ಲಡಾಖ್‌ನಲ್ಲಿ ವಿಶಿಷ್ಟ ಟೂರಿಸಂ ಪ್ರೆಗ್ನೆನ್ಸಿ – ಮಕ್ಕಳನ್ನ ಪಡೆಯೋಕೆ ಇಲ್ಲಿಗೆ ಬರ್ತಾರಂತೆ ವಿದೇಶಿಯರು

Public TV
3 Min Read

ಭೂಮಿಯ ಮೇಲಿರುವ ಕೆಲವು ವಸ್ತು, ಜಾಗ ಹಾಗೂ ಭಾಷೆಗಳು ತನ್ನದೇ ಆದಂತಹ ಪರಿಕಲ್ಪನೆಯನ್ನು ಹೊಂದಿರುತ್ತವೆ. ಅವುಗಳು ಬೆಳೆಯುತ್ತಾ ತನ್ನಲ್ಲಿನ ಕಲ್ಪನೆಯನ್ನು ಇತರರಲ್ಲಿ ಬೀಜ ಬಿತ್ತುವ ಕೆಲಸ ಮಾಡುತ್ತವೆ. ಹಾಗೆ ಬೆಳೆದುಕೊಂಡು ಬಂದು ಹೆಸರು ಗಳಿಸುತ್ತವೆ. ಈ ರೀತಿ ತನ್ನದೇ ಆದ ಪರಿಕಲ್ಪನೆಯೊಂದಿಗೆ ಬೆಳೆದು ಬಂದ ಲಡಾಖ್ ಗರ್ಭಧಾರಣೆಗೆ ಹೆಸರು ಪಡೆದುಕೊಂಡಿದೆ ಎನ್ನಬಹುದು. 

ಹೌದು, ಲಡಾಖ್ ಪ್ರದೇಶದಲ್ಲಿರುವ ಈ ಒಂದು ಪುಟ್ಟ ಗ್ರಾಮ ತುಂಬಾ ಪ್ರಸಿದ್ಧಿಯಾಗಿದೆ. ಇಲ್ಲಿಗೆ ಬೇರೆ ಬೇರೆ ದೇಶಗಳಿಂದ ಜನರು ಆಗಮಿಸುತ್ತಾರೆ. ಇದೆಲ್ಲದಕ್ಕೂ ಒಂದೇ ಕಾರಣ ಅದು ಗರ್ಭಧಾರಣೆ. ಪ್ರೆಗ್ನೆನ್ಸಿ ಟೂರಿಸಂ ಎಂತಲೇ ಹೆಸರು ಪಡೆದಿರುವ ಈ ಪ್ರದೇಶಕ್ಕೆ ಮಕ್ಕಳನ್ನು ಪಡೆಯುವ ಉದ್ದೇಶದಿಂದ ವಿದೇಶಿಯರು ಇಲ್ಲಿಗೆ ಬರುತ್ತಾರೆ. ಯಾಕೆ ಈ ಪ್ರದೇಶಕ್ಕೆ ಬರಬೇಕು? ಯಾಕೆ ಬರುತ್ತಾರೆ? ಮಕ್ಕಳನ್ನು ಪಡೆಯುವ ಉದ್ದೇಶದಿಂದ ಇಲ್ಲಿಗೆ ಬರುವುದು ಯಾಕೆ? ಎನ್ನುವ ಹೆಚ್ಚಿನ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಇದೆಲ್ಲದಕ್ಕೂ ಉತ್ತರ ಇಲ್ಲಿದೆ.

ಲಡಾಖ್ ನಲ್ಲಿರುವ ಆರ್ಯನ್ ವ್ಯಾಲಿಯೂ ಗರ್ಭಧಾರಣೆಗೆ ತುಂಬಾ ಖ್ಯಾತಿಯನ್ನು ಪಡೆದಿದೆ. ಈ ಗ್ರಾಮಕ್ಕೆ ದೇಶ ವಿದೇಶಗಳಿಂದ ಮಹಿಳೆಯರು ಮಕ್ಕಳನ್ನು ಪಡೆಯುವ ಉದ್ದೇಶದಿಂದಲೇ ಆಗಮಿಸುತ್ತಾರೆ. ಇಲ್ಲಿಗೆ ಬಂದು ಇಲ್ಲಿನ ಪುರುಷರೊಟ್ಟಿಗೆ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಲು ಇಚ್ಚಿಸುತ್ತಾರೆ. ಕೇಳಲು ವಿಚಿತ್ರವಾಗಿ ಅನಿಸಿದರೂ ಅದು ಸತ್ಯ. ಆರ್ಯನ್ ವ್ಯಾಲಿಯಲ್ಲಿ ಬ್ರೋಕ್ಪಾ ಎಂಬ ಸಮುದಾಯದವರು ವಾಸಿಸುತ್ತಾರೆ. ಈ ಸಮುದಾಯದವರನ್ನ ಆರ್ಯ ವಂಶದ ಕೊನೆಯ ಸಂತತಿ ಎನ್ನಲಾಗುತ್ತದೆ. ಇಡೀ ಜಗತ್ತನ್ನೇ ಗೆಲ್ಲಲು ಮುಂದಾಗಿದ್ದ ಅಲೆಕ್ಸಾಂಡರ್ ನ ಸೈನಿಕರ ವಂಶಸ್ಥರು ಎಂದು ಈ ಆರ್ಯನ್ ವ್ಯಾಲಿಯಲ್ಲಿರುವ ಸಮುದಾಯದವರು ಹೇಳಿಕೊಳ್ಳುತ್ತಾರೆ. ಅಂದರೆ ಆರ್ಯವಂಶದ ಕೊನೆಯ ಕುಡಿ ಎನ್ನಲಾಗುತ್ತದೆ. ಅಲೆಕ್ಸಾಂಡರ್ ಭಾರತಕ್ಕೆ ದಂಡೆತ್ತಿ ಬಂದು ಮರಳುವಾಗ ಆತನ ಒಂದು ಸೇನಾ ತುಕಡಿ ಇಲ್ಲೇ ಉಳಿದಿತ್ತು. ಆ ಉಳಿದ ಒಂದು ಸೇನೆಯ ಭಾಗವೇ ಬ್ರೋಕ್ಪಾ ಸಮುದಾಯವಾಯಿತು ಎನ್ನಲಾಗಿದೆ. ಈ ಸಮುದಾಯದ ಪುರುಷರೊಂದಿಗೆ ಮಹಿಳೆಯರು ಲೈಂಗಿಕ ಸಂಪರ್ಕ ಬೆಳೆಸಿ ಮಕ್ಕಳನ್ನು ಪಡೆಯಲು ಇಚ್ಚಿಸುತ್ತಾರೆ. ಹೀಗಾಗಿ ಈ ಆರ್ಯನ್ ವ್ಯಾಲಿ ಗರ್ಭಧಾರಣೆಗೆ ಬಹು ಮಹತ್ವ ಪಡೆದುಕೊಂಡಿದೆ. 

ಇಲ್ಲಿಗೆ ಬರುವುದ್ಯಾಕೆ?

ಹೌದು, ಇದೇ ಲಡಾಖ್ ನ ಆರ್ಯನ್ ವ್ಯಾಲಿಗೆ ಬರಲು ಒಂದು ಕಾರಣವಿದೆ. ಇಲ್ಲಿನ ಬ್ರೋಕ್ಪಾ ಸಮುದಾಯದವರು ತಮ್ಮನ್ನು ತಾವು ಆರ್ಯ ವಂಶದ ಕೊನೆಯ ಸಂತತಿ ಎಂದು ಹೇಳಿಕೊಳ್ಳುತ್ತಾರೆ. ಈ ಸಮುದಾಯದ ಪುರುಷರು ಬಿಳಿ ಚರ್ಮ, ತಿಳಿ ಬಣ್ಣದ ಕಣ್ಣುಗಳು ಹಾಗೂ ಎತ್ತರದ ಮೈಕಟ್ಟನ್ನು ಹೊಂದಿದ್ದಾರೆ. ಇಲ್ಲಿಗೆ ಬರುವ ಮಹಿಳೆಯರು ಇಲ್ಲಿನ ಪುರುಷರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದರೆ ತಮಗೆ ಅಲೆಕ್ಸಾಂಡರ್ ನಂತಹ ಅಥವಾ ಅಲೆಕ್ಸಾಂಡರ್ ಸೇವೆಯಲ್ಲಿದ್ದ ಬಲಿಷ್ಠ ಸೈನಿಕನಂತೆ ಮಗು ಜನಿಸಬೇಕು. ಜೊತೆಗೆ ಬಲಿಷ್ಠ, ಸದೃಢ ಮೈಕಟ್ಟು ಹಾಗೂ ಆಕರ್ಷಕ ಕಣ್ಣುಗಳನ್ನು ಹೊಂದಬೇಕು ಎಂದು ಬಯಸುತ್ತಾರೆ. ಈ ಕಾರಣಕ್ಕಾಗಿ ಈ ಪ್ರದೇಶಕ್ಕೆ ಹೆಚ್ಚಿನ ವಿದೇಶಿ ಮಹಿಳೆಯರು ಆಗಮಿಸುತ್ತಾರೆ. 

ಇದೇ ಕಾರಣದಿಂದಾಗಿ ಲಡಾಖ್ ನ ಆರ್ಯನ್ ವ್ಯಾಲಿ ಜನಪ್ರಿಯತೆಯನ್ನು ಪಡೆದಿದೆ. ಇದೇ ಉದ್ದೇಶದಿಂದ ವಿಶೇಷವಾಗಿ ಜರ್ಮನಿ ಹಾಗೂ ಯುರೋಪಿನ ಇತರ ಭಾಗಗಳಿಂದ ಮಹಿಳೆಯರು ಬ್ರೋಕ್ಪಾ ಸಮುದಾಯದ ಪುರುಷರಿಂದ ಮಕ್ಕಳನ್ನು ಪಡೆಯುವ ಉದ್ದೇಶದಿಂದ ಈ ಹಳ್ಳಿಗೆ ಬರುತ್ತಾರೆ. 

ಇನ್ನು ಇಲ್ಲಿನ ಸಮುದಾಯದವರು ಆರ್ಯವಂಶಸ್ಥರು ಎಂಬ ಹೇಳಿಕೆಯನ್ನು ಈಗಾಗಲೇ ಇತಿಹಾಸಕಾರರು ತಳ್ಳಿ ಹಾಕಿದ್ದಾರೆ. ಅಲ್ಲದೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇನ್ನು ಗರ್ಭಧಾರಣೆಗೆ ಸಂಬಂಧಿಸಿದಂತೆ ಇಂತಹ ವಿಷಯಗಳು ಹೆಚ್ಚಾಗಿ ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಹರಡಿಕೊಂಡು ಎಲ್ಲರ ಕಿವಿ ಮುಟ್ಟಿವೆ. ಈ ಕುರಿತು ಸ್ಥಳೀಯರ ಮಾಹಿತಿ ಪ್ರಕಾರ, ಗರ್ಭ ಧರಿಸಲು ಹೆಚ್ಚಿನ ವಿದೇಶಿಗರು ಇಲ್ಲಿಗೆ ಆಗಮಿಸುತ್ತಾರೆ.

ಗರ್ಭಧಾರಣೆಗೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಪುರಾವೆಗಳಿಲ್ಲ.   ಆದರೆ ಗರ್ಭ ಧರಿಸಲು ಬರುವ ಪ್ರತಿ ಮಹಿಳೆಯು ತನಗೆ ಅಲೆಕ್ಸಾಂಡರ್ ಸೈನಿಕರ ಹಾಗೆಯೇ ಮಗು ಆಗುತ್ತದೆ ಎಂಬ ನಂಬಿಕೆಯಿಂದಲೇ ಬರುತ್ತಾರೆ. ಪ್ರವಾಸಿಗರನ್ನು ಆಕರ್ಷಿಸಲು ಇಲ್ಲಿನ ಜನರೇ ಈ ಕಥೆಯನ್ನ ಹಬ್ಬಿಸುತ್ತಾರೆ ಎಂಬ ಮಾತುಗಳು ಕೂಡ ಕೇಳಿಬಂದಿವೆ. ಇನ್ನು ಹಬ್ಬುತ್ತಿರುವ ಮಾಹಿತಿಯನ್ನು ಬೆಂಬಿಡದೆ ಹಲವು ಇತಿಹಾಸಕಾರರು ಹಾಗೂ ಪತ್ರಕರ್ತರು ಈ ವಿಷಯವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಾರೆ. ಆದರೂ ಕೂಡ ಸತ್ಯ ಹೊರಬರದೆ ಈ ವಿಷಯ ಗೊಂದಲವಾಗಿ ಉಳಿದುಕೊಂಡು ಹೋಗಿದೆ.

Share This Article