ನಾಯಿ ಕಚ್ಚಿದ್ರೆ (Dog Bite Case) ನಿರ್ಲಕ್ಷ್ಯ ಮಾಡ್ತೀರಾ? ಒಂದೇ ಹಲ್ಲು ತಾಗಿದೆ, ಕಚ್ಚಿದ ಜಾಗದಲ್ಲಿ ಗಾಯ ಆಗಿಲ್ಲ, ರಕ್ತ ಬಂದಿಲ್ಲ ಅಂತೆಲ್ಲ ನಿಮಗೆ ನೀವೇ ಸಮಾಧಾನ ಮಾಡ್ಕೋಳ್ತೀರಾ? ಇನ್ಮುಂದೆ ಹಾಗೆಲ್ಲ ಮಾಡ್ಬೇಡಿ. ಯಾಕಂದ್ರೆ ಭಾರತದಲ್ಲಿ (India) ರೇಬೀಸ್‌ನಿಂದ (Rabies) ಸಾಯುವವರ ಸಂಖ್ಯೆ ಹೆಚ್ಚಳವಾಗಿದೆ. ಇದಕ್ಕೆ ಮೂಲ ಕಾರಣ ಚಿಕಿತ್ಸೆ ಪಡೆಯದೇ ಇರುವುದೇ ಆಗಿದೆ.
2030ರ ವೇಳೆಗೆ ಭಾರತದಲ್ಲಿ ರೇಬೀಸ್ ನಿರ್ಮೂಲನೆಗೆ ಪಣ
ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) 2030ರ ವೇಳೆಗೆ ಭಾರತದಲ್ಲಿ ರೇಬೀಸ್ ನಿರ್ಮೂಲನೆಗೆ ಪಣತೊಟ್ಟಿದೆ. ಇದಕ್ಕಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನುಕೈಗೊಳ್ಳಲು ಇಲಾಖೆ ಮುಂದಾಗಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ (Supreme Court) ಸಹ ದೆಹಲಿಯಲ್ಲಿ ಬೀದಿ ನಾಯಿಗಳ ದಾಳಿ ಬಗ್ಗೆ ಪ್ರತಿಕ್ರಿಯಿಸಿತ್ತು. ಈ ವೇಳೆ ಒಂದು ಮಗು ಕೂಡ ರೇಬೀಸ್‌ನಿಂದ ಸಾವನ್ನಪ್ಪಬಾರದು ಎಂದಿತ್ತು.
2024 ರಲ್ಲಿ ನಾಯಿ ಕಡಿತ ಪ್ರಕರಣ ಎಷ್ಟಿತ್ತು?
2024 ರಲ್ಲಿ ಭಾರತದಲ್ಲಿ ನಾಯಿ ಕಡಿತ ಪ್ರಕರಣ ತೀವ್ರ ಏರಿಕೆಯಾಗಿತ್ತು. ದೇಶದಾದ್ಯಂತ 30.7 ಲಕ್ಷ ನಾಯಿ ಕಡಿತ ಪ್ರಕರಣ ದಾಖಲಾಗಿದ್ದವು. ನಾಯಿ ಕಡಿತಕ್ಕೊಳಗಾದವರಲ್ಲಿ 15 ವರ್ಷದೊಳಗಿನ ಮಕ್ಕಳ ಸಂಖ್ಯೆ 40% ಕ್ಕಿಂತ ಹೆಚ್ಚಾಗಿತ್ತು. ಇನ್ನೂ 2023ರಲ್ಲಿ 30.43 ಲಕ್ಷ ನಾಯಿ ಕಡಿತ ಪ್ರಕರಣ ದಾಖಲಾಗಿದ್ದವು.
ಪ್ರತಿ ವರ್ಷ 5,700 ಮಂದಿ ರೇಬಿಸ್‌ಗೆ ಬಲಿ!
ಪ್ರತಿ ವರ್ಷ ಸುಮಾರು 5,700 ಜನ ಈ ತಡೆಗಟ್ಟಬಹುದಾದ ರೇಬಿಸ್ ಕಾಯಿಲೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಾಯಿ ಕಚ್ಚಿದವರಲ್ಲಿ ಕೇವಲ 40% ಜನರು ಮಾತ್ರ ರೇಬೀಸ್ ಲಸಿಕೆ ಪಡೆಯುತ್ತಿದ್ದಾರೆ. ಇದು ರೇಬಿಸ್ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಈಗ ಕೇಂದ್ರ ಸರ್ಕಾರ ಭಾರತದಲ್ಲಿ 2030ರ ವೇಳೆಗೆ ರೇಬಿಸ್‌ನ್ನು ತೊಡೆದುಹಾಕಲು ನಿರ್ಧರಿಸಿದೆ. ಅದಕ್ಕಾಗಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳು, ಮಾಹಿತಿ ನೀಡುವುದು ಸೇರಿದಂತೆ ಅಗತ್ಯ ಔಷಧಿಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗಿದೆ.
ರೇಬಿಸ್ ನಿರ್ಮೂಲನೆಗೆ ಕೈಗೊಂಡ ಕ್ರಮಗಳೇನು?
ಸಾಮೂಹಿಕವಾಗಿ ನಾಯಿಗಳಿಗೆ ಲಸಿಕೆ ಹಾಕುವುದು. ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವುದು ಸೇರಿದಂತೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ.
ರಾಜ್ಯಗಳಿಗೆ ಬಜೆಟ್ ಬೆಂಬಲ
ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ, ಆರೋಗ್ಯ ರಕ್ಷಣಾ ಸಿಬ್ಬಂದಿ ಹೆಚ್ಚಿಸುವುದು. ರೇಬೀಸ್ ಲಸಿಕೆಗಳ ಸಂಗ್ರಹಣೆ. ರೇಬೀಸ್ ಮತ್ತು ನಾಯಿ ಕಡಿತ ತಡೆಗಟ್ಟುವಿಕೆ ದತ್ತಾಂಶ ಕಲೆಹಾಕಿ, ಪರಿಶೀಲನಾ ಸಭೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವುದು. ಅಲ್ಲದೇ ಆಸ್ಪತ್ರೆ ಸ್ಥಾಪನೆ, ಅಗತ್ಯ ಔಷಧಿಗಳಿಗಾಗಿ ಹಣ ಒದಗಿಸುವ ಮೂಲಕ ರಾಜ್ಯಗಳಿಗೆ ಬೆಂಬಲ ನೀಡಲಾಗುತ್ತಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್‌ನ ಉಚಿತ ಔಷಧ ಉಪಕ್ರಮದಡಿಯಲ್ಲಿ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಆಂಟಿ-ರೇಬೀಸ್ ಲಸಿಕೆ (ARV) ಮತ್ತು ಆಂಟಿ-ರೇಬೀಸ್ ಸೀರಮ್ (ARS)/ರೇಬೀಸ್ ಇಮ್ಯುನೊಗ್ಲಾಬ್ಯುಲಿನ್ (RIG) ನಂತಹ ಜೀವರಕ್ಷಕ ಔಷಧಿಗಳನ್ನು ಒದಗಿಸಲಾಗುತ್ತಿದೆ. ಈ ಔಷಧಿಗಳನ್ನು ರಾಜ್ಯಗಳ ಅಗತ್ಯ ಔಷಧ ಪಟ್ಟಿಯಲ್ಲಿಯೂ ಸೇರಿಸಲಾಗಿದೆ.
ರೇಬೀಸ್ ಪರೀಕ್ಷೆಗೆ ಪ್ರಯೋಗಾಲಯಗಳು: ದೇಶಾದ್ಯಂತ ರೇಬೀಸ್ ಪರೀಕ್ಷೆಗೆ 14 ಪ್ರಯೋಗಾಲಯಗಳನ್ನು ಆಯ್ದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.
ಬೆಂಗ್ಳೂರಲ್ಲಿ ನಾಯಿಗಳ ನಿಯಂತ್ರಣ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರಲ್ಲಿ 2023 ರಲ್ಲಿ ಬೀದಿ ನಾಯಿಗಳ ಸಂಖ್ಯೆಯಲ್ಲಿ 10% ಇಳಿಕೆ ಕಂಡುಬಂದಿದೆ.
ವಿಶ್ವ ರೇಬೀಸ್ ದಿನ
ವಿಶ್ವ ರೇಬೀಸ್ ದಿನವನ್ನು ಪ್ರತಿವರ್ಷ ಸೆ.28ರಂದು ಸೂಕ್ಷ್ಮಜೀವಿಶಾಸ್ತ್ರದ ಪಿತಾಮಹ ಹಾಗೂ ರೇಬಿಸ್ ಲಸಿಕೆಯನ್ನು ಕಂಡುಹಿಡಿದ ಖ್ಯಾತ ವಿಜ್ಞಾನಿ ಲೂಯೀಸ್ ಪಾಶ್ಚರ್ (28-09-1895) ಅವರ ಮರಣದ ಶತಮಾನೋತ್ಸವದ ಅಂಗವಾಗಿ ವಿಶ್ವದಾದ್ಯಂತ 15 ವರ್ಷಗಳಿಂದ ಆಚರಿಸಲಾಗುತ್ತಿದೆ.
ಮೊದಲ ಬಾರಿಗೆ 1881ರಲ್ಲಿ ಹುಚ್ಚುನಾಯಿ ಕಡಿತಕ್ಕೊಳಗಾದ ಮಗುವಿಗೆ ಲಸಿಕೆ ಹಾಕಿ ಶುಶೂಷೆ ಮಾಡಿ ಗುಣಪಡಿಸಲಾಯಿತು. ಅಂದಿನಿಂದ ಸಂಶೋಧನೆಗಳು ನಡೆದು, ಈಗ ಪರಿಣಾಮಕಾರಿಯಾದ ಮತ್ತು ಒಳ್ಳೆಯ ಗುಣಮಟ್ಟದ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
ರೇಬೀಸ್ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?
ಹೆಚ್ಚುತ್ತಿರು ಬೀದಿ ನಾಯಿಗಳ ದಾಳಿ ಹಾಗೂ ರೇಬಿಸ್ ವಿಚಾರವಾಗಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಸಹ ದೆಹಲಿ ಸರ್ಕಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ರೇಬಿಸ್‌ನಿಂದ ಒಂದು ಮಗುವು ಸಾಯಬಾರದು. ನಾಯಿಗಳನ್ನು ಆಶ್ರಯ ತಾಣಕ್ಕೆ ಸೇರಿಸುವಂತೆ ಆದೇಶಿಸಿತ್ತು. ಬಳಿಕ ಶ್ವಾನ ಪ್ರಿಯರು ಈ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ತೀರ್ಪನ್ನು ಮರುಪರಿಶೀಲಿಸಿ, ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಿ ಅವು ಇದ್ದಲ್ಲೇ ಮತ್ತೆ ಬಿಡುವಂತೆ ಕೋರ್ಟ್ ಆದೇಶಿಸಲಾಗಿತ್ತು.
ರೇಬಿಸ್ ನಿಯಂತ್ರಣಕ್ಕಿರೋ ಸವಾಲುಗಳೇನು?
ಇನ್ನೂ ನಾಯಿಗಳ ನಿಯಂತ್ರಣ ಹಾಗೂ ರೇಬೀಸ್ ತಡೆಗೆ ಭಾರತದಲ್ಲಿ ಅನೇಕ ಸವಾಲುಗಳು ಇವೆ. ಅವು ಏನೆಂದರೆ, ಕೆಲವರು ನಾಯಿ ಕಚ್ಚಿದರೆ ನಿರ್ಲಕ್ಷ್ಯ ತೋರುತ್ತಾರೆ. ಕಚ್ಚಿದ ನಾಯಿ ಆರೋಗ್ಯವಾಗಿತ್ತು. ಏನೂ ಸಮಸ್ಯೆ ಇಲ್ಲ ಎಂದು ಚಿಕಿತ್ಸೆಯಿಂದ ದೂರ ಉಳಿಯುತ್ತಾರೆ. ಇಲ್ಲವೇ ಕಚ್ಚಿದ ಜಾಗವನ್ನು ತೊಳೆದು ಸುಮ್ಮನಾಗ್ತಾರೆ. ಇನ್ನೂ ಕೆಲವರು ನಕಲಿ ವೈದ್ಯರ ಬಳಿ, ನಾಟಿ ಔಷಧಿ ತೆಗೆದುಕೊಂಡು ತಮ್ಮಪಾಡಿಗೆ ಇರುತ್ತಾರೆ. ಈ ಬಗ್ಗೆ ಜನರಿಗೆ ಸರಿಯಾದ ಮಾರ್ಗದರ್ಶನ ನೀಡಿ ಚಿಕಿತ್ಸೆಯ ಮಹತ್ವ ತಿಳಿಸಬೇಕು. ಆಗ ಮಾತ್ರ ರೇಬಿಸ್ ಮುಕ್ತ ಭಾರತ ಸಾಧ್ಯ.
ನಾಯಿ ಕಚ್ಚಿದ್ದಕ್ಕೆ 11, 3 ಹಾಗೂ 5 ಇಂಜೆಕ್ಷನ್ ತೆಗೆದುಕೊಳ್ಳಬೇಕಾಗುತ್ತಾದೆ. ಈ ಚುಚ್ಚುಮದ್ದು ದುಬಾರಿಯಾಗಿದೆ. ಈ ಇಂಜೆಕ್ಷನ್ ತೆಗೆದುಕೊಳ್ಳಲು ವೈದ್ಯರು ವೇಳಾಪಟ್ಟಿಯನ್ನು ಕೊಟ್ಟಿರುತ್ತಾರೆ. ಆ ಸಮಯದಲ್ಲಿ ಎಷ್ಟೋ ಜನಕ್ಕೆ ತೆರಳಲು ಸಾಧ್ಯವಾಗದೇ, ಮತ್ತು ದುಬಾರಿ ಎಂಬ ಕಾರಣಕ್ಕೂ ಚಿಕಿತ್ಸೆಯನ್ನು ಮಾಡಿಸುವುದಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಈ ಚುಚ್ಚುಮದ್ದು ಉಚಿತವಾಗಿ ಲಭ್ಯವಿದೆ.