ಹುತಾತ್ಮ ಯೋಧರ ಪಾರ್ಥಿವ ಶರೀರ ಶನಿವಾರ ಬೆಳಗ್ಗೆ ಏರ್ ಲಿಫ್ಟ್

Public TV
2 Min Read

ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದನ ದಾಳಿಯಲ್ಲಿ ವೀರ ಮರಣ ಹೊಂದಿದ ಯೋಧರ ಪಾರ್ಥಿವ ಶರೀರವನ್ನು ಸ್ವಗ್ರಾಮಗಳಿಗೆ ತಲುಪಿಸಲು ಶನಿವಾರ ಬೆಳಗ್ಗೆ ಏರ್ ಲಿಫ್ಟ್ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ದೆಹಲಿಯಿಂದ ತೆರಳಬೇಕಿದ್ದ ವಿಮಾನ ಕಾರಣಾಂತರಗಳಿಂದ ಅಂತಿಮ ಕ್ಷಣದಲ್ಲಿ ರದ್ದಾದ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ ಪಾಲಂ ವಾಯು ನೆಲೆಯಿಂದ ಏರ್ ಲಿಫ್ಟ್ ಆಗಲಿದೆ. ತಮಿಳುನಾಡು ಮೂಲದ ಯೋಧ ಸುಬ್ರಹ್ಮಣಂ ಸೇರಿದಂತೆ ಮಂಡ್ಯದ ಗುರು ಅವರ ಪಾರ್ಥಿವ ಶರೀರವೂ ನಾಳೆ ಬೆಳಗ್ಗೆ ಏರ್ ಲಿಫ್ಟ್ ಮಾಡಲಾಗುತ್ತದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಮಾಹಿತಿ ನೀಡಿದ್ದಾರೆ.

ರಾತ್ರಿಯೇ ಏರ್ ಲಿಫ್ಟ್ ಮಾಡಲು ತೀರ್ಮಾನ ಮಾಡಿದ್ದರು ಕೂಡ ದೆಹಲಿಯಲ್ಲಿ ಹಿಮದ ಪ್ರಮಾಣ ಹೆಚ್ಚಾಗಿರುವುದರಿಂದ ವಿಮಾನ ಹಾರಾಟ ರದ್ದುಪಡಿಸಲಾಗಿದೆ. ಉಳಿದಂತೆ ನಾಳೆ ಬೆಳಗ್ಗೆ ಪಾರ್ಥಿವ ಶರೀರ ಏರ್ ಲಿಫ್ಟ್ ಆಗಲಿದ್ದು, ವಿಶೇಷ ವಿಮಾನದಲ್ಲಿ ಬೆಂಗಳೂರಿನತ್ತ ತರಲಾಗುತ್ತಿದೆ. ಬೆಳಗ್ಗೆ 8 ಗಂಟೆಗೆ ಪಾರ್ಥಿವ ಶಾರೀರ ಬೆಂಗಳೂರು ತಲುಪುವ ಸಾಧ್ಯತೆ ಇದ್ದು, ನಾಳೆ ಸಂಜೆ ಗುರು ಅವರ ಅಂತ್ಯಕ್ರಿಯೆ ನಡೆಯಲಿದೆ. ಸ್ವಗ್ರಾಮದಲ್ಲಿ ಸಾರ್ವಜನಿಕರಿಗೆ ದರ್ಶನ ಪಡೆಯಲು ಅವಕಾಶವಿದೆ.

ಉತ್ತರಪ್ರದೇಶ, ಪಂಜಾಬ್, ಹರಿಯಾಣ ಸೇರಿದಂತೆ ಹತ್ತಿರದ ರಾಜ್ಯಗಳಿಗೆ ಸುಮಾರು 17 ಟ್ರಕ್ ಮೂಲಕ ಕೊಂಡ್ಯೊಲಾಗುತ್ತಿದೆ. ಭಾರತದ ಸೈನಿಕರು ರಾಜ್ಯ ಸರ್ಕಾರಗಳಿಗೆ ಪಾರ್ಥಿವ ಶರೀರವನ್ನು ಹಸ್ತಾಂತರ ಮಾಡುತ್ತಾರೆ. ಉಳಿದಂತೆ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ ಯೋಧರ ಪಾರ್ಥಿವ ಶರೀರವನ್ನು ಏರ್ ಲಿಫ್ಟ್ ಮಾಡಲಾಗುತ್ತಿದೆ.

ಬೆಂಗಳೂರಿನ ವಿಮಾನ ನಿಲ್ದಾಣದಿಂದ ಮಂಡ್ಯಕ್ಕೆ ರಸ್ತೆ ಮಾರ್ಗದ ಮೂಲಕ ಪಾರ್ಥಿವ ಶರೀರವನ್ನು ಕೊಂಡ್ಯೊಲಾಗುತ್ತದೆ. ನಾಳೆ ಸಂಜೆ 4 ಗಂಟೆಗೆ ವೇಳೆಗೆ ಯೋಧ ಗುರು ಅವರ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭಿಸಿದೆ. ಆದರೆ ಯೋಧರ ಪಾರ್ಥಿವ ಶರೀರದ ಏರ್ ಲಿಫ್ಟ್ ತಡವಾಗುತ್ತಿರುವ ಕಾರಣ ಅಂತ್ಯಕ್ರಿಯೆ ತಡವಾಗುವ ಸಾಧ್ಯತೆ ಇದೆ.

ಯೋಧ ಗುರು ಅವರ ಅಂತಿಮ ಕಾರ್ಯ ನಡೆಯುವ ಸ್ಥಳದಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದ್ದಾರೆ. ಉಳಿದಂತೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಸಿಎಂ ಅಂತಿಮ ನಮನ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯೋಧ ಗುರು ಅವರ ಅಂತಿಮ ದರ್ಶನ ಪಡೆಯಲಿದ್ದು, ಈ ಕುರಿತು ಮಂಡ್ಯದ ಕೆಎಂ ದೊಡ್ಡಿಯಲ್ಲಿ ಸಚಿವ ಡಿಸಿ ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ.

ಸ್ವಗ್ರಾಮದಲ್ಲಿ ಬೆಳಗ್ಗೆ 11 ಗಂಟೆಯವರೆಗೂ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಸುಮಾರು ಎರಡು ಕಿಮೀ ಮೆರವಣಿಗೆಯಲ್ಲಿ ಅಂತ್ಯ ಸಂಸ್ಕಾರ ಮಾಡುವ ಸ್ಥಳಕ್ಕೆ ಯೋಧರ ಪಾರ್ಥಿವ ಶರೀರ ತರಲಾಗುತ್ತದೆ. ನಾಲ್ಕು ಗಂಟೆ ಸುಮಾರಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ. ಮಳವಳ್ಳಿ ಮದ್ದೂರು ರಸ್ತೆಯ ಪಕ್ಕದಲ್ಲೇ ಸುಮಾರು ಮೂವತ್ತು ಗುಂಟೆ ಸರ್ಕಾರಿ ಸ್ಥಳವಿದು, ಈ ಸ್ಥಳವನ್ನು ಅಂತ್ಯ ಸಂಸ್ಕಾರಕ್ಕೆ ಮೀಸಲಿಡಲಾಗಿದೆ. ಇದಕ್ಕೆ ಕುಟುಂಬದವರ ಒಪ್ಪಿಗೆಯೂ ಇದ್ದು, ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ತಮ್ಮಣ್ಣ ಅವರು ಸ್ಪಷ್ಟಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *