IPL 2025 | 10 ತಂಡಗಳ ನಾಯಕರ ಹೆಸರು ಫೈನಲ್‌ – 9 ಮಂದಿ ಭಾರತೀಯರದ್ದೇ ಆರ್ಭಟ

Public TV
2 Min Read

ಐಸಿಸಿ ಚಾಂಪಿಯನ್ಸ್ ಟ್ರೋಫಿ, ಡಬ್ಲ್ಯೂಪಿಎಲ್‌ ಬಳಿಕ ಕ್ರಿಕೆಟ್ ಪ್ರಿಯರ ಚಿತ್ತ ಈಗ ಐಪಿಎಲ್ ಕಡೆ ತಿರುಗಿದೆ. ಪ್ರತಿಷ್ಠಿಯ 18ನೇ ಆವೃತ್ತಿಯ ಈ ಕ್ರೀಡಾಕೂಟ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಕ್ರಿಕೆಟ್‌ ಪ್ರೇಮಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಈಗಾಗಲೇ ಎಲ್ಲಾ ಹತ್ತು ಫ್ರಾಂಚೈಸ್ ಗಳು ತಮ್ಮತಮ್ಮ ನಾಯಕರ ಹೆಸರನ್ನು ಆಯಾ ಫ್ರಾಂಚೈಸಿಗಳು ಅಂತಿಮಗೊಳಿಸಿವೆ.

ಹಿಂದೆಲ್ಲಾ ಟೂರ್ನಿಗಳಲ್ಲಿ ವಿದೇಶಿ ಆಟಗಾರರೇ ಹೆಚ್ಚಾಗಿ ನಾಯಕರಾಗಿದ್ದ ಉದಾಹರಣೆಗಳಿವೆ. ಆದರೆ, ಈ ಬಾರಿಯ ಐಪಿಎಲ್ ನಲ್ಲಿ ಒಬ್ಬರು ಮಾತ್ರವೇ ವಿದೇಶಿ ಆಟಗಾರ ನಾಯಕನಾಗಿದ್ದು, ಮಿಕ್ಕೆಲ್ಲ ತಂಡಗಳಿಗೆ ಟೀಂ ಇಂಡಿಯಾದ ಆಟಗಾರರೇ ನಾಯಕರಾಗಿರುವುದು ವಿಶೇಷ. ಈ ಮೊದಲು ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಾದ ಡೇವಿಡ್ ವಾರ್ನರ್, ಆಡಂ ಗಿಲ್ಕ್ರಿಸ್ಟ್, ಶೇನ್ ವಾರ್ನ್, ಸ್ಟೀವನ್ ಸ್ಮಿತ್, ಕ್ಯಾಮರೂನ್ ವೈಟ್, ಶ್ರೀಲಂಕಾದ ಕುಮಾರ ಸಂಗಕ್ಕರ, ನ್ಯೂಜಿಲ್ಯಾಂಡ್ ದೇಶದ ಕೇನ್ ವಿಲಿಯಮ್ಸನ್, ಡೇನಿಯಲ್ ವೆಟ್ಟೋರಿ, ಬ್ರಿಂಡನ್‌ ಮಕಲಂ ಮುಂತಾದ ವಿದೇಶಿ ಆಟಗಾರರು ಫ್ರಾಂಚೈಸ್ ನಾಯಕರಾಗಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನೂ ಮೂವರು ವಿದೇಶಿ ಆಟಗಾರರು ಮುನ್ನಡೆಸಿದ್ದರು. 2009ರಲ್ಲಿ ಕೆವಿನ್ ಪೀಟರ್ಸನ್, 2011 ಮತ್ತು 2012ರಲ್ಲಿ ಡೇನಿಯಲ್ ವೆಟ್ಟೋರಿ ಮತ್ತು 2022, 2023 ಮತ್ತು 2024ರ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ನಾಯಕರಾಗಿದ್ದರು. ಇದೇ ರೀತಿ ಬಹುತೇಕ ಎಲ್ಲಾ ಫ್ರಾಂಚೈಸ್ ನಾಯಕರೂ ಕೆಲವು ಆವೃತ್ತಿಗಳಲ್ಲು ನಾಯಕರಾಗಿದ್ದರು. ಉದಾಹರಣೆಗೆ, ಮುಂಬೈ ಇಂಡಿಯನ್ಸ್ ತಂಡವನ್ನು ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್ (2008), ವೆಸ್ಟ್ ಇಂಡೀಸ್ ತಂಡದ ಡ್ವೇನ್‌ ಬ್ರಾವೋ (2010) ಮತ್ತು ಕೀರನ್ ಪೊಲಾರ್ಡ್ (2014 – 2021) ಸ್ಟ್ಯಾಂಡ್ ಇನ್ ನಾಯಕರಾಗಿದ್ದರು. ಆದ್ರೆ 18ನೇ ಆವೃತ್ತಿಯಲ್ಲಿ ಭಾರತೀಯರ ಆರ್ಭಟವೇ ಜೋರಾಗಿದೆ. 10 ತಂಡಗಳ ಪೈಕಿ 9 ಮಂದಿ ಭಾರತೀಯರೇ ನಾಯಕರಾಗಿ ಮಿಂಚುತ್ತಿದ್ದಾರೆ.

ಚಾಂಪಿಯನ್‌ಗೆ ಪಟ್ಟ ಕಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌
ಡೆಲ್ಲಿ ಕ್ಯಾಪಿಟಲ್ಸ್ ತಂಡವೂ ನಾಯಕರು ಯಾರು ಎನ್ನುವುದನ್ನು ಶುಕ್ರವಾರ (ಮಾ. 14) ಬಹಿರಂಗಗೊಳಿಸಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಆಲ್ರೌಂಡ್ ಸಾಧನೆ ತೋರಿದ ಮತ್ತು ತಂಡದ ಸಹ ಆಟಗಾರರಿಂದ ಬಾಪೂ ಎಂದು ಕರೆಯಲ್ಪಡುವ ಅಕ್ಷರ್ ಪಟೇಲ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕರ್ನಾಟಕ ಮೂಲದ ಕೆ.ಎಲ್.ರಾಹುಲ್ ಅವರನ್ನೂ 14 ಕೋಟಿಗೆ ಖರೀದಿಸಿತ್ತು. ಅಕ್ಷರ್ ಪಟೇಲ್ ಮತ್ತು ಕೆ.ಎಲ್.ರಾಹುಲ್ ನಡುವೆ ನಾಯಕತ್ವಕ್ಕೆ ಪೈಪೋಟಿ ನಡೆದಿತ್ತು. ಆದರೆ, ನಾಯಕನ ಜವಾಬ್ದಾರಿ ರಾಹುಲ್ ಬೇಡ ಎಂದ ಕಾರಣಕ್ಕಾಗಿ ಅಕ್ಷರ್ ಪಟೇಲ್‌ಗೆ ಕ್ಯಾಪ್ಟೆನ್ಸಿ ಒಲಿದು ಬಂತು ಎಂದು ಹೇಳಲಾಗುತ್ತಿದೆ.

ಐಪಿಎಲ್‌ನ 10 ತಂಡಗಳು ಮತ್ತು ನಾಯಕರ ಪಟ್ಟಿ ಹೀಗಿದೆ…

  1. ಮುಂಬೈ ಇಂಡಿಯನ್ಸ್ – ಹಾರ್ದಿಕ್ ಪಾಂಡ್ಯ
  2. ರಾಯಲ್ ಚಾಲೆಂಜರ್ಸ್ ಬೆಂಗಳೂರು – ರಜತ್ ಪಾಟೀದಾರ್
  3. ಕೋಲ್ಕತ ನೈಟ್ ರೈಡರ್ಸ್ – ಅಜಿಂಕ್ಯ ರಹಾನೆ
  4. ಚೆನ್ನೈ ಸೂಪರ್ ಕಿಂಗ್ಸ್ – ರುತುರಾಜ್ ಗಾಯಕ್ವಾಡ್
  5. ಗುಜರಾತ್ ಟೈಟನ್ಸ್ – ಶುಭ್ಮನ್ ಗಿಲ್
  6. ರಾಜಸ್ಥಾನ ರಾಯಲ್ಸ್ – ಸಂಜು ಸ್ಯಾಮ್ಸನ್
  7. ಲಕ್ನೋ ಸೂಪರ್ ಜೈಂಟ್ಸ್‌ – ರಿಷಭ್ ಪಂತ್
  8. ಪಂಜಾಬ್ ಕಿಂಗ್ಸ್ – ಶ್ರೇಯಸ್ ಐಯ್ಯರ್
  9. ಡೆಲ್ಲಿ ಕ್ಯಾಪಿಟಲ್ಸ್ – ಅಕ್ಷರ್ ಪಟೇಲ್
  10. ಸನ್ ರೈಸರ್ಸ್ ಹೈದರಾಬಾದ್ – ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ).
Share This Article