– ಎಸ್ಕೇಪ್ ಆಗ್ತಿದ್ದ ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು
ಹಾಸನ: ಕೋರ್ಟ್ ಆವರಣದಲ್ಲೇ ಪತಿಯೇ ಪತ್ನಿಯ ಕತ್ತು ಸೀಳಿ ಕೊಲೆ ಮಾಡಲು ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಪತ್ನಿ ಆಸ್ಪತ್ರೆಯಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ.
ಚೈತ್ರಾ (32) ಕೊಲೆಯಾದ ಮಹಿಳೆಯಾಗಿದ್ದು, ಶಿವಕುಮಾರ್ ಕೊಲೆ ಆರೋಪಿಯಾಗಿದ್ದಾನೆ. ಹೊಳೆನರಸೀಪುರ ತಾಲ್ಲೂಕಿನ, ತಟ್ಟೆಕೆರೆ ಗ್ರಾಮದ ಶಿವಕುಮಾರ್ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ, ನುಗ್ಗೇಹಳ್ಳಿ ಹೋಬಳಿ ಅವೇರಹಳ್ಳಿ ಗ್ರಾಮದ ಚೈತ್ರಾ ಕಳೆದ 7 ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಎರಡು ಹೆಣ್ಣುಮಕ್ಕಳಿದ್ದು, ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಮೂರು ವರ್ಷಗಳ ಹಿಂದೆ ಶಿವಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದನು. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೆ ಕಾಂತಾರ ಸಿನಿಮಾದಿಂದ ಮೊದಲ ಹಾಡು ಗಿಫ್ಟ್
ಚೈತ್ರಾ ಜೀವನಾಂಶ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು. ಇಂದು ಹೊಳೆನರಸೀಪುರದ ನ್ಯಾಯಾಲಯದಲ್ಲಿ ಲೋಕ ಅದಾಲತ್ ನಡೆದಿದ್ದು, ಇಲ್ಲಿ ನ್ಯಾಯಧೀಶರು ದಂಪತಿ ಮನವೊಲಿಸಿ ಒಂದಾಗಿ ಬಾಳುವಂತೆ ತಿಳಿ ಹೇಳಿದ್ದರು. ನಂತರ ಇಬ್ಬರು ಪರಸ್ಪರ ಮಾತನಾಡಿಕೊಂಡು ಬರುವಂತೆ ಕಳುಹಿಸಿದ್ದರು. ಈ ವೇಳೆ ಚೈತ್ರಾ ಮಗಳನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದಾಳೆ. ಆಕೆಯನ್ನು ಹಿಂಬಾಲಿಸಿ ಹೋದ ಶಿವಕುಮಾರ್ ಶೌಚಾಲಯದಲ್ಲೇ ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಚೈತ್ರಾ ಕುಸಿದು ಬಿದ್ದು ರಕ್ತಸ್ರಾವದಿಂದ ಒದ್ದಾಡುತ್ತಿದ್ದನ್ನು ಕಂಡ ವಕೀಲರು ಹಾಗೂ ಸಾರ್ವಜನಿಕರು ಕೂಡಲೇ ಆಕೆಯನ್ನು ಹೊಳೆನರಸೀಪುರ ಆಸ್ಪತ್ರೆಗೆ ದಾಖಲಿಸಿ, ತಪ್ಪಿಸಿಕೊಂಡು ಓಡುತ್ತಿದ್ದ ಶಿವಕುಮಾರ್‌ನ ಬೆನ್ನತ್ತಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಮಡಿಕೇರಿಗೆ ತೆರಳುತ್ತಿದ್ದ KSRTC ಬಸ್ ಅಪಘಾತ – ಜನರ ರಕ್ಷಣೆಗೆ ಮುಂದಾದ ಅಪ್ಪಚ್ಚು ರಂಜನ್
ಚೈತ್ರಾಗೆ ಹೊಳೆನರಸೀಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್‌ನಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ಕೆಲವೇ ನಿಮಿಷಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಚೈತ್ರಾ ಕೊನೆಯುಸಿರೆಳೆದಿದ್ದಾಳೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.