PGCET: 2ನೇ ಸುತ್ತಿನ ಆಪ್ಷನ್ ಎಂಟ್ರಿ ಆರಂಭ – ಕೆಇಎ

1 Min Read

ಬೆಂಗಳೂರು: ಎಂಬಿಎ, ಎಂಸಿಎ, ಎಂಟೆಕ್, ಎಂಇ, ಎಂ.ಆರ್ಕ್ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಇಂದಿನಿಂದ (ಅ.16) ಆರಂಭವಾಗಿದೆ. ಅಭ್ಯರ್ಥಿಗಳಿಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅ.23ರವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಅಂದು ಆಪ್ಷನ್ಸ್ ದಾಖಲಿಸುವುದು ಬೆಳಿಗ್ಗೆ 10ಗಂಟೆಗೆ ಕೊನೆಯಾಗಲಿದೆ. ಅದೇ ದಿನ ಸಂಜೆ 6ಗಂಟೆಗೆ ತಾತ್ಕಾಲಿಕ ಫಲಿತಾಂಶ ಪ್ರಕಟವಾಗಲಿದೆ. ಅ.24ರಂದು ಬೆಳಿಗ್ಗೆ 10ಗಂಟೆಗೆ ಅಂತಿಮ ಫಲಿತಾಂಶ ಪ್ರಕಟವಾಗಲಿದೆ. ಸೀಟು ಹಂಚಿಕೆಯಾದವರು ಅ.25ರಿಂದ ಅ.29ರೊಳಗೆ ಶುಲ್ಕ ಕಟ್ಟಿ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ಅ.30ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೀದರ್ ವೈದ್ಯಕೀಯ ಕಾಲೇಜಿಗೆ ಹೆಚ್ಚುವರಿ 50 ಸೀಟು
ಬೀದರ್ ವೈದ್ಯಕೀಯ ಕಾಲೇಜಿಗೆ 50 ಸೀಟು ಹೆಚ್ಚುವರಿಯಾಗಿ ಮಂಜೂರು ಮಾಡಿರುವ ಕಾರಣ ಯುಜಿ ನೀಟ್ 3ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅ.17ರಂದು ಮಧ್ಯಾಹ್ನ 12.30ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಈಗಾಗಲೇ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವವರು ಕೂಡ ಬೀದರ್ ಸೇರಿದಂತೆ ಇತರ ನಾಲ್ಕು ಕಾಲೇಜುಗಳಿಗೆ ಆಪ್ಷನ್ಸ್ ದಾಖಲಿಸಬಹುದು ಎಂದು ಅವರು ತಿಳಿಸಿದ್ದಾರೆ.

Share This Article