Exclusive ಸರ್ಕಾರದ ಅವಧಿ ಮುಗಿಯುತ್ತಾ ಬಂದರೂ ಇನ್ನೂ ಸಿದ್ಧವಾಗಿಲ್ಲ ಜಾತಿಗಣತಿ ವರದಿ!

Public TV
3 Min Read

ಬೆಂಗಳೂರು: ವಿಧಾನಸಭಾ ಚುನಾವಣಾ ವೇಳೆ ಇಲ್ಲದ ತಲೆನೋವು ತಂದುಕೊಳ್ಳಲು ಸಿದ್ಧವಿಲ್ಲದ ಕಾರಣ ಜಾತಿಗಣತಿಯ ವರದಿಯ ಮಂಡನೆಗೆ ಸರ್ಕಾರ ಹಿಂದೇಟು ಹಾಕುತ್ತಿದೆ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

ಜಾತಿಗಣತಿ ಮುಕ್ತಾಯಗೊಂಡು ಎರಡು ವರ್ಷವಾದರೂ ಸರ್ಕಾರ ಮಂಡನೆ ಮಾಡುತ್ತಿಲ್ಲ. ಗಣತಿ ವರದಿಯ ಅಂಶಗಳು ಸರ್ಕಾರಕ್ಕೆ ಮುಳುವಾಗುವ ಸಾಧ್ಯತೆಯೇ ಹೆಚ್ಚು ಇರುವ ಕಾರಣ ವರದಿ ಮಂಡನೆಗೆ ಇತಿಶ್ರೀ ಹಾಡಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಜಾತಿಗಣತಿ ಪ್ರಕಾರ ರಾಜ್ಯದಲ್ಲಿ ಹಿಂದುಳಿದ ವರ್ಗವೇ ಪ್ರಬಲವಾಗಿರುವ ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲದೇ ಮುಸ್ಲಿಂ ಸಮುದಾಯದ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಒಂದು ವೇಳೆ ಮಂಡಿಸಿದರೆ ಮತವಿಭಜನೆ ಆಗುವ ಸಾಧ್ಯತೆ ಇರುವ ಕಾರಣ ಸಿಎಂ ಸಿದ್ದರಾಮಯ್ಯ ಆತಂಕದಲ್ಲಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಲಿಂಗಾಯತರು ಪ್ರಾಬಲ್ಯ ಹೊಂದಿದ್ದು, ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಇಳಿಕೆಯಾಗಿದೆ. ಹೀಗಾಗಿ ವರದಿ ಮಂಡನೆಗೆ ಲಿಂಗಾಯಿತ ಕಾಂಗ್ರೆಸ್ ಶಾಸಕರು ಆಕ್ಷೇಪ ಎತ್ತಿದ್ದಾರೆ. ಒಂದು ವೇಳೆ ವರದಿ ಮಂಡಿಸಿದರೆ ಸೋಲಬಹುದು ಎನ್ನುವ ಭೀತಿಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಗುಜರಾತ್ ನಲ್ಲಿ ಯಶಸ್ವಿಯಾದ ಸಾಫ್ಟ್ ಹಿಂದುತ್ವ ತಂತ್ರವನ್ನು ಕರ್ನಾಟಕದಲ್ಲಿ ಅನುಸರಿಸಲು ಕಾಂಗ್ರೆಸ್ ಮುಂದಾಗಿರುವ ಹಿನ್ನೆಲೆಯಲ್ಲಿ ಚುನಾವಣೆ ಸಮಯದಲ್ಲಿ ಅಪಾಯ ತೆಗೆದುಕೊಳ್ಳದೇ ಇರಲು ಈ ವರದಿ ಮಂಡನೆಯ ಗೋಜಿಗೆ ಹೋಗದೇ ಇರುವ ನಿರ್ಧಾರ ಮಾಡಿದೆ ಎನ್ನಲಾಗಿದೆ. 

ಈ ವಿಚಾರದ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕಾಂತರಾಜ್ ಅವರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿದಾಗ, ಗಣತಿಯ ಕ್ರೋಢಿಕರಣದ ಕಾರ್ಯ ಪೂರ್ಣವಾಗಿಲ್ಲ. ಕ್ರೋಢಿಕರಣದ ಎಲ್ಲ ಲೆಕ್ಕಾಚಾರ ಪೂರ್ಣಗೊಳ್ಳಬೇಕಾದರೆ ಇನ್ನು ಎರಡು ತಿಂಗಳು ಬೇಕಾಗಬಹುದು ಎಂದು ಹೇಳಿದ್ದಾರೆ.

ಇನ್ನು ಎರಡು ತಿಂಗಳು ಅಂದಾಗ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಮಂಡಿಸಬೇಕಾಗುತ್ತದೆ. ಜಾತಿಗಣತಿ ಪೂರ್ಣಗೊಂಡು ಈಗಾಗಲೇ ಎರಡು ವರ್ಷ ಕಳೆದಿದ್ದು ಇನ್ನು ಲೆಕ್ಕಾಚಾರ ಪೂರ್ಣಗೊಂಡಿಲ್ಲ. ಹೀಗಿರುವಾಗ ಚುನಾವಣಾ ದಿನಾಂಕ ಹತ್ತಿರ ಬಂದಾಗ ವರದಿ ಮಂಡನೆಯಾಗುವುದು ಅನುಮಾನ. ಹೀಗಾಗಿ ಜಾತಿಗಣತಿ ಹೊಣೆಯನ್ನು ಮುಂಬರುವ ಸರ್ಕಾರದ ತಲೆಗೆ ಕಟ್ಟಲು ಪ್ಲಾನ್ ನಡೆದಿದೆ ಎನ್ನಲಾಗಿದೆ.

2017ರ ಡಿಸೆಂಬರ್ ನಲ್ಲಿ  ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸಮಾಜ ಕಲ್ಯಾಣ ಸಚಿವ ಎಚ್.ಆಜನೇಯ, ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಬೇಕೆ? ಬಿಡುಗಡೆ ಯಾವಾಗ ಮಾಡಬೇಕು ಎನ್ನುವುದನ್ನು ಸಿಎಂ ನಿರ್ಧಾರ ಮಾಡುತ್ತಾರೆ. ಚುನಾವಣೆಗೆ ಮುನ್ನವೇ ಬಿಡುಗಡೆ ಮಾಡಬೇಕಾ ಎನ್ನುವುದನ್ನು ಸಿಎಂ ವಿವೇಚನೆಗೆ ಬಿಡಲಾಗಿದೆ ಎಂದು ತಿಳಿಸಿದ್ದರು.

ಈ ಹಿಂದೆ ಜಾತಿಗಣತಿಯ ಮಾಹಿತಿ ಮಾಧ್ಯಮಗಳಲ್ಲಿ ಸೋರಿಕೆಯಾಗಿತ್ತು. ಈ ಮಾಹಿತಿ ಪ್ರಕಾರ, ಎಸ್‍ಸಿ-ಎಸ್‍ಟಿ 1.45 ಕೋಟಿ, ಮುಸ್ಲಿಂ 70 ಲಕ್ಷ, ಲಿಂಗಾಯಿತ 65 ಲಕ್ಷ, ಒಕ್ಕಲಿಗ 60 ಲಕ್ಷ, ಕುರುಬ 45 ಲಕ್ಷ, ಬ್ರಾಹ್ಮಣ 14 ಲಕ್ಷ, ಕ್ರಿಶ್ಚಿಯನ್ 4.5 ಲಕ್ಷ ಜನ ಇದ್ದಾರೆ.

ಏನಿದು ಜಾತಿ ಗಣತಿ?: ಸರ್ಕಾರದ ಯೋಜನೆಗಳು ಅರ್ಹವಾದ ಫಲಾನುಭವಿಗಳಿಗೆ ತಲುಪಲು ಮತ್ತು ಜನಸಂಖ್ಯೆ ಆಧಾರದ ಮೇಲೆ ನಿರ್ದಿಷ್ಟ ಸಮುದಾಯದವರಿಗೆ ಸೌಲಭ್ಯ ಕಲ್ಪಿಸಲು ಈ ಹಿಂದೆ ಸುಪ್ರೀಂ ಕೋರ್ಟ್ ಜಾತಿ ಗಣತಿ ನಡೆಸಬೇಕು ಎಂದು ಹೇಳಿತ್ತು.

ಈ ಹಿನ್ನೆಲೆಯಲ್ಲಿ ಮೀಸಲಾತಿ ಮತ್ತು ಯೋಜನೆ ರೂಪಿಸಲು, ವೈಜ್ಞಾನಿಕ ಮಾನದಂಡ ಜಾರಿಗೊಳಿಸುವ ಸಲುವಾಗಿ 1931ರ ನಂತರ ದೇಶದಲ್ಲೇ ಮೊದಲ ಬಾರಿ ಕರ್ನಾಟಕ ಸರ್ಕಾರ 2015ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಜಾತಿ ಗಣತಿ ನಡೆಸಿತ್ತು. ಈ ಸಂದರ್ಭದಲ್ಲಿ ಸುಮಾರು 55 ಪ್ರಶ್ನೆಗಳನ್ನು ಕೇಳಿ ಜನರ ಆರ್ಥಿಕ ಸ್ಥಿತಿಯನ್ನೂ ತಿಳಿದುಕೊಳ್ಳಲಾಗಿತ್ತು.

ಈ ಸಮೀಕ್ಷೆ ಮುಗಿದ ಬಳಿಕ ಜಾತಿ ಆಧಾರದ ಮೇಲೆ ಮತ್ತು ಅವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಕುರಿತಂತೆ ವರದಿ ತಯಾರಿಸುವ ಕಾರ್ಯ ಆರಂಭವಾಗಿತ್ತು. ಆದರೆ ಇದೂವರೆಗೂ ಈ ವರದಿಯಲ್ಲಿ ಏನಿದೆ ಎನ್ನುವುದನ್ನು ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೂ ಈ ವರದಿಯಲ್ಲಿರುವ ಮಾಹಿತಿಗಳು ಮಾಧ್ಯಮಗಳಿಗೆ ಸೋರಿಕೆಯಾಗಿತ್ತು.

 

Share This Article
Leave a Comment

Leave a Reply

Your email address will not be published. Required fields are marked *