್ಟು ಬಜೆಟ್‌ನ ಸುಮಾರು 8% ರಷ್ಟು ಕೊಡುಗೆ ನೀಡುತ್ತದೆ. ಪ್ಯಾರಿಸ್‌ನಲ್ಲಿ ನೆಲೆಗೊಂಡಿರುವ ಯುನೆಸ್ಕೋವನ್ನು ಅಮೆರಿಕ ತೊರೆದಿರುವುದು ಇದು ಮೂರನೇ ಬಾರಿ. ಇದನ್ನೂ ಓದಿ: ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ ವರದಕ್ಷಿಣೆ ಕಿರುಕುಳ ಆರೋಪ

ಹಣಕಾಸಿನ ದುರುಪಯೋಗ ಮತ್ತು ಅದು ಅಮೇರಿಕನ್ ವಿರೋಧಿ ಪಕ್ಷಪಾತವೆಂದು ಪರಿಗಣಿಸಿದ ಬಗ್ಗೆ ಕಳವಳ ವ್ಯಕ್ತಪಡಿಸಿ 1984 ರಲ್ಲಿ ರೇಗನ್‌ ಅವಧಿಯಲ್ಲಿ ಮೊದಲು ಹಿಂದೆ ಸರಿಯಿತು. ಸುಧಾರಣೆಗಳನ್ನು ಮಾಡಿದ ನಂತರ 2003 ರಲ್ಲಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ನೇತೃತ್ವದಲ್ಲಿ ಅಮೆರಿಕ ಮತ್ತೆ ಯುನೆಸ್ಕೋವನ್ನು ಸೇರ್ಪಡೆಯಾಗಿತ್ತು.

Share This Article