ಮೈಸೂರು: ಬಾಲ್ಯ ವಿವಾಹ ನಡೆಯುತ್ತಿದ್ದಾಗ ತಡೆಯಲು ಬಂದ ಅಧಿಕಾರಿಗಳು ಮದುವೆ ಮನೆಯಲ್ಲಿ ಒಂದು ಕ್ಷಣ ಗೊಂದಲಕ್ಕೊಳಗಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕೆಲವು ದಾಖಲಾತಿಗಳಲ್ಲಿ ವಧುವಿನ ವಯಸ್ಸು 17 ಅಂತಾ ಇದ್ದರೆ, ಆಧಾರ್ ಕಾರ್ಡ್ ನಲ್ಲಿ 18 ವರ್ಷ ದಾಖಲಾಗಿದ್ದರಿಂದ ಅಧಿಕಾರಿಗಳು ಕೆಲ ಕಾಲ ಗೊಂದಲಕ್ಕೆ ಒಳಗಾಗಿದ್ದರು.
ರಮ್ಮನಹಳ್ಳಿ ಗ್ರಾಮದ ನಿವಾಸಿಗಳಾದ ವಧು ತೇಜಾ (17) ಹಾಗೂ ವರ ಕುಮಾರ್ (26)ನಡುವೆ ವಿವಾಹ ನಿಶ್ಚಯವಾಗಿತ್ತು. ಹಿರಿಯರ ಅಣತಿಯಂತೆ ಮೈಸೂರಿನ ರಾಘವೇಂದ್ರನಗರದ ಕೆ.ಪಿ.ಟಿ.ಸಿ.ಎಲ್ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆಯುತ್ತಿತ್ತು.
ವಧು ತೇಜಾಗೆ 18 ವರ್ಷ ಪೂರ್ಣವಾಗಿಲ್ಲವೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಎನ್.ಆರ್.ಪೊಲೀಸ್ ಜಂಟಿ ಕಾರ್ಯಾಚರಣೆ ನಡೆಸಿ ವಧು-ವರರನ್ನು ಹಿಡಿದು ಮದುವೆ ನಿಲ್ಲಿಸಿದ್ದಾರೆ.

ಪರಿಶೀಲನೆ ವೇಳೆ ವಧು ತೇಜಾಗೆ ಶಾಲಾ ದಾಖಲಾತಿಗಳಲ್ಲಿ 17 ವರ್ಷ 4 ತಿಂಗಳು ಎಂದು ತಿಳಿದುಬಂದಿದೆ. ಆದರೆ ಆಧಾರ್ ಕಾರ್ಡ್ ನಲ್ಲಿ ವಧುಗೆ 18 ವರ್ಷ 4 ತಿಂಗಳು ನಮೂದಾಗಿದೆ. ಪೊಲೀಸರು ಮದುವೆ ಮಂಟಪದ ಮೇಲೆ ದಾಳಿ ನಡೆಸಿದಾಗ ಸಿಕ್ಕಿಬಿದ್ದ ವಧು-ವರರನ್ನು ಪಾಲಕರು ಪೊಲೀಸರ ಕಣ್ಣುತಪ್ಪಿಸಿ ಮದುವೆ ಮಂಟಪದಿಂದ ಎಸ್ಕೇಪ್ ಮಾಡಿದ್ದಾರೆ.
ಇನ್ನು ಈ ವಿವಾಹ ಕುರಿತು ಪೊಲೀಸರು ವಧು ವರರ ಪೋಷಕರು ಹಾಗೂ ವಿವಾಹ ನಡೆಸುತ್ತಿದ್ದ ಪುರೋಹಿತರನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.