ಸ್ಯಾಂಡಲ್ ವುಡ್ ನಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಬಿಡುಗಡೆಯಾಯಿತು ‘ವಂದೇ ಮಾತರಂ’ ಹಾಡು

Public TV
3 Min Read

ವ್ಯ ಪರಂಪರೆ ಹೊಂದಿರುವ ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದೆ‌. ದೇಶದಾದ್ಯಂತ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.  ಈ ಸುಸಂದರ್ಭದಲ್ಲಿ ನಮ್ಮ ನಾಡಿನ ಸಾಂಸ್ಕೃತಿಕ ರಂಗದ ಗಣ್ಯರ ಸಮಾಗಮದಲ್ಲಿ ಮೂಡಿಬಂದಿರುವ “ವಂದೇ ಮಾತರಂ” ಎಂಬ ಅದ್ಭುತ ಗೀತೆ ಬಿಡುಗಡೆಯಾಗಿದೆ.

ಹೆಸರಾಂತ ನಟ ಹಾಗೂ ರಾಜ್ಯಸಭಾ  ಸದಸ್ಯ ಜಗ್ಗೇಶ್ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಸಂತೋಷ್ ಆನಂದರಾಮ್ ನಿರ್ದೇಶನ ಮಾಡಿದ್ದಾರೆ. ಪ್ರವೀಣ್ ಡಿ ರಾವ್ ಸಂಗೀತ ನೀಡಿದ್ದು, ವಿಜಯ್ ಪ್ರಕಾಶ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಶ್ರೀಶ ಕುದವಳ್ಳಿ ಛಾಯಾಗ್ರಹಣ ಮಾಡಿದ್ದಾರೆ. ಕಿಚ್ಚ ಸುದೀಪ, ಶಿವರಾಜಕುಮಾರ್,  ರವಿಚಂದ್ರನ್, ಜಗ್ಗೇಶ್, ರಮೇಶ್ ಅರವಿಂದ್,ಅನಂತನಾಗ್, ಅರ್ಜುನ್ ಸರ್ಜಾ,  ಗಣೇಶ್, ಶ್ರೀಮುರಳಿ, ಧನಂಜಯ, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ, ಸಾಲುಮರದ ತಿಮ್ಮಕ್ಕ, ಜೋಗತಿ ಮಂಜಮ್ಮ ಹಾಗೂ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ:ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ

ನನಗೆ ಚಿಕ್ಕ ವಯಸ್ಸಿನಿಂದಲೂ “ಮಿಲೇ ಸುರ್ ಮೇರಾ ತುಮಾರ” ಹಾಡೆಂದರೆ  ಬಹಳ ಇಷ್ಟ. ಇಂತಹದೊಂದು ಹಾಡನ್ನು ನಮ್ಮ ಕನ್ನಡ ಕಲಾವಿದರ ಸಮಾಗಮದಲ್ಲಿ ಮಾಡಬೇಕೆಂಬ ಆಸೆಯಿತ್ತು. ಈಗ ಆ ಆಸೆ ಈಡೇರಿದೆ. ಗೆಳೆಯ ಶ್ರೀನಿಧಿ ಅವರು ಕೆಲವು ದಿನಗಳ ಹಿಂದೆ ಈ ಹಾಡಿನ ಬಗ್ಗೆ ಪ್ರಸ್ತಾಪಿಸಿದರು. ನಾನು ನಿರ್ಮಾಣಕ್ಕೆ ಮುಂದಾದೆ. ಕೇವಲ ಹದಿಮೂರು ದಿನಗಳಲ್ಲಿ ಈ ಹಾಡು ನಿರ್ಮಾಣವಾಗಿದೆ. ಸಂತೋಷ್ ಆನಂದ್ ರಾಮ್ ಸೊಗಸಾಗಿ ನಿರ್ದೇಶನ ಮಾಡಿದ್ದಾರೆ.

ವಿಜಯ್ ಪ್ರಕಾಶ್ ಧ್ವನಿಯಲ್ಲಿ ಈ ಹಾಡನ್ನು ಕೇಳುವುದೆ ಆನಂದ. ಈ ಹಾಡಿನ‌ ನಿರ್ಮಾಣ ಆರಂಭವಾದಾಗ ನನ್ನ ಎಲ್ಲಾ ಕನ್ನಡ ಚಿತರಂಗದ ನಾಯಕ ಮಿತ್ರರನ್ನು ಫೋನ್ ಮೂಲಕ ಸಂಪರ್ಕಿಸಿ, ಈ ವಿಷಯ ಹೇಳಿದಾಗ ಬಹಳ ಪ್ರೀತಿಯಿಂದ ಬಂದು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ನಾಯಕ ನಟರಷ್ಟೇ ಅಲ್ಲದೇ ವಿವಿಧ ಕ್ಷೇತ್ರಗಳ ಗಣ್ಯರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾಡಿನ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಹಲವು ಮಂತ್ರಿಗಳು ಈ ಹಾಡನ್ನು ಮೆಚ್ಚಿ ಶೇರ್ ಮಾಡಿದ್ದಾರೆ. ತಾವು ಕೂಡ ಈ ಹಾಡನ್ನು ಶೇರ್ ಮಾಡುವ ಮೂಲಕ ಹೆಚ್ಷಿನ ಜನರಿಗೆ ತಲುಪಿಸಿ ಎಂದು ಜಗ್ಗೇಶ್ ವಿನಂತಿಸಿದ್ದಾರೆ.  ಪ್ರಧಾನಮಂತ್ರಿಗಳಿಗೂ ಈ ಹಾಡನ್ನು ತೋರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಜಗ್ಗೇಶ್ ತಿಳಿಸಿದ್ದಾರೆ.

“ವಂದೇ ಮಾತರಂ”  ಎಂದರೆ ಜಾತಿಮತಧರ್ಮ ಎಲ್ಲವನ್ನೂ ದಾಟಿ ನಾವೆಲ್ಲರೂ ಭಾರತಮಾತೆಯ ಮಕ್ಕಳು ಎನ್ನುವ ಸಾರಾಂಶ. ಭಾರತವನ್ನು ಯಾವ ರೀತಿಯಲ್ಲಿ ವಿವರಿಸಬಹುದು ಎಂದು ಹೋದಾಗ, ಅಲ್ಲಿ ನಾವು ಗೋಮಾತೆಯನ್ನು ತಾಯಿಯ ತರಹ ಪೂಜಿಸುತ್ತೇವೆ. ಆ ಪಾತ್ರದಲ್ಲಿ ಶಿವಣ್ಣ ಅಭಿನಯಿಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಮೂಲಕ ಹಾಡು ಆರಂಭವಾಗುತ್ತದೆ ಅಲ್ಲಿ ಸುದೀಪ್ ಇದ್ದಾರೆ. ಹೀಗೆ ಭಾರತದ ಹಿರಿಮೆಯನ್ನು ಈ ಹಾಡಿನಲ್ಲಿ ತೋರಿಸುವ ಪ್ರಯತ್ನವನ್ನು ಹಿರಿಯ ನಟರಾದ ಅನಂತನಾಗ್, ರವಿಚಂದ್ರನ್, ರಮೇಶ್ ಅರವಿಂದ್, ಜಗ್ಗೇಶ್, ಅರ್ಜುನ್ ಸರ್ಜಾ ಹಾಗೂ ಯುವ ಪ್ರತಿಭೆಗಳಾದ ಗಣೇಶ್, ಶ್ರೀಮುರಳಿ, ಧ್ರುವ ಸರ್ಜಾ, ರಿಷಬ್ ಶೆಟ್ಟಿ, ಧನಂಜಯ ಅವರ ಮೂಲಕ ಮಾಡಿದ್ದೇವೆ. ಚಿತ್ರರಂಗದ ನಟರಷ್ಟೇ ಅಲ್ಲದೇ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ, ಸಾಲುಮರದ ತಿಮ್ಮಕ್ಕ, ಜೋಗತಿ ಮಂಜಮ್ಮ ಹಾಗೂ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಮುಂತಾದವರು ಭಾರತದ ಭವ್ಯ ಪರಂಪರೆಯನ್ನು ಬಿಂಬಿಸುವ ಈ ಹಾಡಿನಲ್ಲಿ ಭಾಗಿಯಾಗಿದ್ದಾರೆ‌. ನಾಲ್ಕುವರೆ ದಿನಗಳಲ್ಲಿ ಈ ಹಾಡಿನ ಚಿತ್ರೀಕರಣ ಮುಗಿದಿದೆ. ಸಹಕಾರ ನೀಡಿದ ನನ್ನ ತಂಡಕ್ಕೆ ಹಾಗೂ ಅಭಿನಯಿಸಿರುವ ಗಣ್ಯರಿಗೆ ಧನ್ಯವಾದ ಎನ್ನುತ್ತಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *