ದೇಶದ ಆರ್ಥಿಕತೆ ದುರ್ಬಲಗೊಳ್ಳಲು ಮೊಘಲರು, ಬ್ರಿಟಿಷರು ಕಾರಣ – ಯೋಗಿ ಆದಿತ್ಯನಾಥ್

Public TV
1 Min Read

ಮುಂಬೈ: ಭಾರತದ ಆರ್ಥಿಕತೆ ದುರ್ಬಲಗೊಳ್ಳಲು ಮೊಘಲರು ಹಾಗೂ ಬ್ರಿಟಿಷರೇ ಕಾರಣ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈನಲ್ಲಿ ನಡೆದ ವಿಶ್ವ ಹಿಂದೂ ಆರ್ಥಿಕ ವೇದಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊಘಲರ ಆಗಮನಕ್ಕೂ ಮುನ್ನ ಭಾರತವು ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿತ್ತು. ಆದರೆ ಬ್ರಿಟಿಷರು ದೇಶವನ್ನು ತೊರೆಯುವ ಹೊತ್ತಿಗೆ ಆರ್ಥಿಕತೆಯ ವೈಭವದ ನೆರಳು ಮಾತ್ರ ಉಳಿದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೊಘಲರು ಭಾರತದ ಮೇಲೆ ದಾಳಿ ಮಾಡುವುದಕ್ಕೂ ಮೊದಲು ದೇಶವು ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿತ್ತು. ಅಲ್ಲದೆ ಮೊಘಲರು ಭಾರತಕ್ಕೆ ಬರುವ ಹೊತ್ತಿಗೆ ಭಾರತವು ವಿಶ್ವದ ಆರ್ಥಿಕತೆಯ ಮೂರನೇ ಒಂದು ಭಾಗದಷ್ಟು ಪಾಲನ್ನು ಹೊಂದಿತ್ತು ಎಂದು ವಿವರಿಸಿದ್ದಾರೆ.

ಮೊಘಲರ ಯುಗದಲ್ಲಿ ಭಾರತವು ಶೇ.36ಕ್ಕಿಂತ ಹೆಚ್ಚಿನ ಪಾಲನ್ನು ಹೊಂದುವ ಮೂಲಕ ವಿಶ್ವದ ಆರ್ಥಿಕತೆಯಲ್ಲಿ ಅತಿದೊಡ್ಡ ದೇಶವಾಗಿತ್ತು. ಮೊಘಲರ ಯುಗ ಅಂತ್ಯವಾಗಿ ಬ್ರಿಟಿಷರು ಭಾರತಕ್ಕೆ ಆಗಮಿಸುವ ಹೊತ್ತಿಗೆ ಭಾರತದ ಪಾಲು ಶೇ.20ಕ್ಕೆ ಇಳಿದಿತ್ತು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ತಿಳಿಸಿದ್ದಾರೆ.

ದೇಶದಲ್ಲಿ ಬ್ರಿಟಿಷರ 200 ವರ್ಷಗಳ ಆಳ್ವಿಕೆಯಲ್ಲಿ, ಭಾರತೀಯ ಆರ್ಥಿಕತೆಯನ್ನು ದುರ್ಬಲಗೊಳಿಸಿದರು. ಬ್ರಿಟಿಷರು ಭಾರತ ಬಿಟ್ಟು ತೊಲಗುವ ಹೊತ್ತಿಗೆ ಕೇವಲ ಶೇ.4ಕ್ಕೆ ಇಳಿದಿತ್ತು ಎಂದು ಒತ್ತಿ ಹೇಳಿದರು.

ಮುಂಬರುವ ವರ್ಷಗಳಲ್ಲಿ ಉತ್ತರ ಪ್ರದೇಶವನ್ನು 1 ಟ್ರಿಲಿಯನ್ ಆರ್ಥಿಕತೆಯ ರಾಜ್ಯವನ್ನಾಗಿ ಮಾಡಲಾಗುವುದು ಎಂದು ಈ ತಿಂಗಳ ಆರಂಭದಲ್ಲಿ ಯೋಗಿ ಆದಿತ್ಯನಾಥ್ ಹೇಳಿದ್ದರು.

ನಾವು ಅದ್ಭುತ ಗುರಿ ಹೊಂದಿರುವ ಅಧಿಕಾರಿಗಳು ಹಾಗೂ ಮಂತ್ರಿಗಳನ್ನು ಹೊಂದಿದ್ದೇವೆ. ಅಭಿವೃದ್ಧಿ ಯೋಜನೆಗಳು ರಾಜ್ಯದ ಜನರನ್ನು ತಲುಪುತ್ತಿವೆಯೆ ಎಂಬುದನ್ನು ಅರಿಯಲು ಸಂವಾದಗಳನ್ನು ನಡೆಸುತ್ತಿದ್ದೇವೆ. ನಮ್ಮ ಗುರಿ ಉತ್ತರ ಪ್ರದೇಶವನ್ನು 1 ಟ್ರಿಲಿಯನ್ ಆರ್ಥಿಕತೆಯ ರಾಜ್ಯವನ್ನಾಗಿಸುವುದಾಗಿದೆ ಎಂದು ಒತ್ತಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *