ದರ್ಗಾ ಕೆಡವಿದಾಗ ದೇವಸ್ಥಾನದ ಮಾದರಿ ಪತ್ತೆ – ಅಷ್ಟಮಂಗಲ ಪ್ರಶ್ನೆಗೆ ಮುಂದಾದ ವಿಹೆಚ್‌ಪಿ

Public TV
2 Min Read

ಮಂಗಳೂರು: ಮಂಡ್ಯದ ಜಾಮೀಯಾ ಮಸೀದಿ ವಿವಾದದ ಬೆನ್ನಲ್ಲೇ ಮಂಗಳೂರಿನಲ್ಲೂ ಮಸೀದಿಯ ಸತ್ಯಾಸತ್ಯತೆಯ ವಿವಾದವೊಂದು ಭುಗಿಲೇಳುವ ಸಾಧ್ಯತೆ ದಟ್ಟವಾಗಿದೆ. ಹಿಂದೂ ಪರ ಸಂಘಟನೆಗಳು ಅಷ್ಟಮಂಗಲ ಪ್ರಶ್ನಾ ಚಿಂತನೆ ಮೂಲಕ ಈ ಮಸೀದಿಯ ರಹಸ್ಯ ಪತ್ತೆಗೆ ಮುಂದಾಗಿದೆ. ಧಾರ್ಮಿಕ ಸಾಕ್ಷ್ಯ ಪತ್ತೆ ಬಳಿಕ ಐತಿಹಾಸಿಕ ಪುರಾವೆ ಸಂಗ್ರಹಿಸಲು ಯೋಜಿಸಿದೆ.

ಮಂಗಳೂರು ನಗರ ಹೊರವಲಯದ ಗಂಜಿಮಠದ ಮಳಳಿಯಲ್ಲಿರುವ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದಲ್ಲಿ ಇತ್ತೀಚೆಗೆ ದೇವಸ್ಥಾನ ಮಾದರಿಯ ಗುಡಿ ಪತ್ತೆಯಾಗಿತ್ತು. ಈ ವಿಚಾರ ಮತ್ತೆ ಚರ್ಚೆಗೆ ಬಂದಿದ್ದು, ಮಸೀದಿಯ ರಹಸ್ಯ ಪತ್ತೆಗೆ ವಿಶ್ವ ಹಿಂದೂ ಪರಿಷತ್ ಮುಂದಾಗಿದೆ. ಅಷ್ಟಮಂಗಲ ಪ್ರಶ್ನೆ ನಡೆಸುವ ನಿರ್ಧಾರವನ್ನು ಮಾಡಿದೆ.

ವಿಶ್ವ ಹಿಂದೂ ಪರಿಷತ್ ಕೇರಳದ ಪ್ರಖ್ಯಾತ ಪುದುವಾಳ್‌ಗಳನ್ನು ಕರೆಸಲಿದ್ದು, ಅವರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆಗೆ ಚಿಂತನೆ ನಡೆಸಿದೆ. ಮಸೀದಿ ಜಾಗದಲ್ಲಿ ದೇವಾಲಯ ಇತ್ತು ಎಂಬುದು ಹಿಂದೂ ಸಂಘಟನೆಗಳ ವಾದವಾಗಿದ್ದು, ಇದನ್ನು ಅಷ್ಟಮಂಗಲ ಪ್ರಶ್ನೆ ಮೂಲಕ ರಹಸ್ಯ ಪತ್ತೆಗಿಳಿದು, ಧಾರ್ಮಿಕ ಸಾಕ್ಷ್ಯ ಪತ್ತೆ ಬಳಿಕ ಐತಿಹಾಸಿಕ ಪುರಾವೆ ಸಂಗ್ರಹಿಸಲು ಪ್ಲಾನ್ ಮಾಡಿದೆ. ಅಷ್ಟಮಂಗಲ ಪ್ರಶ್ನೆ ಬಳಿಕ ದಾಖಲೆ ಸಹಿತ ಕಾನೂನು ಹೋರಾಟಕ್ಕೆ ಯೋಜನೆ ರೂಪಿಸಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ

ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾವನ್ನು ನವೀಕರಣಕ್ಕಾಗಿ ಕೆಡವಿದಾಗ ದೇವಸ್ಥಾನ ಮಾದರಿಯ ಗುಡಿ ಪತ್ತೆಯಾಗಿತ್ತು. ದರ್ಗಾದ ಹಿಂಭಾಗದಲ್ಲಿ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಸಿಕ್ಕಿತ್ತು. ವಿಹೆಚ್‌ಪಿ ಸ್ಥಳಕ್ಕೆ ಭೇಟಿ ನೀಡಿ, ನವೀಕರಣ ಕಾಮಗಾರಿ ಸ್ಥಗಿತಕ್ಕೆ ಕೋರ್ಟ್ ಮೊರೆ ಹೋಗಿದೆ. ಇದರ ಮಧ್ಯೆಯೇ ದೇವರ ಅಸ್ತಿತ್ವದ ಪತ್ತೆಗೆ ಅಷ್ಟಮಂಗಲ ಪ್ರಶ್ನೆಗೆ ಮುಂದಾಗಿದೆ. ಇದನ್ನೂ ಓದಿ: ಸಹಬಾಳ್ವೆ ಎಲ್ಲರಿಗೂ ಬೇಕು – ಆಕ್ರಮಣ ಮಾಡಿ ನಿರ್ಮಾಣವಾದ ಮಸೀದಿಗಳಿದ್ದರೆ ಅದು ಸ್ವಚ್ಛ ಆಗಬೇಕು: ಪೇಜಾವರಶ್ರೀ

ಅಷ್ಟಮಂಗಲ ಪ್ರಶ್ನೆ ಜ್ಯೋತಿಷ್ಯದಲ್ಲಿ ಇದೊಂದು ನಿಗೂಢ ಶಾಸ್ತ್ರವಾಗಿದ್ದು, ದೀರ್ಘ ಕಾಲದ ಸಮಸ್ಯೆಗಳಿಗೆ, ದೇವಳ ವಿಷಯಗಳಿಗೆ, ಗುಪ್ತ ವಿಚಾರ ತಿಳಿಯುವುದಕ್ಕೆ ಮಾತ್ರ ಇದನ್ನು ಬಳಸಲಾಗುತ್ತದೆ. ಹೀಗಾಗಿ ಮಸೀದಿ ರಹಸ್ಯದ ಪತ್ತೆಗೆ ಹಿಂದೂ ಸಂಘಟನೆಗಳು ಅಷ್ಟಮಂಗಲ ಚಿಂತನೆ ನಡೆಸಲು ಮುಂದಾಗಿದೆ. ಮಸೀದಿ ಇರುವ ಜಾಗದ ಸಮೀಪದ ಯಾವುದಾದರೊಂದು ಜಾಗದಲ್ಲಿ ಪ್ರಶ್ನೆಯಿಟ್ಟು ಆ ಜಾಗದ ಸ್ಥಳ ಪುರಾಣ, ಧಾರ್ಮಿಕ ಇತಿಹಾಸಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ಇದರ ಉದ್ದೇಶ.

ಮುಂದಿನ ವಾರ ಅಧಿಕಾರಿಗಳ ಮಟ್ಟದಲ್ಲಿ ಮಸೀದಿ ಬಗ್ಗೆ ಡಿಸಿ ಸಭೆ ನಡೆಸಲಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಳಲಿ ಮಸೀದಿ ಸಂಬಂಧ ಮಹತ್ವದ ಸಭೆ ನಡೆಯಲಿದೆ. ಸದ್ಯ ನವೀಕರಣ ಕಾಮಗಾರಿಗೆ ಕೋರ್ಟ್ ತಡೆಯಾಜ್ಞೆ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *