ಚಿನ್ನಾಭರಣ ನಮ್ಮ ಪೂರ್ವಜರದ್ದು, ವಾಪಸ್ ನೀಡಿ – ಲಕ್ಕುಂಡಿ ನಿಧಿ ಪತ್ತೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

2 Min Read

ಗದಗ: ಮನೆಯ ಪಾಯ ತೆಗೆಯುವ ವೇಳೆ ನಿಧಿ (Treasure) ಪತ್ತೆಯಾದ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ನಿಧಿಯನ್ನು ಪ್ರಾಮಾಣಿಕವಾಗಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದ ಕುಟುಂಬ ಇದೀಗ ಈ ಚಿನ್ನಾಭರಣಗಳು ನಮ್ಮ ಪೂರ್ವಜರದ್ದು, ವಾಪಸ್ ನೀಡಿ ಎಂದು ಕೇಳಿದ್ದಾರೆ.

ಗದಗ (Gadag) ಜಿಲ್ಲೆಯಲ್ಲಿರುವ ಲಕ್ಕುಂಡಿ (Lakkundi) ಗ್ರಾಮ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಚಾಲುಕ್ಯರ ಕಾಲದಲ್ಲಿ ಬಂಗಾರ ನಾಣ್ಯಗಳನ್ನು ತಯಾರಿಸುವ ಠಂಕಸಾಲೆ ಇತ್ತು ಎನ್ನುವುದು ಇತಿಹಾಸದಿಂದ ಗೊತ್ತಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಗಂಗಮ್ಮ ರಿತ್ತಿ ಎಂಬುವವರ ಮನೆ ಅಡಿಪಾಯ ತೆಗೆಯುವ ವೇಳೆ ಚಿನ್ನದ ನಿಧಿ ಪತ್ತೆಯಾಗಿದೆ. ಗಂಗಮ್ಮ ಅವರದ್ದು ಮೂಲತಃ ಬಡಕುಟುಂಬ. ಹಳೇ ಮನೆ ಕೆಡವಿ ಹೊಸ ನಿರ್ಮಾಣ ಮಾಡಲು ಮುಂದಾಗಿದ್ದ ವೇಳೆ ಪತ್ತೆಯಾದ ನಿಧಿಯನ್ನು ರಿತ್ತಿ ಕುಟುಂಬ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದೆ. 470 ಗ್ರಾಂ ಚಿನ್ನಾಭರಣವೀಗ ರಿತ್ತಿ ಕುಟುಂಬಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆ. ಮನೆಕೆಲಸ ನಿಂತಿದೆ. ಮುಂದೆ ಏನು ಮಾಡಬೇಕು ಎಂಬ ಚಿಂತೆ ಕುಟುಂಬದ್ದಾಗಿದೆ. ಅನೇಕ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಬಡತನ ಕುಟುಂಬ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದೆ. ಅಧಿಕಾರಿಗಳು ಕೂಡ ಯಾವುದೇ ಸ್ಪಷ್ಟ ದಾರಿ ತೋರಿಸುತ್ತಿಲ್ಲ. ಹೀಗಾಗಿ ರಿತ್ತಿ ಕುಟುಂಬ ಆತಂಕದಲ್ಲಿದೆ. ಇದನ್ನೂ ಓದಿ: ಗಡಿಯಲ್ಲಿ ಮತ್ತೆ ಡ್ರೋನ್‌ ಹಾರಿಸಿ ಪಾಕ್‌ ಕಿತಾಪತಿ – ಗುಂಡು ಹಾರಿಸಿ ಉರುಳಿಸಿದ ಸೇನೆ

ಇತ್ತ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿ ರಮೇಶ ಮೂಲಿಮನಿ ಹಾಗೂ ಅವರ ತಂಡ ನಿಧಿ ಸಿಕ್ಕ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ. ನಂತರ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ, ಇದು ನಿಧಿಅಲ್ಲ, ಬಂಗಾರ ಮನೆಯಲ್ಲಿ ಸಿಕ್ಕಿದೆ ಎಂಬುದು ಮೆಲ್ನೊಟಕ್ಕೆ ಕಂಡು ಬರುತ್ತಿದೆ. ಆಭರಣಗಳನ್ನು ನೋಡಿದ್ರೆ ಸಾಕಷ್ಟು ಡ್ಯಾಮೇಜ್ ಆಗಿದ್ದು, ಮೇಲ್ನೋಟಕ್ಕೆ ಇದು ಅವರ ಕುಟುಂಬಕ್ಕೆ ಸೇರಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪುರಾತತ್ವ ಇಲಾಖೆ ಪರಿಶೀಲನೆ ನಂತರ ಸತ್ಯ ಗೊತ್ತಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಖರೀದಿಯಾಗದ ಮೆಕ್ಕೆಜೋಳ – ಹಾವೇರಿಯಲ್ಲಿ ರೈತರ ಪರದಾಟ

ಇನ್ನು, ಸರ್ಕಾರಕ್ಕೆ ಪ್ರಾಮಾಣಿಕವಾಗಿ ನಿಧಿ ಹಸ್ತಾಂತರ ಮಾಡಿದ ಕುಟುಂಬಕ್ಕೆ ಸಾಕಷ್ಟು ಜನರು, ಪುರಾತತ್ವ ಇಲಾಖೆ ಅಧಿಕಾರಿಗಳು ಸನ್ಮಾನ ಮಾಡಿ, ಅವರ ಆದರ್ಶವನ್ನು ಮೆಚ್ಚಿದರು. ಯಾವಾಗ ಇದು ನಿಧಿ ಅಲ್ಲ ಅಂತಾ ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳಿದ್ದೇ ತಡ, ಕುಟುಂಬಸ್ಥರು ಇದು ನಮ್ಮ ಪೂರ್ವಜರ ಚಿನ್ನ ಅಂತಾ ಹೇಳುತ್ತಿದ್ದಾರೆ. ಸುಮಾರು 60 ರಿಂದ 70 ಲಕ್ಷ ಮೌಲ್ಯದ ಚಿನ್ನಾಭರಣಗಳು ಸಿಕ್ಕಿದ್ದು, ಅದು ನಮ್ಮ ಪೂರ್ವಜರದ್ದು ಎಂದು ಹೇಳುತ್ತಿದ್ದಾರೆ. ಹೀಗಾಗಿ ರಿತ್ತಿ ಕುಟುಂಬ ಸದಸ್ಯರು, ಇದು ನಿಧಿ ಅಲ್ಲ ಅಂದ್ರೆ, ಆ ಚಿನ್ನವನ್ನು ನಮಗೆ ವಾಪಾಸ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ದಿನನಿತ್ಯ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ನೀರು ಕುಡಿಯುವುದು ಸೇಫಾ?

Share This Article