ಪ್ರಕೃತಿಯ ದೃಶ್ಯ ವೈಭವದ ಅನುಭೂತಿ ನೀಡಲಿದೆ ‘ನಗುವಿನ ಹೂಗಳ ಮೇಲೆ’ ಚಿತ್ರ

Public TV
2 Min Read

ನ್ನಡ ಚಿತ್ರರಂಗದ ಮಟ್ಟಿಗೆ ಹೊಸಾ ಆವೇಗವೊಂದರ ಪರ್ವ ಕಾಲ ಶುರುವಾಗಿ ಒಂದಷ್ಟು ವರ್ಷಗಳು ಕಳೆದಿವೆ. ಈಗ ಎಲ್ಲರ ಗಮನವಿರುವುದು ಹೊಸ ವರ್ಷವನ್ನು ಯಾವೆಲ್ಲ ಬಗೆಯ ಸಿನಿಮಾಗಳು ಕಳೆಗಟ್ಟಿಸಲಿವೆಯೆಂಬ ಪುಳಕದಂತಹ ನಿರೀಕ್ಷೆ ಮಾತ್ರ. ಆ ದೃಷ್ಟಿಯಲ್ಲಿ ಒಂದಷ್ಟು ಕಣ್ಣಾಡಿಸಿದರೆ ಕೆಲವಾರು ಸಿನಿಮಾಗಳು ಗಮನ ಸೆಳೆಯುತ್ತವೆ. ಆ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಚಿತ್ರ ವೆಂಕಟ್ ಭಾರದ್ವಾಜ್ ನಿರ್ದೇಶನದ `ನಗುವಿನ ಹೂಗಳ ಮೇಲೆ’ ಚಿತ್ರ.

ಈಗಾಗಲೇ ಹಾಡುಗಳೂ ಸೇರಿದಂತೆ ನಾನಾ ರೀತಿಯಲ್ಲಿ ಸಂಚಲನ ಸೃಷ್ಟಿಸಿರುವ ಈ ಚಿತ್ರ, ಇದೇ ಫೆಬ್ರವರಿ 9ರಂದು ತೆರೆಗಾಣುತ್ತಿದೆ. ವೆಂಕಟ್ ಭಾರದ್ವಾಜ್ ನಿರ್ದೇಶನದ ಸಿನಿಮಾ ಅಂದರೆ, ಬೇರೆಯದ್ದೇ ದಿಕ್ಕಿನಲ್ಲಿ ಕೌತುಕ ಮುಡೋದು ಸಹಜ. ಯಾಕೆಂದರೆ, ನಿರ್ದೇಶಕನಾಗಿ ಇದುವರೆಗಿನ ನಡಿಗೆಯಲ್ಲಿಯೇ ಅವರು ಅಂಥದ್ದೊಂದು ಛಾಪು ಮೂಡಿಸಿದ್ದಾರೆ. ಪ್ರೇಕ್ಷಕರ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ತಮ್ಮ ಇದುವರೆಗಿನ ಯಾನದಲ್ಲೇ ನಗುವಿನ ಹೂಗಳ ಮೇಲೆ ಚಿತ್ರದ ಮೂಲಕ ಮಹತ್ತರವಾದ ಅನುಭೂತಿಯೊಂದನ್ನು ಮೊಗೆದು ಕೊಡಲು ವೆಂಕಟ್ ಭಾರದ್ವಾಜ್ ತಯಾರಾದಂತಿದೆ.

ಇಲ್ಲಿರೋದು ಪರಿಶುದ್ಧ ಪ್ರೇಮದ ನಾನಾ ಮಜಲುಗಳನ್ನು ತೆರೆದಿಡುವ ವಿಶಿಷ್ಟ ಕಥಾನಕ. ಪರಿಶುದ್ಧವಾದ, ಪ್ರಾಮಾಣಿಕವಾದ ಪ್ರೇಮವೆಂಬುದು ಯಾವತ್ತಿದ್ದರೂ ಪ್ರಕೃತಿಗೆ ಹತ್ತಿರವಾದದ್ದು. ಅದನ್ನು ಕೃತಕವಾದವುಗಳಿಂದ ಸಿಂಗರಿಸುವ ಯಾವ ದರ್ದೂ ಇಲ್ಲ. ಒಂದು ವೇಳೆ ಸಿಂಗರಿಸಿದರೂ ಕೂಡಾ ಅದು ಪ್ರೇಮವೆಂಬ ಅಸಲೀ ಹೊಳಪಿನ ಮುಂದೆ ಮಂಕಾಗುತ್ತದೆ. ಈ ಸೂಕ್ಷ್ಮವನ್ನು ಅರಿತಿರುವ ವೆಂಕಟ್ ಭಾರದ್ವಾಜ್, ಅತ್ಯಂತ ಸಹಜವಾಗಿ ಈ ಸಿನಿಮಾವನ್ನು ದೃಶ್ಯೀಕರಿಸಿದ್ದಾರೆ.

ಸಾಮಾನ್ಯವಾಗಿ, ಯಾವುದೇ ಸಿನಿಮಾಗಳಿಗೆ ದೃಶ್ಯ ರೂಪ ಕೊಡುವಾಗಲ ದುಬಾರಿ ಸೆಟ್ಟುಗಳತ್ತ ಗಮನ ಹರಿಸಲಾಗುತ್ತೆ. ಅದರ ಮೇಲೆಯೇ ಸಿನಿಮಾವೊಂದರ ಕಿಮ್ಮತ್ತನ್ನು ಅಳೆಯುವ ಮಾನದಂಡಗಳೂ ಇವೆ. ಆದರೆ, ವೆಂಕಟ್ ಭಾರದ್ವಾಜ್ ಸೆಟ್ಟುಗಳ ಗೊಡವೆಯಿಲ್ಲದೆ, ಸಹಜ ಸುಂದರವಾದ ತಾಣಗಳಲ್ಲಿ ಇಲ್ಲಿನ ದೃಶ್ಯಗಳನ್ನು ರೂಪಿಸಿದ್ದಾರಂತೆ. ಕಣ್ಣಿಗೆ ಹಬ್ಬವೆನಿಸುವಂಥಾ, ಕಥೆಗೆ ಪೂರಕವಾಗಿ, ಒಮ್ಮೊಮ್ಮೆ ದೃಶ್ಯಗಳೇ ಕಥೆಯಾಗುವಂತಹ ಕಲಾವಂತಿಕೆಯಿಂದ ಈ ಚಿತ್ರವನ್ನು ರೂಪಿಸಿರುವ ಖುಷಿ ನಿರ್ದೇಶಕರಲ್ಲಿದೆ. ಇಲ್ಲಿ ದೃಶ್ಯರೂಪ ಧರಿಸಿರುವ ಸಹಜ ಪ್ರಾಕೃತಿಕ ವೈಭವ ಕಥೆಯ ಜೊತೆ ಜೊತೆಗೇ ಪ್ರೇಕ್ಷಕರನ್ನು ಥ್ರಿಲ್ ಮಾಡಲಿದೆ ಎಂಬುದು ಚಿತ್ರತಂಡದ ಭರವಸೆ.

 

`ನಗುವಿನ ಹೂಗಳ ಮೇಲೆ’ ಚಿತ್ರ ಶೀರ್ಷಿಕೆಯಷ್ಟೇ ಮೆಲುವಾಗಿ ಪ್ರೇಕ್ಷಕರನ್ನು ತಾಕಿ, ಸಮ್ಮೋಹಕ ಗೆಲುವಿನ ಮೂಲಕ ವರ್ಷಾರಂಭಕ್ಕೊಂದು ಕಳೆ ತಂದು ಕೊಡುವ ಸಾಧ್ಯತೆಗಳಿವೆ. ಅಂದಹಾಗೆ, ಈ ಚಿತ್ರವನ್ನು ತೆಲುಗಿನ ಪ್ರಸಿದ್ದ ನಿರ್ಮಾಪಕರಾದ ಕೆ.ಕೆ ರಾಧ ಮೋಹನ್ ನಿರ್ಮಾಣ ಮಾಡಿದ್ದಾರೆ. ಅಭಿದಾಸ್ ಹಾಗೂ ಶರಣ್ಯಾ ನಾಯಕ ನಾಯಕಿಯರು. ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣವಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನದೊಂದಿಗೆ `ನಗುವಿನ ಹೂಗಳ ಮೇಲೆ’ ನಳನಳಿಸಿದೆ.

Share This Article