– ಫ್ಯಾಕ್ಟರಿಗಳಿಂದ ಕುತ್ತು; ಬೋರ್‌ವೇಲ್‌ನಲ್ಲಿ ಕೆಮಿಕಲ್ ನೀರು
ಬೀದರ್: ಬೇಸಿಗೆ ಬಂದ್ರೆ ಸಾಕು ಕುಗ್ರಾಮಗಳಲ್ಲಿ ನೀರಿನ (Water) ಸಮಸ್ಯೆಯಾಗೋದು ಸಾಮಾನ್ಯ. ಆದ್ರೆ ಬೀದರ್‌ನ ಕುಗ್ರಾಮದಲ್ಲಿ ಮಳೆಗಾಲ ಮುಗಿದ ಬೆನ್ನಲ್ಲೇ ಹನಿ ಹನಿ ನೀರಿಗೆ ಹಾಹಾಕಾರ ಶುರುವಾಗಿದೆ. ಗ್ರಾಮದಲ್ಲಿರುವ ಏಕೈಕ ಕುಡಿಯುವ ನೀರಿನ ಬೋರ್ ವೆಲ್‌ನಿಂದ ಕೆಮಿಕಲ್ ನೀರು (Chemical water) ಬರುತ್ತಿದೆ.
ಹೌದು. ಬೀದರ್ (Bidar) ತಾಲೂಕಿನ ಕಮಲಾಪೂರ್ ಗ್ರಾಮದಲ್ಲಿ ಜನರು ಕುಡಿಯುವ ಹನಿ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಇಡೀ ಗ್ರಾಮಕ್ಕೆ ಇರುವ ಏಕೈಕ ಬೋರ್‌ವೆಲ್ ಮುಂದೆ ಗಂಟೆಗಟ್ಟಲೇ ನಿಲ್ಲಬೇಕಿದೆ. ಈ ಬೋರ್ವೆಲ್‌ನಿಂದ ಕೆಮಿಕಲ್ ಯುಕ್ತ ನೀರು ಬರುತ್ತಿದ್ದು ಗ್ರಾಮದ ಜನ ಈ ನೀರನ್ನೇ ಕುಡಿಯುವ ಅನಿವಾರ್ಯತೆ ಬಂದೊದಗಿದೆ.
ಕೆಮಿಕಲ್ ನೀರು ಕುಡಿದು ಜನ್ರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದು, ಕೆಮಿಕಲ್ ಫ್ಯಾಕ್ಟರಿ ಮಾಲೀಕರಿಗೆ ಮತ್ತು ಅಧಿಕಾರಿಗಳಿಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಯಾಕೆಂದ್ರೆ ಕೊಳ್ಳಾರ ಕೆಮಿಕಲ್ ಫ್ಯಾಕ್ಟರಿಗಳಿಂದ ಪ್ರತಿದಿನ ಗ್ರಾಮದ ಪಕ್ಕದ ಕೆರೆಗೆ ಕೆಮಿಕಲ್ ಸೇರುತ್ತಿದೆ. ಈ ಮೂಲಕ ಗ್ರಾಮದ ಬೋರ್ವೆಲ್‌ಗಳಲ್ಲಿ ಕೆಮಿಕಲ್ ಮಿಶ್ರಿತ ನೀರು ಬರುತ್ತಿದೆ. ಈ ಕೆಮಿಕಲ್ ನೀರನ್ನು ಅನಿವಾರ್ಯವಾಗಿ ಕುಡಿಯುತ್ತಿರುವ ಗ್ರಾಮಸ್ಥರು ಪ್ರತಿದಿನ ಸತ್ತು ಬದುಕುತ್ತಿದ್ದಾರೆ. ಇನ್ನು ಕೆಲವರು 2 ಕಿಲೋ ಮೀಟರ್ ದೂರದ ಗ್ರಾಮಗಳಿಗೆ ಹೋಗಿ 30 ರೂಪಾಯಿ ಕೊಟ್ಟು ಫಿಲ್ಟರ್ ನೀರು ತಂದು ಕುಡಿಯುತ್ತಿದ್ದಾರೆ.
ಕೋಟಿ ಕೋಟಿ ಅನುದಾನದಲ್ಲಿ ಜೆಜೆಎಂ ಕಾಮಗಾರಿಯಲ್ಲಿ ಗ್ರಾಮದ ಪ್ರತಿಯೊಂದು ಮನೆಗಳಲ್ಲಿ ನಲ್ಲಿಗಳನ್ನು ಹಾಕಲಾಗಿದೆ. ಆದ್ರೆ ಐದಾರು ವರ್ಷಗಳಿಂದ ಈ ನಲ್ಲಿಗಳಲ್ಲಿ ಒಂದು ಹನಿ ನೀರು ಬಂದಿಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೋಟಿ ಕೋಟಿ ಹಣ ಗುಳುಂ ಮಾಡಿದ್ದಾರೆ. 40 ವರ್ಷಗಳ ಹಿಂದೇ ಕಾರಂಜಾ ಜಲಾಶಯ ನಿರ್ಮಾಣಕ್ಕಾಗಿ ಜನ್ರು ತಮ್ಮ ಗ್ರಾಮವನ್ನೇ ಬಿಟ್ಟು ಇಲ್ಲಿಗೆ ಬಂದಿದ್ದಾರೆ. ಆದ್ರೆ ಇಲ್ಲಿ ಯಾವುದೇ ಮೂಲಭೂತ ಸೌಕರ್ಯ ನೀಡದೆ ನಿರ್ಲಕ್ಷಿಸಲಾಗಿದೆ.