47 ಲಕ್ಷ ಜನರ ಸಾವಿಗೆ ಕೇಂದ್ರ ಸರ್ಕಾರವೇ ಹೊಣೆ: ದಿನೇಶ್ ಗುಂಡೂರಾವ್

Public TV
2 Min Read

ಬೆಂಗಳೂರು: ಕೋವಿಡ್ ಸಮಯದಲ್ಲಿ ಭಾರತದಲ್ಲಿ ಸುಮಾರು 47 ಲಕ್ಷ ಜನರು ಮೃತಪಟ್ಟಿದ್ದಾರೆ ಎಂಬ ವಿಶ್ವ ಆರೋಗ್ಯ ಸಂಸ್ಥೆ ವರದಿ ಬೆನ್ನಲ್ಲೆ ವಿಪಕ್ಷ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದೆ.

ಕಾಂಗ್ರೆಸ್ ನಾಯಕ, ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು ಈ ಸಾವಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೋವಿಡ್ ಸಾವಿನಲ್ಲಿ ಸುಳ್ಳು ಲೆಕ್ಕ ಹೇಳಿ ಜಗತ್ತಿನ ಕಣ್ಣಿಗೆ ಮಣ್ಣೆರಚಿದ್ದ ಕೇಂದ್ರದ ಸುಳ್ಳಿನ ಬಂಡವಾಳ ಡಬ್ಲ್ಯುಹೆಚ್‌ಒ ವರದಿಯಿಂದ ಬಯಲಾಗಿದೆ. ಕೋವಿಡ್‌ಗೆ 2020-21ರಲ್ಲಿ ಭಾರತವೊಂದರಲ್ಲೇ 47 ಲಕ್ಷ ಜನರು ಮೃತಪಟ್ಟಿದ್ದಾರೆ. ಆದರೆ ವಿಶ್ವದ ಮುಂದೆ ಮಾನ ಮುಚ್ಚಿಕೊಳ್ಳಲು ಮೋದಿ ಸರ್ಕಾರ ಸತ್ತವರ ಸಂಖ್ಯೆ ಕೇವಲ 4.80 ಲಕ್ಷ ಎಂದು ಹೇಳಿ ಜನರ ದಾರಿ ತಪ್ಪಿಸಿದೆ ಎಂದು ಆರೋಪಿಸಿದರು. ಇದನ್ನೂ ಓದಿ: PSI Scam – ತಪ್ಪಿತಸ್ಥರು ಮುಟ್ಟಿನೋಡ್ಕೋಬೇಕು ಹಾಗೆ ಮಾಡ್ತಿವಿ: ಆರಗ ಜ್ಞಾನೇಂದ್ರ

2ನೇ ಅಲೆಯಲ್ಲಿ ಭಾರತ ಸಾವಿನ ಮನೆಯಾಗಿತ್ತು. ಗಂಗೆಯಲ್ಲಿ ಶವಗಳು ತೇಲಿದ್ದವು, ಆಕ್ಸಿಜನ್ ಇಲ್ಲದೇ ಸಾಲು ಸಾಲು ಹೆಣಗಳು ಬಿದ್ದವು. ಜನ ದೀಪದ ಹುಳುಗಳಂತೆ ಸಾಯುತ್ತಿದ್ದರೂ ಮೋದಿಯವರು ದೇಶ ಕೊರೊನಾವನ್ನು ಗೆದ್ದಿದೆ ಎಂದು ಬಿಟ್ಟಿ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಈ ಮೂಲಕ ಸಾವಿನ ಲೆಕ್ಕದ ಸತ್ಯ ಮರೆಮಾಚಿದ್ದರು. ಈಗ ಡಬ್ಲ್ಯುಹೆಚ್‌ಒ ವರದಿ ಸರ್ಕಾರದ ಸತ್ಯ ದರ್ಶನ ಮಾಡಿಸಿದೆ ಎಂದರು. ಇದನ್ನೂ ಓದಿ: ಇಂದಿನಿಂದ ಮೇ19ರವರೆಗೆ ಮದ್ಯ ಮಾರಾಟಗಾರರ ಮುಷ್ಕರ

ಕೋವಿಡ್ ಸಾವಿನ ಸುಳ್ಳು ಲೆಕ್ಕ ಹೇಳಿದ ಮೋದಿ ಸರ್ಕಾರಕ್ಕೆ ಸತ್ತವರ ಮನೆಯ ಶಾಪ ತಟ್ಟದೇ ಇರದು. ಸುಳ್ಳು ಹೇಳಿ ಸತ್ಯವನ್ನು ಬಹಳ ದಿನ ಅದುಮಿಡಲು ಸಾಧ್ಯವಿಲ್ಲ ಎಂಬುದು ಡಬ್ಲ್ಯುಹೆಚ್‌ಒ ವರದಿಯಿಂದ ಸಾಬೀತಾಗಿದೆ. ಕೋವಿಡ್ ಕಾಲದಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ, ಮೋದಿಯವರ ಬಿಟ್ಟಿ ಪ್ರಚಾರದ ಹುಚ್ಚಿನಿಂದ 47 ಲಕ್ಷ ಜನರು ಸಾಯುವಂತಾಯಿತು. ಈ ಸಾವುಗಳಿಗೆ ಕೇಂದ್ರವೇ ನೇರ ಹೊಣೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *