ಸಾಹಿಲ್‍ಗೆ ಬೆದರಿಕೆ ಹಾಕಿದ್ದೇ ಅಪ್ರಾಪ್ತೆಯ ಕೊಲೆಗೆ ಕಾರಣವಾಯ್ತಾ..?

Public TV
2 Min Read

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ನಡೆದ ಅಪ್ರಾಪ್ತೆಯ ಭೀಕರ ಹತ್ಯೆಗೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಆರೋಪಿ ಸಾಹಿಲ್‍ (Sahil) ಗೆ ಹುಡುಗಿ ಬೆದರಿಕೆ ಹಾಕಿದ್ದೇ ಕೊಲೆಗೆ ಕಾರಣವಾಯ್ತಾ ಎಂಬ ಪ್ರಶ್ನೆ ಮೂಡಿದೆ.

ಮೂಲಗಳ ಪ್ರಕಾರ, ಹುಡುಗಿ ತಮ್ಮ ಮೂರು ವರ್ಷಗಳ ಸಂಬಂಧ (Relationship) ವನ್ನು ಕೊನೆಗೊಳಿಸಲು ಬಯಸಿದ್ದರಿಂದ ಇಬ್ಬರೂ ಇತ್ತೀಚೆಗೆ ಜಗಳವಾಡುತ್ತಿದ್ದರು. ಆ ಬಳಿಕ ನನಗೆ ತೊಂದರೆ ಕೊಟ್ಟರೆ ಪೊಲೀಸರ ಮೊರೆ ಹೋಗುವುದಾಗಿ ಬೆದರಿಕೆ ಹಾಕಿದ್ದಳು. ಅಲ್ಲದೆ ಹುಡುಗಿ ತನ್ನ ಕೈಯಲ್ಲಿ ಇನ್ನೊಬ್ಬನ ಹೆಸರನ್ನು ಹಚ್ಚೆ ಹಾಕಿಸಿದ್ದಳು. ಕೆಲವು ದಿನಗಳ ಹಿಂದೆ ಹದಿಹರೆಯದವರು ಸಾಹಿಲ್‍ಗೆ ಆಟಿಕೆ ಪಿಸ್ತೂಲ್ (Toy Gun) ತೋರಿಸಿ ಹೆದರಿಸಿದ್ದಾರೆ. ಇವೆಲ್ಲವೂ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಫ್ರಿಡ್ಜ್ ಮತ್ತು ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಸಾಹಿಲ್, ಜನನಿಬಿಡ ಪ್ರದೇಶದಲ್ಲಿ ಹುಡುಗಿಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ಹುಡುಗಿ ನೆಲಕ್ಕೆ ಬೀಳುತ್ತಿದ್ದಂತೆಯೇ ಆಕೆಯ ಮೇಲೆ ಪದೇ ಪದೇ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ. ಈ ಎಲ್ಲಾ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ದೆಹಲಿ ಪೊಲೀಸರು ಉತ್ತರ ಪ್ರದೇಶದ ಬುಲಂದ್‍ಶಹರ್‍ನಲ್ಲಿರುವ ಆತನ ಚಿಕ್ಕಮ್ಮನ ಮನೆಯಿಂದ ಬಂಧಿಸಿದ್ದಾರೆ. ಸದ್ಯ ಕೊಲೆಯ ಹಿಂದಿನ ರಹಸ್ಯವೇನು..?, ಕೊಲೆಗೆ ಪ್ರೇರಣೆ ಏನು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಸಾಹಿಲ್ ತನ್ನ ಹೆಸರನ್ನು ಹುಡುಗಿಯ ಸ್ನೇಹಕ್ಕಾಗಿ ಬದಲಾಯಿಸಿದ್ದನೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರಿಯಕರನಿಂದ 16 ವರ್ಷದ ಹುಡುಗಿಯ ಬರ್ಬರ ಹತ್ಯೆ- ಆರೋಪಿ ಅರೆಸ್ಟ್

ಘಟನೆಯ ಕುರಿತು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ (Lt Governor VK Saxena) ಅವರನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal), ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅವರ ಜವಾಬ್ದಾರಿಯಾಗಿರುವುದರಿಂದ ಏನಾದರೂ ಮಾಡಿಕೊಳ್ಳಲಿ ಎಂದಿದ್ದಾರೆ. ಇನ್ನು ದೆಹಲಿ ಮಹಿಳಾ ಸಮಿತಿಯ ಮುಖ್ಯಸ್ಥೆ ಸ್ವಾತಿ ಮಲಿವಾಲ್ (Swati Maliwal) ಕೂಡ ಪೊಲೀಸರ ವಿರುದ್ಧವೇ ಕಿಡಿಕಾರಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸರು ಅಥವಾ ಕಾನೂನಿಗೆ ಯಾರೂ ಹೆದರುವುದಿಲ್ಲ ಎಂದು ಹೇಳಿದ್ದಾರೆ.

Share This Article