ಅದು ನನ್ನ ಸಿನಿಮಾವಲ್ಲ, ನನ್ನ ಕ್ಷಮಿಸಿ: ‘ರಂಗನಾಯಕ’ ಬಗ್ಗೆ ಜಗ್ಗೇಶ್ ಅಚ್ಚರಿ ಹೇಳಿಕೆ

Public TV
1 Min Read

ರಂಗನಾಯಕ ಸಿನಿಮಾ ಕುರಿತಂತೆ ಸಾಕಷ್ಟು ಮೆಚ್ಚುಗೆ ಮಾತುಗಳನ್ನು ಆಡಿದ್ದ ನಟ ಜಗ್ಗೇಶ್ (Jaggesh), ಆ ಸಿನಿಮಾದ ಬಗ್ಗೆ ನೆಗೆಟಿವ್ ಕಾಮೆಂಟ್ಸ್ ಬರುತ್ತಿದ್ದಂತೆಯೇ ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ. ನಿನ್ನೆ ಅವರ ಹುಟ್ಟು ಹಬ್ಬ. ಪ್ರತಿ ವರ್ಷದಂತೆ ಈ ಬಾರಿಯೂ ಅವರು ರಾಯರ ಸನ್ನಿಧಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡು ಅಲ್ಲಿಂದಲೇ ಫೇಸ್ ಬುಕ್ ಲೈವ್ ಮಾಡಿದ್ದಾರೆ. ಹಲವಾರು ವಿಚಾರಗಳನ್ನು ಮಾತನಾಡುತ್ತಾ, ರಂಗನಾಯಕ (Ranganayaka) ಬಗ್ಗೆಯೂ ಮಾತನಾಡಿದ್ದಾರೆ.

ಮೊನ್ನೆಯಷ್ಟೇ ಒಂದು ಸಿನಿಮಾ ಮಾಡಿದ್ದೆ. ಅದು ನಿಮಗೆ ಇಷ್ಟವಾಗಿಲ್ಲ. ಅದು ನನ್ನ ಸಿನಿಮಾವಲ್ಲ, ಅದು ನಿರ್ದೇಶಕರ ಸಿನಿಮಾ. ಒಬ್ಬರನ್ನು ನಂಬಿ ನಾನು ಕೆಲಸ ಮಾಡುತ್ತೇನೆ. ಆ ನಿರ್ದೇಶಕರು ತಮ್ಮ ಆಸೆಯಂತೆ ಸಿನಿಮಾ ಮಾಡಿದ್ದಾರೆ. ಪ್ರಿಮಿಯರ್ ಪದ್ಮಿನಿ ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಿದ್ದೇನೆ. ಹಾಗೆ ಸಿನಿಮಾ ಇಷ್ಟವಾಗದೇ ಇದ್ದಾಗ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ ಜಗ್ಗೇಶ್.

ಲೈವ್‌ನಲ್ಲಿ ಜಗ್ಗೇಶ್, ತಮ್ಮ ಬೆಳವಣಿಗೆಗೆ ಮುಖ್ಯ ಕಾರಣ ನನ್ನ ಗುರುಗಳು ರಾಘವೇಂದ್ರ ಸ್ವಾಮಿಗಳು ಎಂದು ಹೇಳಿದ್ದಾರೆ. ಮುಖ್ಯ ವಿಚಾರಕ್ಕೆ ಬರುತ್ತೇನೆ ಎಂದ ಜಗ್ಗೇಶ್, ನಾನು ನೇರವಾಗಿ ಮಾತಾಡುವ ಮನುಷ್ಯ, ಹಳ್ಳಿಯ ಸೊಗಡಿನವನು, ನನ್ನ ಮಾತುಗಳಲ್ಲಿ ಹಳ್ಳಿ ಪದಗಳು ಬಂದು ಬಿಡುತ್ತವೆ ಎಂದು ಪರೋಕ್ಷವಾಗಿ ವರ್ತೂರು ಸಂತೋಷ್ ಅವರಿಗೆ ಬೈದದನ್ನೂ ನೆನಪಿಸಿಕೊಂಡಿದ್ದಾರೆ.

ನಾನು ಎಂದಿಗೂ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ ಎಂದು ಮಾತನಾಡಿದ್ದಾರೆ. ಬಳಿಕ ಜಗ್ಗೇಶ್, ಮೈಕ್ ಹಿಡಿದ ಮಾತಾಡುವಾಗ ನನ್ನ ಮಾತಿನಿಂದ ಯಾರಿಗಾದ್ರೂ ಬೇಜಾರಾಗಿದ್ದರೆ ಕ್ಷಮಿಸಿಬಿಡಿ. ನಿಮ್ಮ ತಂದೆಯ ವಯಸ್ಸಿನವನು ಅಂದುಕೊಂಡು ಕ್ಷಮಿಸಿ ಎಂದು ಮಾತನಾಡಿದ್ದಾರೆ.

 

ಸಿನಿಮಾವೊಂದರ ಪ್ರಚಾರದ ವೇಳೆ, ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡುತ್ತಾ, ಬಿಗ್ ಬಾಸ್ ಸ್ಪರ್ಧಿ (Bigg Boss Kannada 10) ವರ್ತೂರು ಸಂತೋಷ್ ಅವರನ್ನು ‘ಕಿತ್ತೋದ್ ನನ್ ಮಗ’ ಎಂಬ ಪದ ಬಳಸಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಈಗ ಜಗ್ಗೇಶ್, ವರ್ತೂರು ಸಂತೋಷ್ (Varthur Santhosh) ಹೆಸರು ಹೇಳದೇ ಕ್ಷಮೆ ಕೇಳಿದ್ದಾರೆ.

Share This Article