ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ಕ್ಯಾಬಿನೆಟ್ ಒಪ್ಪಿಗೆ – ಏನಿದು ಎನ್‍ಪಿಆರ್? ಏನು ದಾಖಲೆ ನೀಡಬೇಕು?

Public TV
2 Min Read

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಯಶಸ್ವಿಯಾಗಿ ಪಾಸ್ ಮಾಡಿರುವ ಕೇಂದ್ರ ಸರ್ಕಾರ ಈಗ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‍ಪಿಆರ್) ಜಾರಿ ಮಾಡಲು ಮುಂದಾಗುತ್ತಿದೆ.

ಇಂದು ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ದೇಶಾದ್ಯಂತ ಎನ್‍ಪಿಆರ್ ನಡೆಸಲು ಒಪ್ಪಿಗೆ ನೀಡಿದ್ದು ಇದಕ್ಕಾಗಿ 8,700 ಕೋಟಿ ರೂ. ಅನುದಾನಕ್ಕೂ ಅನುಮೋದನೆ ನೀಡಿದೆ.

ಏಪ್ರಿಲ್ 1, 2020ರಿಂದ ಸೆಪ್ಟೆಂಬರ್ 20, 2020ರವರೆಗೆ ಎನ್‍ಪಿಆರ್ ಪ್ರಕ್ರಿಯೆ ನಡೆಯಲಿದೆ. ದೇಶದ ಪ್ರತಿ ಮನೆಗೂ ಗಣತಿದಾರರು ಮೊಬೈಲ್ ಅಪ್ಲಿಕೇಶನ್ ನಲ್ಲಿ ದೇಶದ ನಿವಾಸಿಗಳ ಗುರುತಿನ ಡೇಟಾವನ್ನು ಸಂಗ್ರಹಿಸಲಿದ್ದಾರೆ.

ಯುಪಿಎ ಎರಡನೇ ಅವಧಿಯಾದ 2010ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಎನ್‍ಪಿಆರ್ ಆರಂಭಿಸಿತ್ತು. ಅಂದಿನ ಗೃಹ ಸಚಿವ ಪಿ. ಚಿದಂಬರಂ ಅವರು ಎನ್‍ಪಿಆರ್ ಆರಂಭಿಸಿ ಕರಾವಳಿಯಲ್ಲಿ ನೆಲೆಸಿರುವ ಜನರ ದತ್ತಾಂಶ ಸಂಗ್ರಹಕ್ಕೆ ನಿರ್ಧರಿಸಿದ್ದರು. ಆದರೆ ನಂತರ ಈ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಈಗ ಕೇಂದ್ರ ಸರ್ಕಾರ ಮತ್ತೆ ಚಾಲನೆ ನೀಡಿ ದೇಶವ್ಯಾಪಿ ನಡೆಸಲು ಮುಂದಾಗುತ್ತಿದೆ.

ಏನಿದು ಎನ್‍ಪಿಆರ್?
ದೇಶದ ಜನಗಣತಿಗೆ ಪೂರಕವಾದ ಪ್ರಕ್ರಿಯೆಯೇ ಎನ್‍ಪಿಆರ್. 1955ರ ಪೌರತ್ವ ಕಾಯ್ದೆ ಮತ್ತು 2003ರ ಪೌರತ್ವ ನಿಯಮದ ಅಡಿಯಲ್ಲಿ ಈ ಗಣತಿ ನಡೆಯಲಿದೆ. ದೇಶದ ಯಾವುದೇ ಪ್ರದೇಶದಲ್ಲಿ 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಅವಧಿ ವಾಸವಾಗಿರುವವರು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ದೇಶದ ಪ್ರತಿ ಪ್ರಜೆಯ ಸಮಗ್ರ ಗುರುತಿನ ದತ್ತಾಂಶಗಳನ್ನು ಸೃಷ್ಟಿಸಲು ಈ ಎನ್‍ಪಿಆರ್ ಪ್ರಕ್ರಿಯೆ ನಡೆಸಲಾಗುತ್ತದೆ.

ಏನು ಸಂಗ್ರಹಿಸಲಾಗುತ್ತದೆ?
ಈ ದತ್ತಾಂಶ ಸಂಗ್ರಹದಲ್ಲಿ ಆಧಾರ್(ಆಧಾರ್ ಮಾಹಿತಿ ಕಡ್ಡಾಯವಲ್ಲ), ಮೊಬೈಲ್ ನಂಬರ್, ಪಾನ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಪಾಸ್ ಪೋರ್ಟ್ ನಂಬರ್ ಸಂಗ್ರಹಿಸಲಾಗುತ್ತದೆ.

ಏನೇನು ವಿವರ ಕೇಳಲಾಗುತ್ತದೆ?
ಹೆಸರು, ಮನೆಯ ಯಜಮಾನನ ಜೊತೆ ಇರುವ ಸಂಬಂಧ, ತಂದೆಯ ಹೆಸರು, ತಾಯಿಯ ಹೆಸರು, ಸಂಗಾತಿಯ ಹೆಸರು(ಮದುವೆಯಾಗಿದ್ದಲ್ಲಿ), ಲಿಂಗ, ಹುಟ್ಟಿದ ದಿನಾಂಕ, ವೈವಾಹಿಕ ಸ್ಥಿತಿ, ರಾಷ್ಟ್ರೀಯತೆ, ವ್ಯಕ್ತಿಯ ಪ್ರಸ್ತುತ ವಿಳಾಸ, ಶಾಶ್ವತ ವಿಳಾಸ, ಶೈಕ್ಷಣಿಕ ಅರ್ಹತೆ, ಉದ್ಯೋಗದ ವಿವರವನ್ನು ನೀಡಬೇಕಾಗುತ್ತದೆ.

ಕೆಲ ರಾಜ್ಯಗಳು ಒಪ್ಪುತ್ತಿಲ್ಲ:
ಕೇಂದ್ರ ಸರ್ಕಾರದ ಎನ್‍ಪಿಆರ್ ಜಾರಿ ಮಾಡಲು ಬಿಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಈಗಾಗಲೇ ಹೇಳಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ಅನುಮೋದನೆ ಇಲ್ಲದೇ ಎನ್‍ಪಿಆರ್ ರಾಜ್ಯದಲ್ಲಿ ಜಾರಿ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ರಾಷ್ಟ್ರದ ಪ್ರಜೆಯ ದತ್ತಾಂಶ ಸಂಗ್ರಹಕ್ಕೆ ನಾವು ಒಪ್ಪಿಗೆ ನೀಡುವುದಿಲ್ಲ ಎಂದು ಕೇರಳ ಮತ್ತು ರಾಜಸ್ಥಾನ ಸರ್ಕಾರ ಪ್ರಕಟಿಸಿದೆ.

ಅಸ್ಸಾಂನಲ್ಲಿ ಇಲ್ಲ:
ಅಸ್ಸಾಂನಲ್ಲಿ ಈಗಾಗಲೇ ರಾಷ್ಟ್ರೀಯ ಪೌರತ್ವ ನೋಂದಣಿ ನಡೆದ ಹಿನ್ನೆಲೆಯಲ್ಲಿ ಈ ರಾಜ್ಯವನ್ನು ಬಿಟ್ಟು ಉಳಿದ ರಾಜ್ಯಗಳಲ್ಲಿ ಎನ್‍ಪಿಆರ್ ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ.

ಯಾಕೆ ಡೇಟಾ ಸಂಗ್ರಹ?
ಎನ್‍ಪಿಆರ್ ಡೇಟಾದ ಡೇಟಾಬೇಸ್ ಸುರಕ್ಷಿತವಾಗಿದ್ದು ಆಯ್ದ ಕೆಲ ಮಂದಿಗೆ ಮಾತ್ರ ಈ ಡೇಟಾ ಬಳಕೆ ಮಾಡಲು ಅನುಮತಿ ನೀಡಲಾಗುತ್ತದೆ. ಸರ್ಕಾರಿ ಯೋಜನೆ ದುರುಪಯೋಗ ತಪ್ಪಿಸಲು ಮತ್ತು ಆಂತರಿಕ ಭದ್ರತೆಗಾಗಿ ಈ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮಾಡಲಾಗುತ್ತದೆ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಎನ್‌ಅರ್‌ಸಿಗೂ ಎನ್‌ಪಿಆರ್‌ಗೂ ಸಂಬಂಧವಿಲ್ಲ?
ಎನ್‌ಪಿಆರ್‌ಗೂ ರಾಷ್ಟ್ರೀಯ ನಾಗರಿಕ ನೋಂದಣಿಗೂ (ಎನ್‌ಆರ್‌ಸಿ) ಯಾವುದೇ ಸಂಬಂಧವಿಲ್ಲ. ದೇಶದ ನಿಜವಾದ ನಾಗರಿಕರನ್ನು ಗುರುತಿಸಲು ಎನ್‍ಆರ್‍ಸಿ ಜಾರಿಯಾಗಿದ್ದರೆ ಜನಗಣತಿಗೆ ಪೂರಕವಾಗಿ ದೇಶದ ಜನರ ದತ್ತಾಂಶ ಸಂಗ್ರಹಿಸಲು ಎನ್‍ಪಿಆರ್ ಜಾರಿಯಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *