ರಿಚ್ಚಿ ಹೀರೋ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಏರಿದ ನಟಿ

Public TV
1 Min Read

ಹೊಸಬರ ಸಿನಿಮಾ ‘ರಿಚ್ಚಿ’ (Ritchie) ಮೊನ್ನೆ ಮೊನ್ನೆಯಷ್ಟೇ ತನ್ನ ಹಾಡುಗಳನ್ನು ಬಿಡುಗಡೆ ಮಾಡಿತ್ತು. ಕುನಾಲ್ ಗಾಂಜಾವಾಲ್ ಈ ಸಿನಿಮಾಗಾಗಿ ಮತ್ತೆ ಕನ್ನಡಕ್ಕೆ ಬಂದಿದ್ದರು. ಒಂದೊಳ್ಳೆ ಹಾಡು ಹೇಳಿದ್ದರು. ನಗನಗ್ತಾ ಶೂಟಿಂಗ್ ಮುಗಿಸಿ, ಸಿನಿಮಾ ರಿಲೀಸ್ ಗೆ ರೆಡಿ ಮಾಡಿಕೊಳ್ಳುತ್ತಿದ್ದ ತಂಡಕ್ಕೆ ಈಗೊಂದು ಶಾಕಿಂಗ್ ನ್ಯೂಸ್ ಬಂದಿದೆ.

ರಿಚ್ಚಿ ಸಿನಿಮಾದ ನಾಯಕ, ನಿರ್ಮಾಪಕ, ನಿರ್ದೇಶಕ ರಿಚ್ಚಿ ವಿರುದ್ಧ ಸಿನಿಮಾದ ನಾಯಕಿ ಪೊಲೀಸ್ (police) ಠಾಣೆ ಮೆಟ್ಟಿಲು ಏರಿದ್ದಾರೆ. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಈ ಇಬ್ಬರ ನಡುವೆ ಜಗಳ ನಡೆದಿದ್ದು, ನಟಿ ರೆಮೋಲಾ (Remola) ಹಾಗೂ ನಟಿಯ ತಾಯಿ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ರಿಚ್ಚಿ ವಿರುದ್ಧ ದೂರು (complaint) ದಾಖಲಿಸಿದ್ದಾರೆ.

ತನ್ನದೇ ಹೆಸರನ್ನು ಸಿನಿಮಾದ ಟೈಟಲ್ ಆಗಿಸಿ, ಹಲವು ಜವಾಬ್ದಾರಿಗಳನ್ನು ಹೊತ್ತಿದ್ದಾರೆ ರಿಚ್ಚಿ. ಈ ಸಿನಿಮಾಗೆ ಕಿರುತೆರೆ ನಟಿ ರೆಮೋಲಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಸಂಭಾವನೆಯಾಗಿ ಎರಡು ಲಕ್ಷ ರೂಪಾಯಿಯ ಚೆಕ್ ಅನ್ನೂ ನೀಡಿದ್ದಾರೆ. ಆದರೆ, ಕಾಲ್ ಶೀಟ್ ವಿಚಾರವಾಗಿ ಇಬ್ಬರ ಮಧ್ಯ ಗಲಾಟೆಯಾಗಿದೆ. ಅಲ್ಲದೇ, ರೆಮೋಲಾಗೆ ಕೊಟ್ಟಿರುವ ಚೆಕ್ ಬೌನ್ಸ್ ಕೂಡ ಆಗಿದೆ. ಈ ವಿಚಾರವಾಗಿ ನಟಿ ಮತ್ತು ರಿಚ್ಚಿ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ರಮೋಲಾ ಚಲನಚಿತ್ರ ವಾಣಿಜ್ಯ ಮಂಡಳಿಗೆ ಈ ವಿಷಯವನ್ನು ಗಮನಕ್ಕೆ ತಂದಿದ್ದಾರೆ. ಅಲ್ಲಿ ಇತ್ಯರ್ಥವಾಗದೇ ಇದೀಗ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.

ನಟಿಯ ತಾಯಿ ತಮಗೆ ಅವಾಚ್ಯ ಪದಗಳಿಂದ ಬೈದಿದ್ದಾರೆ ಎಂದು ರಿಚ್ಚಿ ಆರೋಪ ಮಾಡಿದ್ದಾರೆ.  ಅದಕ್ಕೆ ಆಡಿಯೋ ಕ್ಲಿಪ್ ವೊಂದನ್ನು ನೀಡಿದ್ದಾರೆ. ಇಂದು ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಮಾತುಗಳನ್ನು ದಾಖಲಿಸಲಿದ್ದಾರಂತೆ ರಿಚ್ಚಿ.

Share This Article