ಬಿಸಿಲ ಬೇಗೆಗೆ ಕಂಗೆಟ್ಟ ಕರುನಾಡಿಗರು- ರಾಜ್ಯಕ್ಕೆ ಮತ್ತೆ ಹೀಟ್ ವೇವ್ ಆತಂಕ

Public TV
2 Min Read

– ಮಕ್ಕಳು, ಹಿರಿಯರ ಆರೋಗ್ಯದ ಬಗ್ಗೆ ಇರಲಿ ಎಚ್ಚರ

ಬೆಂಗಳೂರು: ರಾಜ್ಯದಲ್ಲಿ ದಿನಕಳೆದಂತೆ ಬಿಸಿಲಿನ ಬೇಗೆ ಹೆಚ್ಚಾಗ್ತಾ ಇದೆ. ಈ ನಡುವೆ ಹೀಟ್ ವೇವ್ (Heat Wave) ಆತಂಕ ಕೂಡ ಹೆಚ್ಚಾಗಿದ್ದು, ಹವಾಮಾನದ ತಾಪಮಾನದ ಬಗ್ಗೆ ಕಡ್ಡಾಯ ಗಮನ ಹರಿಸುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಹೌದು. ಬೇಸಿಗೆ ಬಂದಾಗಿದೆ. ಜೊತೆಗೆ ಸುಡುಬಿಸಿಲಿನ ಅಬ್ಬರ ಕೂಡ ಜೋರಾಗಿಯೇ ಇದೆ. ಈ ನಡುವೆ ರಾಜ್ಯದಲ್ಲಿ ಹೀಟ್ ವೇವ್ ಆತಂಕ ಶುರುವಾಗಿದ್ದು, ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಗರಿಷ್ಠ ತಾಪಮಾನವು ಬಯಲು ಪ್ರದೇಶಗಳಲ್ಲಿ ಕನಿಷ್ಠ 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಕನಿಷ್ಠ 30 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನವನ್ನು ತಲುಪಿದರೆ ಆ ಪ್ರದೇಶವನ್ನು ಶಾಖದ ಅಲೆಯ ಹಿಡಿತ ಅಥವಾ ಹೀಟ್ ವೇವ್ ಎಂದು ಕರೆಯಲಾಗುತ್ತೆ. ಗರಿಷ್ಠ ತಾಪಮಾನ ನಿರ್ಗಮನವು 4.5 ಮತ್ತು 6 ಡಿಗ್ರಿಗಳ ನಡುವೆ ಇದ್ದಾಗ, ಭಾರತೀಯ ಹವಾಮಾನ ಇಲಾಖೆ ಶಾಖದ ಅಲೆಯನ್ನು ಘೋಷಿಸುತ್ತದೆ. ಇದನ್ನೂ ಓದಿ: ಅಬ್ಬಾ..! ಇದೆಂಥಾ ಮೀನು? – ಡೆಡ್ಲಿ ಫಿಶ್‌ ಸೇವಿಸಿ ಮಹಿಳೆ ಸಾವು; ಕೋಮಾದಲ್ಲಿ ಪತಿ

ಸದ್ಯ ರಾಜ್ಯದ ಉತ್ತರ ಕರ್ನಾಟಕ ಸೇರಿದಂತೆ ದಕ್ಷಿಣದ ಜಿಲ್ಲೆಗಳಲ್ಲೂ ತಾಪಮಾನ ಹೆಚ್ಚಾಗ್ತಿರೋದು ಆತಂಕ ಹೆಚ್ಚಿಸಿದೆ. ಉತ್ತರ ಕರ್ನಾಟಕದಲ್ಲಿ ಸದ್ಯ ತಾಪಮಾನದಲ್ಲಿ 38-39ರ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗಿದ್ದು, ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ 34-36 ಡಿಗ್ರಿ ಸೆಲ್ಸಿಯಸ್, ದಾಖಲಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್‍ಗೆ ಏರಿದೆ. ಜೂನ್‍ವರೆಗೆ ಬಿರುಬಿಸಿಲು ಕಾಡಲಿದೆ ಎಂದು ಹವಾಮಾನ ಇಲಾಖೆ (Weather Department) ಮುನ್ಸೂಚನೆ ನೀಡಿದೆ.

ಆರೋಗ್ಯದ ಬಗ್ಗೆ ಇರಲಿ ಎಚ್ಚರಿಕೆ: ಹೊರಗೆ ಹೋಗುವಾಗ ಸನ್‍ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಿ. ದೇಹಕ್ಕೆ ತಂಪು ನೀಡುವ ಹತ್ತಿ ಹಾಗೂ ಸಡಿಲ ಬಟ್ಟೆ ಧರಿಸಿ. ನೀರು, ನೈಸರ್ಗಿಕ ಪಾನೀಯ ಸೇರಿ ಹೆಚ್ಚು ದ್ರವಾಹಾರ ಸೇವಿಸಿ. ವಾಂತಿ-ಭೇದಿಯಾದರೆ ಜ್ಯೂಸ್, ಎಳನೀರು, ಓಆರ್‍ಎಸ್ ಸೇವಿಸಿ. ಮಧುಮೇಹಿಗಳು ಮಜ್ಜಿಗೆ, ನೀರು, ಗಂಜಿ ಸೇವಿಸುವುದು ಉತ್ತಮ. ಮಕ್ಕಳು, ಗರ್ಭಿಣಿಯರು, ವೃದ್ಧರು ಅನಗತ್ಯ ಹೊರ ಹೋಗಬೇಡಿ. ಸೊಳ್ಳೆಗಳು ಕಚ್ಚದಂತೆ ಎಚ್ಚರವಹಿಸಿ.. ಮನೆ, ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಿ.

ಉತ್ತರದಿಂದ ದಕ್ಷಿಣದತ್ತ ಬಿಸಿ ಗಾಳಿ ಬೀಸುತ್ತಿರುವುದು, ವಾತಾವರಣದಲ್ಲಿ ತೇವಾಂಶ ಇಲ್ಲದಿರುವ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದೆ. ಸಂಜೆ 5 ಗಂಟೆವರೆಗೆ ಬಿಸಿಲಿನ ಪ್ರಖರತೆ ಕಂಡು ಬರುತ್ತಿದೆ. ಒಟ್ಟಾರೆ ಬಿಸಿಲು ಹೆಚ್ಚಾಗುತ್ತಿದೆ. ಮಕ್ಕಳು, ಹಿರಿಯರ ಆರೋಗ್ಯದ ಬಗ್ಗೆ ಅಗತ್ಯ ಎಚ್ಚರಿಕೆ ವಹಿಸಿದ್ರೆ ಸೂಕ್ತ.

Share This Article