ಸಿಎಂ ಸಲ್ಲಿಸಿದ್ದ ರಿಟ್‌ ಅರ್ಜಿ ವಜಾ – ರಾಜ್ಯಪಾಲರ ಪ್ರಾಸಿಕ್ಯೂಷನ್‌ ಆದೇಶ ಎತ್ತಿಹಿಡಿದ ಹೈಕೋರ್ಟ್‌

Public TV
2 Min Read

ಬೆಂಗಳೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಹಿನ್ನಡೆಯಾಗಿದ್ದು ತನಿಖೆಗೆ ಹೈಕೋರ್ಟ್‌ (High Court) ಗ್ರೀನ್‌ ಸಿಗ್ನಲ್‌ ನೀಡಿದೆ.

ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್‌ ಸಿದ್ದರಾಮಯ್ಯ (CM Siddaramaiah) ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು  ವಜಾಗೊಳಿಸಿದೆ.

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ಪ್ರಾಸಿಕ್ಯೂಷನ್‌ಗೆ ನೀಡಿದ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ (CM Siddaramaiah) ಸಲ್ಲಿಸಿದ್ದ ರಿಟ್ ಅರ್ಜಿಯ ತೀರ್ಪನ್ನು ನ್ಯಾ.ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಮಂಗಳವಾರ ಪ್ರಕಟಿಸಿತು. ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆ ಸೆಕ್ಷನ್ 17ಎ ಅಡಿ  ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿದ ಆದೇಶ ಸರಿ ಎಂದು ಆದೇಶದಲ್ಲಿ ಕೋರ್ಟ್‌ ತಿಳಿಸಿದೆ.

ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17 ಎ ಅಡಿ ಖಾಸಗಿ ದೂರುದಾರರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಬಹುದು. ರಾಜ್ಯಪಾಲರು ದೂರಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿ ದಾಖಲೆಗಳನ್ನು ಅಧ್ಯಯನ ಮಾಡಿಯೇ ಅನುಮತಿ ನೀಡಿದ್ದಾರೆ. ಹೀಗಾಗಿ ರಾಜ್ಯಪಾಲರ ಆದೇಶ ಸಮರ್ಪಕವಾಗಿದೆ ಎಂದು ರಾಜ್ಯಪಾಲರ ನಿರ್ಧಾರವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿಚಾರಣೆ ವೇಳೆ ಸಮರ್ಥಿಸಿಕೊಂಡಿದ್ದರು.

ಕೋರ್ಟ್‌ ತೀರ್ಪಿನ ಸಾರಾಂಶ ಮಾತ್ರ ಈಗ ಲಭ್ಯವಾಗಿದ್ದು ಮಧ್ಯಾಹ್ನ 2:30ಕ್ಕೆ  ಆದೇಶದ ಪ್ರತಿ ಹೈಕೋರ್ಟ್‌ ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ ಆಗಲಿದೆ. ಇದನ್ನೂ ಓದಿ: MUDA Scam | ಸಿದ್ದರಾಮಯ್ಯಗೆ ಉರುಳಾದ 14 ಸೈಟ್‌ – ಏನಿದು ಹಗರಣ? ಬೆಳಕಿಗೆ ಬಂದಿದ್ದು ಹೇಗೆ?

ಮುಡಾದಲ್ಲಿ ಪ್ರಭಾವ ಬಳಸಿ ಭಾರೀ ಹಗರಣ ಮಾಡಿದ್ದಾರೆ ಎಂದು ಆರೋಪಿಸಿ  ಮೈಸೂರು ಮೂಲದ ಸ್ನೇಹಮಯಿ ಕೃಷ್ಣ, ಮಡಿಕೇರಿಯ ಟಿಜೆ ಅಬ್ರಹಾಂ ಹಾಗೂ ಪ್ರದೀಪ್‌ ಅವರು  ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಈ ಮೂರೂ ಅರ್ಜಿಗಳನ್ನು ಒಟ್ಟಿಗೆ ಸೇರಿಸಿ ಆಗಸ್ಟ್‌ 17 ರಂದು ಪ್ರಾಸಿಕ್ಯೂಷನ್‌ಗೆ  ರಾಜ್ಯಪಾಲರು ಅನುಮತಿ ನೀಡಿದ್ದರು.

ಸಿಎಂ ಮುಂದಿರುವ ಆಯ್ಕೆ ಏನು?
– ಹೈಕೋರ್ಟ್ ಆದೇಶ ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್‌ಗೆ ಹೋಗುವ ಸಾಧ್ಯತೆಯಿದೆ. ಈಗಾಗಲೇ ಸಿಎಂ ಕಾನೂನು ಪರಿಣಿತರ ಜೊತೆ ಚರ್ಚೆ ನಡೆಸಿದ್ದಾರೆ.
– ಹೈಕೋರ್ಟ್ ತೀರ್ಪು ಹಿನ್ನೆಲೆ ನೈತಿಕತೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅಥವಾ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೇ ತನಿಖೆ ಎದುರಿಸುವುದು.
– ಹೈಕಮಾಂಡ್ ಸಿಎಂ ಸ್ಥಾನದಿಂದ ಇಳಿಯಬೇಕು  ಎಂಬ ಒತ್ತಡ ಹಾಕಿದರೆ  ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ತಾವು ಹೇಳಿದವರನ್ನ ಸಿಎಂ ಮಾಡಬಹುದು.
– ತನಿಖೆ ಮುಗಿದ ಬಳಿಕ ಮತ್ತೆ ಸಿಎಂ ಸ್ಥಾನವನ್ನು ಏರುವುದು.

Share This Article