ಮಗನ ಮೇಲೆ ಅತ್ಯಾಚಾರ ಆರೋಪ- ಸುಳ್ಳು, ಆಧಾರರಹಿತ ಎಂದ ಕೈ ಶಾಸಕ

Public TV
2 Min Read

ಜೈಪುರ: ಮಗನ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಇದು ಸುಳ್ಳು ಹಾಗೂ ಆಧಾರರಹಿತ ಎಂದು ರಾಜಸ್ಥಾನದ ಕಾಂಗ್ರೆಸ್ ಶಾಸಕ ಜೊಹರಿ ಲಾಲ್ ಮೀನಾ ವಾಗ್ದಾಳಿ ನಡೆಸಿದ್ದಾರೆ.

ಮೀನಾ ಮಗ ಸೇರಿ 4 ಮಂದಿ ಸೇರಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಪ್ರತಿಕ್ರಿಯಿಸಿರುವ ಮೀನಾ, ನನ್ನ ಮಗನ ಮೇಲೆ ಸುಖಾಸುಮ್ಮನೆ ಆರೋಪ ಮಾಡಲಾಗಿದೆ. ನನ್ನ ಮಗನ ಮೇಲಿನ ಆರೋಪ ಸತ್ಯಕ್ಕೆ ದೂರವಾಗಿದ್ದಾಗಿದೆ. ಅಲ್ಲದೆ ಆಧಾರರಹಿತವಾಗಿದೆ. 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನನ್ನ ಮಾನಹಾನಿ ಮಾಡುವ ರಾಜಕೀಯ ಪಿತೂರಿ ಇದಾಗಿದೆ ಎಂದು ವಾಗ್ದಾಳಿ ನಡೆಸಿದರು.

ನನ್ನ ರಾಜಕೀಯ ಏಳಿಗೆಯನ್ನು ಸಹಿಸದ ಕೆಲವರು ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಇದು ನನ್ನ ಘನತೆಗೆ ಧಕ್ಕೆ ತರುವ ಹೊಸ ಷಡ್ಯಂತ್ರವಾಗಿದೆ. ಮುಂಬರುವ ಚುನಾವಣೆಗಳಿಂದಾಗಿ ಇಂತಹ ಆರೋಪಗಳು ಮುನ್ನೆಲೆಗೆ ಬರುತ್ತವೆ ಎಂದು ಮೀನಾ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

ಇದೇ ವೇಳೆ ಈ ಹಿಂದೆ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಸ್ಮರಿಸಿದ ಶಾಸಕರು, ತನಿಖೆಯ ನಂತರ ಅದು ಸುಳ್ಳೆಂಬುದು ಬಯಲಾಗಿತ್ತು. ಇದೀಗ ಮಗನ ಮೇಲೂ ಪ್ರಕರಣ ದಾಖಲಾಗಲಿದೆ. ಕೆಲವರು ನನಗೆ ಕಿರುಕುಳ ನೀಡಲು ಹೀಗೆ ಮಾಡಿದ್ದಾರೆ. ಇಂತಹ ಕೆಲಸಗಳನ್ನು ಮಾಡಬಾರದು. ಈ ಹಿಂದೆಯೂ ನನ್ನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ಆದರೆ ತನಿಖೆಯ ನಂತರ ಇದು ಆಧಾರರಹಿತ ಮತ್ತು ನಕಲಿ ಎಂದು ತಿಳಿದುಬಂದಿದೆ ಅಂತ ಮೀನಾ ತಿಳಿಸಿದರು.

ಇತ್ತ ದೌಸಾದ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳ ಜೊತೆ ಮಾತನಾಡಿ, ಆರೋಪಿಗಳು ಸಂತ್ರಸ್ತೆಗೆ ಮಾದಕ ವಸ್ತುವನ್ನು ನೀಡಿದ್ದಾರೆ. ಇದರಿಂದ ಆಕೆ ಅರೆಪ್ರಜ್ಞಾವಸ್ಥೆಯಲ್ಲಿರುವಾಗ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಯ ಅಶ್ಲೀಲ ಫೋಟೋಗಳನ್ನು ಕ್ಲಿಕ್ಕಿಸಿದ್ದಲ್ಲದೇ, ಆಕೆಗೆ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಸ್ ಅಪಘಾತ- 7 ಸಾವು, 45 ಮಂದಿಗೆ ಗಾಯ

ಶಾಸಕರ ಪುತ್ರ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. 15.40 ಲಕ್ಷ ರೂಪಾಯಿ ಮತ್ತು ಚಿನ್ನಾಭರಣಗಳನ್ನು ಸುಲಿಗೆ ಮಾಡಲು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಹಾಗೂ ಸಂತ್ರಸ್ತೆಯ ಅಶ್ಲೀಲ ಫೋಟೋಗಳನ್ನು ಕ್ಲಿಕ್ಕಿಸಿ ಅಮಲು ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಅವರ ಮೇಲಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದರು. ಬಾಲಕಿಯ ಕುಟುಂಬದವರ ದೂರಿನ ಮೇರೆಗೆ ದೌಸಾದಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *