ಮಳೆ (Rain), ಮಣ್ಣು ಹಾಗೂ ಮನಸ್ಸು ಎರಡಕ್ಕೂ ಜೀವ ಕೊಡುವ ಶಕ್ತಿ! ಒಂದು ವರ್ಷ ಮಳೆಯೇ ಇಲ್ಲದಿದ್ದರೆ, ಆ ವರ್ಷ ಭೂಮಿ ಅದೆಷ್ಟು ಬರಡಾಗುತ್ತದೆ. ಅದೆಷ್ಟು ಜೀವಗಳು ನರಳಾಡುತ್ತವೆ ಅಲ್ವಾ? ಭೂಮಿಗೆ ಜೀವ ಬರಬೇಕಾದರೆ ಹೇಗೆ ಮಳೆ ಬೇಕೋ, ಹಾಗೇ ಮನಸ್ಸು ಸದಾ ಹಸಿರಾಗಿರಬೇಕಾದರೆ ಅಲ್ಲೊಂದು ಮಳೆಯಾಗಬೇಕು! ಮನಸ್ಸಿಗೆ ಮಳೆ ಬರದಿದ್ದರೆ ಅದು ಬಹಳಷ್ಟು ನರಳಾಡುತ್ತದೆ.. ಬರಡಾಗಿ, ಕಲ್ಲಾಗಿ, ಸತ್ತೇ ಹೋಗುತ್ತದೆ!
ಅದಕ್ಕೆ ಭೂಮಿ (Earth) ಬರಡಾಗಬಾರದು ಎಂದೇ ನಮ್ಮ ಪೂರ್ವಜರು ಮಳೆ ಬರದಿದ್ದರೆ, ಅದೆಷ್ಟೋ ಪೂಜೆ ಪುನಸ್ಕಾರಗಳನ್ನು ಮಾಡಿ ಮಳೆಗಾಗಿ ಹಂಬಲಿಸುತ್ತಿದ್ದರು. ಇನ್ನೂ ಕೆಲವೆಡೆ ಅಂತ್ರೂ ಮಳೆಗಾಗಿ ಕಪ್ಪೆಗಳ ಮದುವೆ, ನಾಯಿಗಳಿಗೆ ಮದುವೆ ಅಂತ ಮಾಡ್ತಿರ‍್ತಾರೆ. ಇದೆಲ್ಲ ಆಗಾಗ ಸುದ್ದಿ ಆಗ್ತಾನೆ ಇರುತ್ತೆ.. ನೋಡಿ ನಂಬಿಕೆ ಹೇಗೆಲ್ಲ ಇದೆ..! ಏನಾದ್ರೂ ಮಾಡಿ ಮಳೆ ಬರೋ ಹಾಗೆ ಮಾಡ್ಬೇಕು ಅಷ್ಟೇ..! ಮಳೆ ಅಷ್ಟೊಂದು ಮುಖ್ಯ.. ಹೊಸ ಚಿಗುರಿಗೆ, ಹೊಸ ಜೀವಕ್ಕೆ.. ಹೊಸ ಜೀವನಕ್ಕೆ..!
ಹೌದು ಹೊಸ ಜೀವಕ್ಕೂ ಬೇಕು, ಹಾಗೂ ಹೊಸ ಜೀವನಕ್ಕೂ ಮಳೆ ಬೇಕು! ಮಳೆ ಹಳೆಯ ಗಾಯಗಳ ಮೇಲೆ ತಂಪು ಸುರಿದು, ಕೊಳೆಯ ಕಿತ್ತು ಕೊಚ್ಚಿಕೊಂಡೊಯ್ಯುವಷ್ಟು ಬರಬೇಕು. ನೋಡಿ ಯಾವ ಪೂಜೆ ಮಾಡ್ಬೇಕು.. ಯಾವ ಮೇಘ ರಾಗ ಹಾಡ್ಬೇಕು ಅಂತ..! ಎಷ್ಟು ದಿನ ಅಂತ `ತುಂಬಾ ನಂಬಿದ್ದೆ, ಸಾಕಷ್ಟು ನೋವಿನ ನೆನಪುಗಳನ್ನ ಕೊಟ್ಟು ಹೋಗ್ಬಿಟ್ಲು/ ಹೋಗ್ಬಿಟ್ಟ’ ಅಂತ ಹೇಳಿಕೊಳ್ತಾ ಇರ್ತೀರಿ? ಅದೇ ನೆನಪಲ್ಲಿ ಬರಡಾಗಿ ಹೋಗ್ತೀರಿ? ಮಳೆಯ ಮೋಡಗಳ ಕಡೆ ಮುಖ ಮಾಡಿ ಬದುಕಿನ ಕಡೆ ಕರೆಯಿರಿ…!
ಹೀಗೆ ಕರೆದ ತಕ್ಷಣ ಮಳೆ ಬಂದು ಎಲ್ಲಾ ಕೊಚ್ಚಿಕೊಂಡು ಹೋಗ್ಬಿಡುತ್ತಾ..? ಅಂತ ನೀವು ಪ್ರಶ್ನೆ ಮಾಡ್ಬಹುದು.. ಹಾಗಾದ್ರೆ ಈಗ ನೀವು ಆ ಹಳೆಯ ನೆನಪುಗಳನ್ನ ಕರೆದು ಕರೆದು ತಂದು ಕೂರಿಸಿಕೊಂಡಿಲ್ವಾ? ಹಾಗಿದ್ದಾಗ ಹೊಸ ಹುಟ್ಟು ಕೊಡುವ ಮಳೆ ಯಾಕೆ ಬರಬಾರದು? ಯಾಕೆ ನಾವು ಕರೆಯೋ ಪ್ರಯತ್ನ ಮಾಡ್ಬಾರದು? ಅದು ಯಾವ ಮಾರ್ಗದ್ದೋ ನನಗೆ ಗೊತ್ತಿಲ್ಲ. ಆದರೆ ಮಳೆಯಂತೂ ಬದುಕಿಗೆ ಬೇಕು, ಅದು ಸಾಧನೆಯದ್ದೋ? ಬಹುತೇಕ ಸೆಟ್ಲ್ ಆಗಿ ಹೊಸ ಪ್ರೇಮದ್ದೋ.. ಇನ್ಯಾವುದೋ.. ನಮ್ಮದೇ ಆಯ್ಕೆ.
ಅಂತಹ ಮಳೆಯ ಕರೆಗೆ ನನಗೆ ಸಿಕ್ಕಿದ್ದು.. ಮರುಜೀವ ಕೊಟ್ಟ ಒಲವಿನ ಮಳೆ..! ನಾನಗೇ ಹುಡುಕಿಕೊಂಡು ಹೋದ್ನಾ?.. ಅದಾಗಿಯೇ ಹೃದಯದ ಮೇಲೆ ಸುರಿದಿದ್ದಾ? ಎಲ್ಲಾ ಅಸ್ಪಷ್ಟ.. ಮಳೆ ಮಾತ್ರ (Love) ಪ್ರೇಮದ್ದೇ.. ಹೊಸ ಹುಟ್ಟಿಗೆ ಇಷ್ಟು ಸಾಕಾಯ್ತು! ಈ ಸಾಲುಗಳನ್ನು ಬರೆಯೋದಕ್ಕೆ ಅದೇ ಮಳೆ ಕಾರಣ ನೋಡಿ. ಪ್ರೇಮವೆಂದರೆ ಹಾಗೆ ಒಮ್ಮೆ ಮಳೆ, ಬಿಸಿಲು, ಮತ್ತೊಮ್ಮೆ ಹೂದೋಟ! ಒಟ್ಟಾರೆ ಸಂಭ್ರಮ! ಅದಕ್ಕೆ ತೆರೆದುಕೊಳ್ಳುವ ಪುಟ್ಟ ಅಂಗಳ ನಿರ್ಮಿಸಿಕೊಳ್ಳುವುದಷ್ಟೇ ನಮ್ಮ ಕೆಲಸ..
ಅಂತಹ ಸ್ವಚ್ಛ ಪುಟ್ಟ ಅಂಗಳ ತೆರೆದಿಟ್ಟು ಮಳೆಗಾಗಿ ಹಂಬಲಿಸಿದರೆ ಸಾಕು… ಅದು ನಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತದೆ. ಆ ಮಳೆಯ ಒಲವಿಗೆ ಅಂಗಳದ ತುಂಬೆಲ್ಲ ಹೂ ಅರಳಿ ಸಂಭ್ರಮಿಸಿ, ನಮ್ಮನ್ನು ಘಮದ ಹಾದಿಗೆ ಕೊಂಡೊಯ್ಯುವ ಶಕ್ತಿ ಖಂಡಿತಾ ಇದೆ. ಅಂತಹ ಒಲವಿನ ಮಳೆಗೆ ನನ್ನ ಹೃದಯ ಸಾಕ್ಷಿಯಾಗಿದೆ! ಹಾಗೇ ಬಂದ ಮಳೆಗೆ ಪ್ರೇಮ ನಕ್ಷತ್ರ..! ಮರುಜೀವ ಕೊಟ್ಟ ಮಳೆಯ ಹೆಸರು ʻಅಮೃತʼ..! ರಾಕ್ಷಸ ನೆನಪುಗಳ ಅಲೆಯಲ್ಲಿ ಅದ್ದಿ ಹೋಗಿ ಇನ್ನೇನೂ ಬದುಕಿಲ್ಲ, ಎಂದಾಗ ಬದುಕು ಕೊಟ್ಟ ಒಲವಿಗೆ ಇದೇ ಸರಿಯಾದ ಹೆಸರು..!
ಈ ಮಳೆ ನಿರಂತರವಾಗಿ ಬಾಳಿನ ತುಂಬಾ ಸುರಿಯಲಿ.. ಹೊಸ ನೀರಿನ ಅಬ್ಬರಕ್ಕೆ ಹಳೆಯ ನೋವುಗಳು ಕೆರೆಕಟ್ಟೆಯಂತೆ ಒಡೆದು ಕೊಚ್ಚಿಹೋಗಲಿ.. ಇಂತಹ ಒಲವು ಎದುರಾಗುವ ಮಳೆಯ ದಾರಿಗಾಗಿ ನಾನು ಕಾಯುತ್ತ ಅದೆಷ್ಟು ಸಮಯ ಎದೆಯಂಗಳದ ಮೂಲೆಯಲ್ಲಿ ಕುಳಿತು ಒಬ್ಬೊಂಟಿ ಆಗ್ಬಿಟ್ಟೆ ಅಂದ್ಕೊಂಡಿದ್ದೆ. ಆದರೆ ಅದೆಲ್ಲದ್ದನ್ನು ಮೀರಿದ ಬಂಧವೊಂದನ್ನು ಹುಟ್ಟಿಸಿದ್ದು ʻಈ ವರ್ಷದ ಕಪ್ಪು ಮೋಡಗಳುʼ ಈ ಮಳೆಗಾಲಕ್ಕೆ.. ಮನಕ್ಕಿಳಿದ ಒಲವ ಹನಿಗಳಿಗೆ ನನ್ನ ಥ್ಯಾಂಕ್ಸ್..!
ಯಾರೆಲ್ಲ ಒಲವಿನ ಮಳೆಗಾಗಿ ಕಾದು ಕುಳಿತಿದ್ದೀರೋ ಅವರಿಗೆಲ್ಲ ಈ ಮಳೆಯ ಕೃಪೆ ಇರಲಿ..! ಉಳಿದ ನೋವಿನ ಬಿಸಿಲ ಝಳದ ಮೇಲೆ ಸುರಿದು.. ಒಂದು ಸುಂದರವಾದ ಕಾಮನಬಿಲ್ಲು ಕಟ್ಟಲಿ… ಕನಸು ಬಣ್ಣವಾಗಲಿ!!
– ಗೋಪಾಲಕೃಷ್ಣ