ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ನಮೀಬಿಯಾ ವಿರುದ್ಧ ನೆದರ್ಲ್ಯಾಂಡ್ ತಂಡ(NAM vs NED) 7 ವಿಕೆಟ್‌ಗಳ ಜಯಗಳಿಸಿದೆ.
ಟಾಸ್ ಗೆದ್ದ ನೆದರ್ಲ್ಯಾಂಡ್ ಬೌಲಿಂಗ್ ಆಯ್ದುಕೊಂಡಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ನಮೀಬಿಯಾ 8 ವಿಕೆಟ್‌ಗೆ 156 ರನ್ ಬಾರಿಸಿತು. ಈ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ 18 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು. ನೆದರ್ಲ್ಯಾಂಡ್‌ಗೆ ಇದು ಎರಡನೇ ಪಂದ್ಯವಾಗಿತ್ತು. ಇದಕ್ಕೂ ಮುನ್ನ ಪಾಕಿಸ್ತಾನ ವಿರುದ್ಧ ಸೋಲು ಕಂಡಿತ್ತು. ಇದನ್ನೂ ಓದಿ: T20 World Cup | ಫೆ.15 ರಂದು ಇಂಡೋ – ಪಾಕ್ ಕದನ ಫಿಕ್ಸ್; ಮಂಡಿಯೂರಿದ ಪಾಕಿಸ್ತಾನ
ಚೇಸಿಂಗ್ ವೇಳೆ ನೆದರ್ಲ್ಯಾಂಡ್‌ಗೆ ಬಾಸ್ ಡಿ ಲೀಡೆ ಅವರು ಅರ್ಧಶತಕ ಬಾರಿಸಿ ನೆರವಾದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಅವರು 48 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿ ನೆರವಿನಿಂದ ಅಜೇಯ 72 ರನ್ ಬಾರಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಮೈಕೆಲ್ ಲೆವಿಟ್(28) ಮತ್ತು ಕಾಲಿನ್ ಅಕರ್ಮನ್(32) ಉತ್ತಮ ಸಾಥ್ ನೀಡಿದರು. ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಮಿಂಚಿದ ಬಾಸ್ ಡಿ ಲೀಡೆ 2 ವಿಕೆಟ್ ಕಿತ್ತರು. ಅವರ ಈ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿಯಿತು. ಉಳಿದಂತೆ ಲೋಗನ್ ವ್ಯಾನ್ ಬೀಕ್ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ನಮೀಬಿಯಾ ಪರ ಆರಂಭಿಕ ಬ್ಯಾಟರ್ ಜಾನ್ ಫ್ರೈಲಿಂಕ್ ಮತ್ತು ಜಾನ್ ನಿಕೋಲ್ ಲಾಫ್ಟಿ ಹೊರತುಪಡಿಸಿ ಉಳಿದವರು ಕಳಪೆ ಪ್ರದರ್ಶನ ನೀಡಿದರು. ಇದು ತಂಡಕ್ಕೆ ಹಿನ್ನಡೆಯಾಯಿತು. ಜಾನ್ ನಿಕೋಲ್ ಲಾಫ್ಟಿ 42 ರನ್ ಬಾರಿಸಿದರೆ, ಜಾನ್ ಫ್ರೈಲಿಂಕ್ 30 ರನ್ ಗಳಿಸಿದರು. ಉಳಿದಂತೆ ಜೆಜೆ ಸ್ಮಿತ್ 22 ರನ್ ಕೊಡುಗೆ ನೀಡಿದರು. ನಮೀಬಿಯಾ ಪರ ಬರ್ನಾರ್ಡ್ ಸ್ಕೋಲ್ಟ್ಜ್, ರೂಬೆನ್ ಟ್ರಂಪೆಲ್‌ಮನ್ ಮತ್ತು ಜಾನ್ ನಿಕೋಲ್ ಲಾಫ್ಟಿ ತಲಾ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: T20 World Cup | ಪಾಕ್ ಬೇಡಿಕೆ ಸಾರಾ ಸಗಟಾಗಿ ತಿರಸ್ಕರಿಸಿದ ಐಸಿಸಿ – ನಿರ್ಧಾರ ತಿಳಿಸಲು ಡೆಡ್‌ಲೈನ್ ಫಿಕ್ಸ್


