ಕೊಲೆ ಆರೋಪಿ, ನಟ ದರ್ಶನ್ ಈ ಸಲ ಕೋರ್ಟ್‌ಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ವೇಳೆ ಜಡ್ಜ್ ಮುಂದೆ ವಿಷ ಕೇಳಿ ಆಶ್ಚರ್ಯಕ್ಕೀಡುಮಾಡಿದ್ದರು. ದರ್ಶನ್ ನಡೆ ಆಪ್ತರಿಗೆ ಆಶ್ಚರ್ಯ ಉಂಟು ಮಾಡಿದೆ. ಹೀಗಾಗಿ ದರ್ಶನ್ ಸ್ಥಿತಿಗೆ ಮರುಕ ವ್ಯಕ್ತಪಡಿಸುತ್ತಿದೆ ಅವರ ಆಪ್ತ ಬಳಗ. ಇದೀಗ ನಿರ್ದೇಶಕ ತರುಣ್ ಸುಧೀರ್ ಮಾತನಾಡಿ ದರ್ಶನ್ ತುಂಬಾ ಸ್ಟ್ರಾಂಗ್ ವ್ಯಕ್ತಿತ್ವದವರು. ಅಂಥವರೇ ಹೀಗೆ ವಿಷ ಕೇಳ್ತಾರೆ ಅಂದ್ರೆ ಅವರು ಎಷ್ಟು ನೊಂದಿರಬೇಡ ಎಂದಿದ್ದಾರೆ.
ದರ್ಶನ್ ಜೊತೆ ಈಗಾಗ್ಲೇ ಸಿನಿಮಾ ಮಾಡುವುದರ ಜೊತೆ ಆಪ್ತ ವಲಯದಲ್ಲಿದ್ದವರು ನಿರ್ದೇಶಕ ತರುಣ್ ಸುಧೀರ್. ಇದೀಗ ದರ್ಶನ್ ಸ್ಥಿತಿಗೆ ಬೇಸರವ್ಯಕ್ತಪಡಿಸಿ ಮಾತನಾಡಿರುವ ತರುಣ್, ದರ್ಶನ್ ಈ ಸ್ಥಿತಿ ತಮಗೆ ನೋವು ತಂದಿದೆ ಎಂದಿದ್ದಾರೆ. ದರ್ಶನ್ ತುಂಬಾ ಸ್ಟ್ರಾಂಗ್ ಇರೋವ್ರು, ಅವರೇ ಹೀಗೆ ಯೋಚನೆ ಮಾಡ್ತಾರೆ ಅಂದ್ರೆ ಅಲ್ಲಿ ಅವರಿಗೆ ಎಷ್ಟು ಕಷ್ಟ ಆಗಿರಬೇಡ, ಅವರೆಷ್ಟು ನೊಂದಿರಬೇಡ. ದರ್ಶನ್ ಆಪಾದಿತ ಅಷ್ಟೇ, ಅಪರಾಧಿ ಅಲ್ಲ. ಬೇಸಿಕ್ ಅವಶ್ಯಕತೆಗಳನ್ನ ಪೂರೈಸಬೇಕು. ನಾನು ಚೌಕ ಸಿನಿಮಾಕ್ಕಾಗಿ ಸಾಕಷ್ಟು ದಿನಗಳ ಕಾಲ ಜೈಲ್‌ನಲ್ಲೇ ಚಿತ್ರೀಕರಣ ಮಾಡಿದ್ದೇನೆ. ಅಲ್ಲಿ ಹೇಗಿರುತ್ತೆ ಅಂತ ನೋಡಿದ್ದೀನಿ. ಅಲ್ಲಿ ಎಲ್ಲಾ ಪ್ರಿಸನರ್ಸ್‌ಗೆ ಅವರದ್ದೇ ಆದ ಫೆಸಿಲಿಟಿ ಕೊಡಲೇಬೇಕು ಅಂತ ಹ್ಯೂಮನ್ ರೈಟ್ಸ್ ಕಡೆಯಿಂದ ಇದೆ. ಅದನ್ನ ಯಾರೂ ಕಿತ್ತುಕೊಳ್ಳೋದಕ್ಕಾಗಲ್ಲ. ಅದನ್ನೂ ಮೀರಿ ಏನೋ ಆಗಿದೆ ಅಂದ್ರೆ ನನಗೂ ಅದು ನೋವು ತಂದುಕೊಡುತ್ತಿದೆ ಎಂದಿದ್ದಾರೆ ತರುಣ್ ಸುಧೀರ್.
ಸುಪ್ರೀಂ ಕೋರ್ಟ್‌ನಿಂದ ಜಾಮೀನು ರದ್ದಾಗಿರುವ ಕಾರಣಕ್ಕೆ ದರ್ಶನ್ ಮತ್ತೆ ಜೈಲಲ್ಲಿದ್ದಾರೆ. ಕಳೆದ ಬಾರಿ ದರ್ಶನ್‌ಗೆ ರಾಜಾತಿಥ್ಯ ಪಡೆದುಕೊಂಡಿದ್ದಕ್ಕೆ ಈ ಸಲ ಅವರ ಮೇಲೆ ಭಾರಿ ನಿಗಾ ಇಡಲಾಗಿದ್ದು, ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಮಂಗಳವಾರ ಸೆಷನ್ಸ್ ಕೋರ್ಟ್‌ನಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ದರ್ಶನ್, ನ್ಯಾಯಾಧೀಶರ ಮುಂದೆ ತಮಗೆ ವಿಷ ಕೊಡುವಂತೆ ಆದೇಶ ಮಾಡಿ ಎಂದು ಅಳಲು ತೋಡಿಕೊಂಡಿದ್ದರು. ನನ್ನ ಬಟ್ಟೆಗಳು ಕೊಳಕಾಗಿದೆ. ಫಂಗಸ್ ಆಗಿದೆ, ಹೀಗಾಗಿ ವಿಷ ಕೊಡಲು ಆದೇಶಿಸಿ ಎಂದು ಕೇಳಿಕೊಂಡಿದ್ದರು. ಈ ವಿಚಾರಕ್ಕೆ ದರ್ಶನ್ ಆಪ್ತರು ಬೇಸರಿಸಿಕೊಂಡಿದ್ದಾರೆ.