ಸಿಎಂ ರಾಜೀನಾಮೆ ಕೊಡೋ ಆತಂಕದಿಂದ ಕೋವಿಡ್ ಅಸ್ತ್ರ ಪ್ರಯೋಗ: ವಿಜಯೇಂದ್ರ

Public TV
1 Min Read

-ಕಾಂಗ್ರೆಸ್‌ನಲ್ಲಿ ಸಿಎಂ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ!

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕಾದ ಪರಿಸ್ಥಿತಿಗೆ ಬಂದು ನಿಂತಿದ್ದು, ಇದೇ ಕಾರಣಕ್ಕೆ ಕೋವಿಡ್ (Covid Scam Case) ಅಸ್ತ್ರ ಪ್ರಯೋಗಿಸಿದ್ದಾರೆ. ಕಾಂಗ್ರೆಸ್ (Congress) ಸರ್ಕಾರದ ಬೆದರಿಕೆಗಳು, ಬೆದರಿಕೆ ತಂತ್ರಗಳು, ಕುತಂತ್ರ ಇದ್ಯಾವುದಕ್ಕೂ ಕೂಡ ಭಯ ಪಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y Vijayendra) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ ಸೇರಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಳೆದ ಕೆಲವು ದಿನಗಳಿಂದ ಹೋರಾಟ ಮಾಡುತ್ತ ಬಂದಿದೆ. ಮುಖ್ಯಮಂತ್ರಿಗಳ ಪರಿಸ್ಥಿತಿ, ಸಚಿವರ ಪರಿಸ್ಥಿತಿ ಸಹಜವಾಗಿಯೇ ನಮಗೆ ಅರ್ಥವಾಗುತ್ತಿದೆ. ಸಿಎಂ ರಾಜೀನಾಮೆ ಕೊಡಬೇಕಾದ ಸಂದರ್ಭ ಬಂದಿದ್ದು, ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕಾಗಿಯೇ ಪಿತೂರಿ ನಡೆದಿದೆ. ಸಂದರ್ಭ ಬಂದಾಗ ಅದಕ್ಕೆ ಸೂಕ್ತ ಉತ್ತರ ಕೊಡಲಿದ್ದೇವೆ ಎಂದಿದ್ದಾರೆ.

ಎತ್ತಿನಹೊಳೆ ಯೋಜನೆ: ಕಳೆದ ಹಲವಾರು ದಶಕಗಳಿಂದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಭಾಗಕ್ಕೆ ನೀರು ಕೊಡುವ ಯೋಜನೆ ಇದಾಗಿದೆ. ಇದರ ಆರಂಭದಲ್ಲಿ ಸುಮಾರು 8,500 ಕೋಟಿ ರೂ. ಯೋಜನಾ ವೆಚ್ಚ ಇದ್ದುದು ಈಗ ಅದು 20-22,500 ಕೋಟಿಗೆ ರೂ.ಗೆ ಏರಿದೆ. ಈ ಯೋಜನೆಗೆ ಚಾಲನೆ ನೀಡಿದ್ದು ಸಂತೋಷ. ಆದರೆ, ಅದರ ಮೂಲ ಉದ್ದೇಶ ಈಡೇರಲಿದೆಯೇ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿದೆ ಎಂದರು.

ಸಿಎಂ, ಡಿಸಿಎಂ ಕ್ರೆಡಿಟ್ ವಾರ್ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳು ಹೋಗುವ ಮುಂಚಿತವಾಗಿಯೇ ಗುರುವಾರ ಡಿಸಿಎಂ ಡಿ.ಕೆ. ಶಿವಕುಮಾರ್ (D.K Shivakumar) ಅವರು ಪೂಜೆ ಪುನಸ್ಕಾರ ಮಾಡಿದ್ದನ್ನು ಗಮನಿಸಿದ್ದೇನೆ. ಮುಖ್ಯಮಂತ್ರಿ ಸ್ಥಾನ ಅಲುಗಾಡುವ ಸಂದರ್ಭ ಇದಾಗಿದೆ. ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಶಿವಕುಮಾರ್ ಕೂಡ ಆ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇರುವವರು. ಕ್ರೆಡಿಟ್ ತೆಗೆದುಕೊಳ್ಳುವುದು ದೊಡ್ಡ ವಿಚಾರವಲ್ಲ; ಎತ್ತಿನಹೊಳೆ ಯೋಜನೆ ಆ ಭಾಗದ ಜನರಿಗೆ ಅನುಕೂಲ ಆಗಬೇಕು. ಅದರಲ್ಲಿ ಪ್ರಾಮಾಣಿಕತೆ ತೋರಿಸಿದರೆ ಸಾಕು ಎಂದಿದ್ದಾರೆ.

Share This Article