ಫೋಟೋದಲ್ಲಿರುವವಳೇ ನನ್ನ ಮಗಳು: ಸುಜಾತ ಭಟ್ ಪ್ರತಿಕ್ರಿಯೆ

Public TV
3 Min Read

– ಪಬ್ಲಿಕ್ ಟಿವಿಯೊಂದಿಗೆ ಸುಜಾತ ಭಟ್ ಎಕ್ಸ್‌ಕ್ಲೂಸಿವ್‌ ಮಾತು

ಬೆಂಗಳೂರು: ನನ್ನ ಮಗಳದ್ದು ಒಂದು ಸಣ್ಣ ಫೋಟೋ ಇದೆ. ಆ ಫೋಟೋದಲ್ಲಿರುವವಳೇ ನನ್ನ ಮಗಳು ಎಂದು ಸುಜಾತ ಭಟ್ (Sujatha Bhat) ಹೇಳಿದ್ದಾರೆ.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಅನನ್ಯ ಭಟ್ (Ananya Bhat) ನನ್ನ ಮಗಳು. 1983ರಲ್ಲಿ ಉಡುಪಿಯ ಹತ್ತಿರದ ಪರೀಖದಲ್ಲಿ ಆಕೆ ಜನಿಸಿದ್ದಳು. ನನ್ನ ಮಗಳ ಫೋಟೋವನ್ನು ಈಗಾಗಲೇ ಕೊಟ್ಟಿದ್ದೇನೆ. ನನ್ನ ಹತ್ತಿರ ಆಕೆಯ ಒಂದು ಸಣ್ಣ ಫೋಟೋ ಇರೋದು. ಹುಡುಕಾಡಿ ಅದನ್ನ ಕೊಟ್ಟಿದ್ದೇನೆ. ಈಗ ನನ್ನ ಹೊಟ್ಟೆಯಲ್ಲಿ ಹುಟ್ಟಿದವಳನ್ನು ಮಗಳೇ ಅಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸುಜಾತಾ ಭಟ್‌ಗೆ ಮಗಳೇ ಇರಲಿಲ್ಲ ಎಂದ ನೆರೆಹೊರೆಯವರು


ನನಗೆ ಒಬ್ಬಳೇ ಮಗಳು ಇರೋದು. ನನ್ನ ಪತಿ ಅನಿಲ್ ಭಟ್. ಅವರು ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದರು. ನಾನು ಕೊಟ್ಟಿರುವ ಫೋಟೋ ವಾಸಂತಿ ಅನ್ನುವವರದ್ದು ಅಲ್ಲ. ಅವರು ಯಾರು ಅಂತಾನೆ ನನಗೆ ಗೊತ್ತಿಲ್ಲ. ಅವರಿಗೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ.

ನನ್ನ ಮಗಳನ್ನ ಬೇರೆ ಕಡೆ ಓದಿಸುತ್ತಿದ್ದೆ. ನನಗೆ ಕುಟುಂಬ ಬೆದರಿಕೆ ಇದ್ದಿದ್ದರಿಂದ ಮಗಳನ್ನು ಬೇರೆ ಕಡೆ ಓದಿಸುತ್ತಿದ್ದೆ ಎಂದು ಹೇಳಿದ್ದಾರೆ.

ನನ್ನ ಅಕ್ಕನ ಮದುವೆಗೂ ಮುನ್ನ ಅನಿಲ್ ಭಟ್ ಅವರನ್ನು ಮದುವೆಯಾಗಿದ್ದೆ. ಈ ವಿಚಾರ ನನ್ನ ಕುಟುಂಬದವರಿಗೆ ತಿಳಿದಿರಲಿಲ್ಲ. ಬಳಿಕ ನಾನು ಮಗುವಿಗೆ ಜನ್ಮ ನೀಡಿದ್ದೆ. ಈ ವಿಚಾರ ತಿಳಿದು ನನ್ನ ಮಗಳನ್ನು ಕುಟುಂಬದವರು ತೆಗೆದುಕೊಂಡು ಹೋಗಿ ನದಿಯಲ್ಲಿ ಬಿಡಲು ನೋಡಿದ್ದರು. ಆಗ ಮಗುವನ್ನು ನೋಡಿ ಅರವಿಂದ್, ವಿಮಲ ಅವರು ನನ್ನ ಮಗುವನ್ನು ತೆಗೆದುಕೊಂಡ ಬಳಿ ನನ್ನನ್ನು ಸಂಪರ್ಕಿಸಿದ್ದರು. ಬಳಿಕ ಮಗುವನ್ನ ಬೆಳೆಸೋಕೆ ಅವರಿಗೆ ಕೊಟ್ಟಿದ್ದೆ. ಆ ದಂಪತಿ ನನ್ನ ಮಗಳನ್ನು ಓದಿಸಿದ್ದರು ಎಂದು ಹೇಳಿದ್ದಾರೆ.

ಅಕ್ಕನ ಮದುವೆ ಆದ್ಮೇಲೆ ಮಗಳನ್ನು ಕರೆದುಕೊಂಡು ಬಂದೆ. 7ನೇ ತರಗತಿ ಆದ್ಮೇಲೆ ಆಕೆಯನ್ನು ಕರೆದುಕೊಂಡು ಬಂದೆ. ಬಳಿಕ 8ನೇ ತರಗತಿಯಿಂದ ಮಗಳು ನನ್ನ ಬಳಿ ಇದ್ದಳು. ನಂತರ ನನ್ನನ್ನು ಕೋಲ್ಕತ್ತಾದ ಸೇಟು ಮನೆಗೆ ಪರಿಚಯಸ್ಥರೊಬ್ಬರು ಕಳುಹಿಸಿಕೊಟ್ಟಿದ್ದರು. ಗುತ್ತಿಗೆ ಆಧಾರದ ಮೇಲೆ ಅಲ್ಲಿ ನಾನು ಕೆಲಸ ಮಾಡ್ತಿದ್ದೆ. ಕೆಲವು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್‌!

ನಾನೇ ಮಗಳನ್ನು ಕೋಲ್ಕತ್ತಾಗೆ ಕರೆದುಕೊಂಡು ಹೋದೆ. ನಾನು ಬೇರೆ ಅವರಿಗೆ ಎಷ್ಟು ತೊಂದರೆ ಕೊಡಲಿ ಎಂದು ಅರವಿಂದ್ ಅವರ ಬಳಿಯಿಂದ ನನ್ನ ಮಗಳನ್ನು ಕರೆದುಕೊಂಡು ಹೋದೆ. ಕೋಲ್ಕತ್ತಾದಲ್ಲೇ 12ನೇ ತರಗತಿವರೆಗೆ ಓದಿದ್ದಳು. ಆಮೇಲೆ ಪ್ರಭಾಕರ್ ಎಂಬುವವರು ಜೊತೆ ರಿಪ್ಪನ್‌ಪೇಟೆಗೆ ಬಂದೆ. ಅನನ್ಯಳನ್ನ ಕೋಲ್ಕತ್ತಾದಲ್ಲೇ ಬಿಟ್ಟು ಬಂದಿದ್ದೆ. ನಂತರ ನಾನು ಮಗಳ ಬಳಿ ಹೋಗಿ ಬಂದು ಮಾಡ್ತಿದ್ದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾಸ್ಕ್‌ಮ್ಯಾನ್‌ಗೆ ಬುರುಡೆ ಕೊಟ್ಟಿದ್ದೇ ಕೈ ಸಂಸದ ಸಸಿಕಾಂತ್‌ ಸೆಂಥಿಲ್: ಜನಾರ್ದನ ರೆಡ್ಡಿ

ರಿಪ್ಪನ್‌ಪೇಟೆಯಲ್ಲಿ ಪ್ರಭಾಕರ್ ಎನ್ನುವವರ ತಾಯಿಗೆ ಕ್ಯಾನ್ಸರ್ ಆಗಿದ್ದರಿಂದ ಅವರನ್ನು ನೋಡಿಕೊಳ್ಳಲು ಬಂದಿದ್ದೆ. ನನ್ನ ಪರಿಚಯಸ್ಥರೊಬ್ಬರು ಈ ವಿಚಾರ ತಿಳಿಸಿ, ಅವರ ತಾಯಿಯನ್ನು ನೋಡಿಕೊಳ್ಳಲು ಜನ ಬೇಕು ಹೇಳಿದ್ದಕ್ಕೆ ನಾನು ಮಗಳನ್ನು ಬಿಟ್ಟು ಬಂದಿದ್ದೆ. ಯಾರಿಗೂ ಹೇಳದೆ ಮದುವೆ ಆಗಿದ್ದಕ್ಕೆ ನನಗೆ ತಂದೆಯ ಕುಟುಂಬಸ್ಥರು ಟಾರ್ಚರ್ ಕೊಡ್ತಿದ್ದರು ಎಂದಿದ್ದಾರೆ.

ನನ್ನ ಮಗಳನ್ನು ವಾಪಾಸ್ ಕೋಲ್ಕತ್ತಾದಿಂದ 2003 ಜೂನ್, ಜುಲೈನಲ್ಲಿ ಕರೆದುಕೊಂಡು ಬಂದೆ. ಕೋಲ್ಕತ್ತಾದ ಸೇಟು ಎನ್ನುವವರು ನನ್ನ ಮಗಳನ್ನು ನೋಡಿಕೊಳ್ಳುತ್ತಿದ್ದರು. ಆಕೆಯನ್ನು ಅಡ್ಮಿಷನ್ ಮಾಡಿಸುವ ಸಂದರ್ಭದಲ್ಲಿ ಮಾತ್ರ ರಿಪ್ಪನ್‌ಪೇಟೆಗೆ ಕರೆದುಕೊಂಡು ಬಂದಿದ್ದೆ. ಆಕೆಯನ್ನು ಕಸ್ತೂರಬಾ ಮೆಡಿಕಲ್ ಕಾಲೇಜಿಗೆ ಸೇರಿಸಲು ಕರೆದುಕೊಂಡು ಬಂದಿದ್ದೆ. ಮಗಳು ರ‍್ಯಾಂಕ್ ಸ್ಟೂಡೆಂಟ್ ಆಗಿದ್ದರಿಂದ ಅಡ್ಮಿಷನ್ ಮಾಡಲು ಕರೆದುಕೊಂಡು ಬಂದೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡುತ್ತಿದ್ದಾಗ ಸುಜಾತ ಭಟ್ ಅವರ ಸಂಪರ್ಕ ಕಡಿತಗೊಂಡಿದೆ.

Share This Article