ಮನುಷ್ಯ ತನ್ನ ಉಗಮದ ಬಳಿಕ ಶತೃಗಳ ಮೇಲೆ ದಾಳಿಗೆ ಕಲ್ಲು, ಕೋಲು, ಕತ್ತಿ, ಕೋವಿ, ಬಾಂಬ್, ಅಣು ಬಾಂಬ್ ಹೀಗೆ ನಾನಾ ಆಸ್ತ್ರಗಳನ್ನು ಬಳಸಿದ್ದಾನೆ. ಹಾಗೇ ಈ ಜೈವಿಕ ಅಸ್ತ್ರ (Bioweapon) ಸಹ ಅದರಲ್ಲಿ ಒಂದು. ಇದು ಯಾವುದೇ ಸದ್ದಿಲ್ಲದೇ ಲಕ್ಷಗಟ್ಟಲೇ ಜನ, ಜಾನುವಾರುಗಳನ್ನು ಕೊಲ್ಲಬಹುದಾದ ಅಪಾಯಕಾರಿಯಾದ ರಾಕ್ಷಸ ಅಸ್ತ್ರದಲ್ಲಿ ಒಂದು ಎಂದೇ ಇದರ ಬಳಕೆಯನ್ನು ಬ್ಯಾನ್ ಮಾಡಲಾಗಿದೆ. ಆದರೂ ಕೆಲವು ರಾಷ್ಟ್ರಗಳು ಗೌಪ್ಯವಾಗಿ ತಮ್ಮ ಶತೃ ರಾಷ್ಟ್ರಗಳ ಮೇಲೆ ಇಂತಹ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಿವೆ ಎಂದು ಆಗಾಗ ವರದಿಯಾಗುತ್ತಲೇ ಇರುತ್ತದೆ.
ಈ ಜೈವಿಕ ಅಸ್ತ್ರದ ಬಗ್ಗೆ ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶದ 50ನೇ ವರ್ಷದ ಸಮ್ಮೇಳನದಲ್ಲಿ ವಿದೇಶಾಂಗ ಸಚಿವ ಜೈಶಂಕರ್ (Jaishankar) ಮಾತಾಡಿದ್ದರು. ಈ ಜೈವಿಕ ಅಸ್ತ್ರ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ? ಇದರ ಅಪಾಯಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಜೈವಿಕ ಅಸ್ತ್ರ ಎಂದರೇನು?
ಜೈವಿಕ ಅಸ್ತ್ರಗಳು (Biological Weapons) ವೈರಸ್‌ಗಳು, ಬ್ಯಾಕ್ಟೀರಿಯಾಗಳು, ವಿಷ ಅಥವಾ ಇತರ ಜೀವಿಗಳನ್ನು ಬಳಸಿಕೊಂಡು ಮಾನವರು, ಪ್ರಾಣಿಗಳು ಅಥವಾ ಸಸ್ಯಗಳಲ್ಲಿ ರೋಗ, ಸಾವುನೋವು ಮತ್ತು ಸಾಮೂಹಿಕ ಹಾನಿಯನ್ನುಂಟುಮಾಡುವ ಮಾರಕ ಆಯುಧಗಳಾಗಿವೆ. ಇವುಗಳ ಅಭಿವೃದ್ಧಿ, ಸಂಗ್ರಹಣೆ ಮತ್ತು ಬಳಕೆಯನ್ನು ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶ (BWC) ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿಸಲಾಗಿದೆ.
ಜೈವಿಕ ಅಸ್ತ್ರಗಳ ಪ್ರಮುಖ ಲಕ್ಷಣ
ಇವು ಮದ್ದುಗುಂಡುಗಳಂತೆ ಮೂಲಸೌಕರ್ಯಗಳನ್ನು ನಾಶಪಡಿಸುವುದಿಲ್ಲ. ಬದಲಾಗಿ ಆಂಥ್ರಾಕ್ಸ್ (Anthrax), ಪ್ಲೇಗ್ (Plague), ಟುಲಾರೆನ್ಸಿಯ (Tularemia), ಬೊಟುಲಿನಮ್ ಟಾಕ್ಸಿನ್ (Botulinum Toxin) ಮುಂತಾದ ರೋಗಗಳನ್ನು ಉಂಟು ಮಾಡಬಹುದು. ಇದು ಸಾಮೂಹಿಕ ಸಾವುನೋವುಗಳಿಗೆ ಕಾರಣವಾಗಲಿದೆ.
ವ್ಯಾಪಕ ಹರಡುವಿಕೆ: ಇವು ಒಮ್ಮೆ ಬಿಡುಗಡೆಯಾದ ಬಳಿಕ ನಿಯಂತ್ರಿಸುವುದು ಕಷ್ಟ, ಹರಡುವಿಕೆ ವೇಗವಾಗಿರುತ್ತದೆ ಮತ್ತು ರೂಪಾಂತರಗೊಳ್ಳುವ ಅಪಾಯ ಇರುತ್ತದೆ.
ಕಡಿಮೆ ವೆಚ್ಚ: ಪರಮಾಣು ಅಸ್ತ್ರಗಳಿಗಿಂತ ತಯಾರಿಸಲು ಇವುಗಳನ್ನು ತಯಾರಿಸಲು ಕಡಿಮೆ ಹಣ (Money) ಸಾಕು. ಅದ್ದರಿಂದ ಕೆಲವು ದೇಶಗಳು ಇದರ ಬೆನ್ನ ಹಿಂದೆ ಬಿದ್ದಿವೆ ಎನ್ನಲಾಗುತ್ತಿದೆ. ಇದನ್ನು ʻಸಾಮೂಹಿಕ ವಿನಾಶದ ಅಸ್ತ್ರʼ ಎಂದೂ ಸಹ ಕರೆಯಲಾಗುತ್ತದೆ.
ನಿಷೇಧ: 1972ರ ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶ (BWC) ಮೂಲಕ ಹೆಚ್ಚಿನ ದೇಶಗಳು ಇವುಗಳ ಉತ್ಪಾದನೆ ಮತ್ತು ಬಳಕೆಯನ್ನು ನಿಷೇಧಿಸಿವೆ. ಆದರೂ ಭಯೋತ್ಪಾದಕರು ಇವುಗಳ ತಯಾರಿಸಿ ಹಾಗೂ ಬಳಸುವ ಬೆದರಿಕೆ ಇದೆ.
ತಡೆಗಟ್ಟುವಿಕೆ: ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು, ಲಸಿಕೆಗಳು, ಅಂತರರಾಷ್ಟ್ರೀಯ ಸಹಕಾರ ಮತ್ತು ಕಾನೂನು ಜಾರಿಯಿಂದ ಮಾತ್ರ ತಡೆ ಸಾಧ್ಯ.
ಯಾವ ದೇಶಗಳು ಜೈವಿಕ ಶಸ್ತ್ರಾಸ್ತ್ರಗಳನ್ನು ಹೊಂದಿವೆ?
ಚೀನಾ, ರಷ್ಯಾ ಮತ್ತು ಅಮೆರಿಕದಂತಹ ದೇಶಗಳು ಜೈವಿಕ ಶಸ್ತ್ರಾಸ್ತ್ರ ಹೊಂದಿರಬಹುದೆಂದು ನಂಬಲಾಗಿದೆ. ಆದರೆ, 1972ರ ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶ ಒಪ್ಪಂದದಿಂದ ಇವುಗಳ ಉತ್ಪಾದನೆ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಈ ಒಪ್ಪಂದದ ಹೊರತಾಗಿಯೂ, ಕೆಲವು ದೇಶಗಳು ರಹಸ್ಯವಾಗಿ ಇಂತಹ ಆಯುಧಗಳನ್ನು ಅಭಿವೃದ್ಧಿಪಡಿಸುತ್ತಿರಬಹುದೆಂಬ ಶಂಕೆ ಇದೆ. ಯಾವುದೇ ದೇಶವು ತನ್ನಲ್ಲಿ ಜೈವಿಕ ಅಸ್ತ್ರಗಳಿವೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿಲ್ಲ. ಒಟ್ಟಿನಲ್ಲಿ ಜೈವಿಕ ಶಸ್ತ್ರಾಸ್ತ್ರಗಳು ಜಗತ್ತಿಗೆ ಗಂಭೀರ ಬೆದರಿಕೆಯಾಗಿವೆ.
ಚೀನಾದ ಜೈವಿಕ ಸಂಶೋಧನಾ ಸಾಮರ್ಥ್ಯ, ವಿಶೇಷವಾಗಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಂತಹ ಉನ್ನತ ಮಟ್ಟದ ಪ್ರಯೋಗಾಲಯಗಳು, ಜಾಗತಿಕ ಆತಂಕಕ್ಕೆ ಕಾರಣವಾಗಿವೆ. ಕೋವಿಡ್-19 ಸಮಯದಲ್ಲಿ ಈ ಪ್ರಯೋಗಾಲಯಕ್ಕೆ ಸಂಬಂಧಿಸಿದ ಊಹಾಪೋಹಗಳು ಚರ್ಚೆಗೆ ಗ್ರಾಸವಾಗಿತ್ತು.
ರಷ್ಯಾ ಮೇಲೆ ಉಕ್ರೇನ್ ದಾಳಿ?
ಈ ಹಿಂದೆ ಬಾವಲಿ ಹಾಗೂ ಇನ್ನಿತರ ಪಕ್ಷಿಗಳನ್ನು ಜೈವಿಕ ಅಸ್ತ್ರವಾಗಿ ಬಳಸಿ ದಾಳಿ ನಡೆಸಲು ಉಕ್ರೇನ್ ಸಂಚು ನಡೆಸಿದೆ ಎಂದು ರಷ್ಯಾ ಗಂಭೀರ ಆರೋಪ ಮಾಡಿತ್ತು. ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ರಷ್ಯಾದ ರಾಯಭಾರಿ ವಾಸಿಲಿ ನೆಂಬೆಂಝಿಯಾ ಉಕ್ರೇನ್ ಬಾವಲಿ ಹಾಗೂ ದೂರ ರಾಷ್ಟ್ರಗಳಿಗೆ ವಲಸೆ ಹೋಗುವ ಪಕ್ಷಿಗಳನ್ನು ಬಳಸಿ ಮಾರಣಾಂತಿಕ ರೋಗಗಳನ್ನು ಹರಡಲು ಸಂಚು ಹೂಡಿದೆ. ಉಕ್ರೇನಿಗೆ ಜೈವಿಕ ಅಸ್ತ್ರಗಳನ್ನು ಉತ್ಪಾದಿಸಲು ಅಮೆರಿಕ ಸಹಾಯ ಮಾಡುತ್ತಿದೆ ಎಂದಿದ್ದರು.
ಎಸ್ ಜೈಶಂಕರ್ ಹೇಳಿದ್ದೇನು?
ಅಂತರರಾಷ್ಟ್ರೀಯ ಭದ್ರತೆಯ ಅನಿಶ್ಚಿತವಾಗಿರುವುದರಿಂದ ಜೈವಿಕ ಶಸ್ತ್ರಾಸ್ತ್ರಗಳ ದುರುಪಯೋಗ ತಡೆಯಲು ಜಾಗತಿಕ ಕಾರ್ಯವಿಧಾನದ ಅಗತ್ಯವಿದೆ.
ಜೈವಿಕ ಶಸ್ತ್ರಾಸ್ತ್ರಗಳ ದುರುಪಯೋಗ ಆಗುತ್ತಿರುವುದು ಕಳವಳಕಾರಿಯಾಗಿದೆ. ಜೈವಿಕ ಭಯೋತ್ಪಾದನೆ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೋರಾಡಲು ಸಮರ್ಪಕವಾಗಿ ಸಿದ್ಧವಾಗಬೇಕಾಗಿದೆ. ಅಂತಹ ಸವಾಲನ್ನು ಎದುರಿಸಲು ಎಲ್ಲಾ ರಾಷ್ಟ್ರಗಳ ಸಹಕಾರದ ಅಗತ್ಯವಿದೆ.
ವಿಜ್ಞಾನದೊಂದಿಗೆ ಜಾಗತಿಕ ಸಾಮರ್ಥ್ಯವನ್ನು ಬಲಪಡಿಸಬೇಕು. ಹೀಗಾದಲ್ಲಿ ಮಾತ್ರ ಎಲ್ಲಾ ದೇಶಗಳು ಜೈವಿಕ ಅಪಾಯಗಳನ್ನು ಪತ್ತೆಹಚ್ಚಬಹುದು, ತಡೆಗಟ್ಟಬಹುದು ಮತ್ತು ಸೂಕ್ತವಾಗಿ ಹೋರಾಡಬಹುದು. ಭಾರತವು ಶಾಂತಿಯುತ ಜೈವಿಕ ಸಂಶೋಧನೆ, ವಸ್ತುಗಳು ಮತ್ತು ತಂತ್ರಜ್ಞಾನದ ವಿನಿಮಯಕ್ಕಾಗಿ ಅಂತರರಾಷ್ಟ್ರೀಯ ಸಹಕಾರವನ್ನು ಸಹ ಬೆಂಬಲಿಸುತ್ತದೆ ಎಂದಿದ್ದರು.





