100 ಕೋಟಿ ವೆಚ್ಚದ ನೂತನ ಬಸ್ ನಿಲ್ದಾಣಕ್ಕೆ ಕತ್ತಲೆ ಭಾಗ್ಯ; ಟಾರ್ಚ್‌ ಬೆಳಕಲ್ಲೇ ವರ್ತಕರ ವಹಿವಾಟು

Public TV
2 Min Read

– ವಿದ್ಯುತ್ ಸಂಪರ್ಕವಿಲ್ಲದೇ ಸಿಬ್ಬಂದಿ, ಪ್ರಯಾಣಿಕರು ಹೈರಾಣು

ತುಮಕೂರು: 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಬಸ್ ನಿಲ್ದಾಣಕ್ಕೆ (Tumakuru Bus Stand) ಆರಂಭದಲ್ಲೇ ಗ್ರಹಣ ಹಿಡಿದಿದೆ. ವಿದ್ಯುತ್ (Electricity) ಸಂಪರ್ಕ ಇಲ್ಲದೇ ಕಗ್ಗತ್ತಲು ಕವಿದಿದೆ. ಪ್ರಯಾಣಿಕರು, ಸಿಬ್ಬಂದಿ ಹೈರಾಣಾಗಿದ್ದಾರೆ. ಇದನ್ನೂ ಓದಿ: ಉದ್ಘಾಟನೆ ದಿನವೇ ಬಾಗಿಲು ಮುಚ್ಚಿದ ತುಮಕೂರು KSRTC ಹೈಟೆಕ್‌ ಬಸ್ ನಿಲ್ದಾಣ!

ಹೌದು. ಸ್ಮಾರ್ಟ್ ಸಿಟಿ ಯೋಜನೆ (Smart City Project) ಅಡಿಯಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತುಮಕೂರಿನ ನೂತನ ಬಸ್ ನಿಲ್ದಾಣ ಆರಂಭದಲ್ಲೇ ಮುಗ್ಗರಿಸಿದೆ. ಬಸ್ ನಿಲ್ದಾಣದಲ್ಲಿ ಕಾಮಗಾರಿ ಸಂಪೂರ್ಣವಾಗಿ ಮುಗಿಯದಿದ್ದರೂ ಕೆಎಸ್‌ಆರ್‌ಟಿಸಿ (KSRTC) ನಿಗಮದ ಅಧಿಕಾರಿಗಳು ತರಾತುರಿಯಲ್ಲಿ ಬಸ್ ಸಂಚಾರ ಆರಂಭಿಸಿದ್ದು ಪ್ರಯಾಣಿಕರು ಇನ್ನಿಲ್ಲದಂತೆ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಶ್ರಾವಣ ಆದ್ಮೇಲೆ ಬಾಳು ಕೊಡ್ತೀನಿ ಅಂತ ಹೇಳಿ ಆಂಟಿಗೆ ವಂಚನೆ – ಪ್ರಜ್ವಲ್‌ ವಿರುದ್ಧ ದೂರು

ಕಳೆದ ಆಗಸ್ಟ್ 27ರಂದು ಹೊಸ ಬಸ್ ನಿಲ್ದಾಣ ಆರಂಭವಾಗಿದ್ದು, ಇನ್ನೂ ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಇದರಿಂದ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾಗಳು ಅಳವಡಿಕೆಯಾಗಿಲ್ಲ. ಇದು ಜೇಬುಗಳ್ಳರಿಗೆ ವರದಾನವಾಗಿದ್ದು, ನಿತ್ಯ ಹತ್ತಾರು ಮಂದಿ ಪ್ರಯಾಣಿಕರು ತಮ್ಮ ಮೊಬೈಲ್, ಪರ್ಸ್ ಸೇರಿ ಇನ್ನಿತರ ಬೆಳೆಬಾಳುವ ವಸ್ತುಗಳನ್ನ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಸಿಸಿಟಿವಿ ಕಡ್ಡಾಯ – ಬೆಂಗಳೂರು ಪಿಜಿಗಳಿಗೆ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಏನಿದೆ?  

ವಿದ್ಯುತ್‌ ಸಂಪರ್ಕವಿಲ್ಲದ ಕಾರಣ ಬಸ್ ನಿಲ್ದಾಣಕ್ಕೆ ಹೈಟೆಕ್ ಲುಕ್ ನೀಡುವ ಎಸ್ಕ್ಯುಲೇಟರ್‌ಗಳು ಕೆಲಸ ಮಾಡುತ್ತಿಲ್ಲ. ಹಿರಿಯ ನಾಗರಿಕರು ಮೆಟ್ಟಿಲು ಹತ್ತಲು ಹರಸಾಹಸ ಪಡುವಂತಾಗಿದೆ. ಎರಡು ಹೊಸ ಎಟಿಎಂಗಳೂ ಪ್ರಯೋಜನಕ್ಕೆ ಬಾರದಂತಾಗಿವೆ. ಮಹಿಳೆಯರು ವಿಶ್ರಾಂತಿ ಪಡೆಯಲು ನಿರ್ಮಿಸಿರುವ ಸಖಿ ಕೊಠಡಿಯೂ ಸಾರ್ವಜನಿಕ ಬಳಕೆಗೆ ಮುಕ್ತವಾಗಿಲ್ಲ. ಇವೆಲ್ಲದರ ನಡುವೆ ಪ್ರತಿ ತಿಂಗಳು ನಿಗಮಕ್ಕೆ ಲಕ್ಷಾಂತರ ರೂ. ಬಾಡಿಗೆ ಪಾವತಿಸುವ ಅಂಗಡಿ ಮಳಿಗೆಗಳಿಗೂ ವಿದ್ಯುತ್ ಸಂಪರ್ಕ ನೀಡಿಲ್ಲ. ಹೀಗಾಗಿ ಇಲ್ಲಿನ ವರ್ತಕರು ಟಾರ್ಚ್ ಬೆಳಕಿನಲ್ಲಿ ವ್ಯಾಪಾರ ಮಾಡುವಂತಾಗಿದೆ. ಸದ್ಯಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕವೇ ಆಸರೆಯಾಗಿದ್ದು, ರಾತ್ರಿ ಹೊತ್ತು ಮಾತ್ರ ಸೀಮಿತ ಕಡೆಗಳಲ್ಲಿ ಮಂದಗತಿಯ ಲೈಟ್‌ಗಳನ್ನ ಆನ್ ಮಾಡಲಾಗುತ್ತಿದೆ.

ಒಟ್ಟಿನಲ್ಲಿ ತುಮಕೂರಿನಲ್ಲಿ ಹೊಸ ಬಸ್ ನಿಲ್ದಾಣ ಸಾರ್ವಜನಿಕರಿಗೆ ಅನುಕೂಲವಾಗುವುದಕ್ಕೆ ಬದಲಾಗಿ ಅನಾನುಕೂಲವನ್ನೇ ಉಂಟು ಮಾಡುತ್ತಿದೆ. ಇನ್ನಾದರೂ ಈ ಸಮಸ್ಯೆಗೆ ಸರ್ಕಾರ ಪರಿಹಾರ ಒದಗಿಸಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ – ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ 

Share This Article