ಪದ್ಮಾವತಿ ಫಿಲ್ಮ ರಿಲೀಸ್ ಆದ್ರೆ, ದೀಪಿಕಾ ಮೂಗನ್ನು ಕಟ್ ಮಾಡ್ತೀವಿ

Public TV
2 Min Read

ಮುಂಬೈ: ಬಾಲಿವುಡ್‍ನ ಪದ್ಮಾವತಿ ಸಿನಿಮಾದ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪದ್ಮಾವತಿ ಸಿನಿಮಾ ಬಿಡುಗಡೆ ಮಾಡಲು ಕರ್ಣಿ ಸೇನಾ ಮತ್ತು ಬಿಜೆಪಿ ಸಾಕಷ್ಟು ವಿರೋಧ ಮಾಡುತ್ತಿದೆ. ಸಿನಿಮಾದ ಬಗ್ಗೆ ರಾಜಕೀಯ ನಾಯಕರು ಮತ್ತು ರಜಪೂತ್ ಸಮುದಾಯದ ಮುಖಂಡರು ವಿವಾದತ್ಮಕ ಹೇಳಿಕೆಯನ್ನು ನೀಡುತ್ತಿದ್ದಾರೆ. ಒಂದು ವೇಳೆ ಡಿಸೆಂಬರ್ ಒಂದರಂದು `ಪದ್ಮಾವತಿ’ ಸಿನಿಮಾ ರಿಲೀಸ್ ಆದರೆ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಮೂಗನ್ನು ಕತ್ತರಿಸಿ ಹಾಕುತ್ತೇವೆ ಎಂದು ಎಂದು ಧಮ್ಕಿ ಹಾಕಲಾಗಿದೆ.

ಸಂಜಯ್ ಲೀಲಾ ಬನ್ಸಾಲಿ ಇತಿಹಾಸದೊಂದಿಗೆ ಆಟವನ್ನು ಆಡುತ್ತಿದ್ದಾರೆ. ಬನ್ಸಾಲಿಯವರಿಗೆ ಇಂತಹ ಸಿನಿಮಾಗಳನ್ನು ಮಾಡಲು ದುಬೈ (ಅಂಡರ್ ವರ್ಲ್ಡ್)ನಿಂದ ಹಣ ಬರುತ್ತಿದೆ. ನಾವು ಯಾವುದೇ ಕಾರಣಕ್ಕೂ ಸಿನಿಮಾ ಬಿಡುಗಡೆಗೊಳ್ಳಲು ಬಿಡುವುದಿಲ್ಲ. ನಮ್ಮನ್ನು ಕೆರಳಿಸುವ ಪ್ರಯತ್ನ ಮಾಡಬೇಡಿ, ಒಂದು ವೇಳೆ ಸಿನಿಮಾ ರಿಲೀಸ್ ಆದ್ರೆ ದೀಪಿಕಾ ಮೂಗನ್ನು ಕತ್ತರಿಸಿ ಹಾಕುತ್ತೇವೆ ಎಂದು ಕರ್ಣಿ ಸೇನಾ ಮುಖಂಡ ಲೋಕೇಂದ್ರ ಸಿಂಗ್ ಹೇಳಿದ್ದಾರೆ.

ದೀಪಿಕಾ ವಿರುದ್ಧ ಆಕ್ರೋಶ ಯಾಕೆ?: ಕೆಲವು ದಿನಗಳ ಹಿಂದೆ ಸಿನಿಮಾ ರಿಲೀಸ್ ಗೆ ಅಡ್ಡಿಪಡಿಸುತ್ತಿರುವವರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ಣಿ ಸೇನಾದ ಮುಖಂಡರು ದೀಪಿಕಾರಿಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ನಡೆದ ಸಂವಾದದಲ್ಲಿ ಭಾಗಿಯಾಗಿದ್ದ, ಲೋಕೇಂದ್ರ ಸಿಂಗ್, ಪದ್ಮಾವತಿ ಸಿನಿಮಾ ಬಿಡುಗಡೆ ಮಾಡದಂತೆ ಎಲ್ಲ ಡಿಎಂ ಮತ್ತು ಸಿನಿಮಾ ಮಾಲೀಕರಿಗೆ ರಕ್ತದಲ್ಲಿ ಪತ್ರ ಬರೆಯಲಾಗುವುದು. ಒಂದು ವೇಳೆ ಸಿನಿಮಾ ರಿಲೀಸ್ ಆದರೆ ಡಿಸೆಂಬರ್ 1ರಂದು ಭಾರತ್ ಬಂದ್ ಗೆ ಕರೆ ನೀಡಲಾಗುವುದು. ಸಿನಿಮಾ ಹಿಂದೂತ್ವದ ವಿರುದ್ಧದ ಕಥೆಯನ್ನು ಹೊಂದಿದೆ ಎಂದು ಆಕ್ರೋಶವನ್ನು ಹೊರಹಾಕಿದರು.

ಕೇಂದ್ರಕ್ಕೆ ಪತ್ರ ಬರೆದ ಯೋಗಿ ಸರ್ಕಾರ: ರಾಜ್ಯದ ಜನರಲ್ಲಿ ಪದ್ಮಾವತಿ ಸಿನಿಮಾದ ಬಗ್ಗೆ ಹಲವು ಗೊಂದಲಗಳು ಮೂಡುತ್ತಿದೆ. ಸಿನಿಮಾ ಬಿಡುಗಡೆಗೊಂಡರೆ ಅದು ನೇರವಾಗಿ ರಾಜ್ಯದಲ್ಲಿ ನಡೆಯುತ್ತಿರುವ ಸ್ಥಳೀಯ ಚುನಾವಣೆ ಮೇಲೆ ಪ್ರಭಾವ ಬೀರಲಿದೆ. ಸಿನಿಮಾದಿಂದ ರಾಜ್ಯದಲ್ಲಿ ಅಶಾಂತಿ ಉಂಟಾಗಬಹುದು ಎಂದು ಉತ್ತರ ಪ್ರದೇಶ ಸರ್ಕಾರ ಮಾಹಿತಿ ಸಚಿವಾಲಯಕ್ಕೆ ಪತ್ರ ಬರೆದಿದೆ.

ಮೀರತ್ ನಗರದ ರಜಪೂತ ನಾಯಕರೊಬ್ಬರು, ಸಂಜಯ್ ಲೀಲಾ ಬನ್ಸಾಲಿ ತಲೆಯನ್ನು ಕಡಿದು ತಂದವರಿಗೆ 50 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ. ಸಿನಿಮಾದಲ್ಲಿ ರಾಣಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ, ಅಲ್ಲಾವುದ್ದೀನ್ ಖಿಲ್ಜಿ ಯಾಗಿ ರಣ್‍ವೀರ್ ಸಿಂಗ್ ಮತ್ತು ರಾಜಾ ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹೀದ್ ಕಪೂರ್ ನಟಿಸಿದ್ದಾರೆ. ಸಿನಿಮಾ ಡಿಸೆಂಬರ್ 1ರಂದು ದೇಶಾದ್ಯಂತ ತೆರೆಕಾಣಲಿದೆ.

 

Share This Article
Leave a Comment

Leave a Reply

Your email address will not be published. Required fields are marked *