ಮೂರು ವಿಶ್ವದಾಖಲೆಗಳನ್ನು ಯೋಧರಿಗೆ ಸಮರ್ಪಿಸಿದ ತನುಶ್ರೀ ಪಿತ್ರೋಡಿ!

Public TV
2 Min Read

ಉಡುಪಿ: ಉಗ್ರರ ಪುಲ್ವಾಮಾ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದ್ದು, ಭಾರತದಾದ್ಯಂತ ಜನ ವಿಜಯೋತ್ಸವ ಆಚರಿಸುತ್ತಿರುವ ಬೆನ್ನಲ್ಲೇ ಉಡುಪಿಯ ತನುಶ್ರೀ ಪಿತ್ರೋಡಿ ತನ್ನ ಮೂರು ವಿಶ್ವದಾಖಲೆಗಳನ್ನು ಯೋಧರಿಗೆ ಸಮರ್ಪಿಸಿ ದೇಶಭಕ್ತಿ ಮೆರೆದಿದ್ದಾಳೆ.

ಒಂದು ನಿಮಿಷದಲ್ಲಿ ಅತಿ ಹೆಚ್ಚು ನಿರಾಲಂಬ ಪೂರ್ಣ ಚಕ್ರಾಸನ ಮತ್ತು ಧನುರಾಸನ ಮಾಡಿದ್ದಕ್ಕೆ ತನುಶ್ರೀ ಪಿತ್ರೋಡಿ ಹೆಸರು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಹಾಗೂ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಪುಸ್ತಕಕ್ಕೆ ಸೇರ್ಪಡೆಯಾಗಿತ್ತು. ಇದೀಗ ಆ ಮೂರೂ ದಾಖಲೆಗಳನ್ನು ಭಾರತದ ವೀರ ಯೋಧರಿಗೆ ಈ ಪುಟ್ಟ ಬಾಲಕಿ ಸಮರ್ಪಣೆ ಮಾಡಿದ್ದಾಳೆ. ದೇಶದಲ್ಲಿ ಯೋಧರು ಮಾಡುವ ಕೆಲಸಕ್ಕಿಂತ ಮಿಗಿಲಾದ ಕೆಲಸ ಇನ್ಯಾವುದೂ ಇಲ್ಲ ಅಂತ ತನುಶ್ರೀ ಹೇಳಿದ್ದಾಳೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ತನುಶ್ರೀ, 13 ದಿನದ ಹಿಂದೆ ಉಗ್ರಗಾಮಿಗಳು ನಮ್ಮ ಸೈನಿಕರನ್ನು ಕೊಂದಿದ್ದರು. ಅದನ್ನು ಟಿವಿಯಲ್ಲಿ ನೋಡಿ ಕಣ್ಣೀರು ಬಂತು. ನಾನು ಒಂದು ವರ್ಷದ ಹಿಂದೆ ಮಾಡಿದ ದಾಖಲೆ ಮತ್ತು ವಾರದ ಹಿಂದೆ ಮಾಡಿರುವ ಮತ್ತೆರಡು ದಾಖಲೆಗಳನ್ನು ಯೋಧರಿಗೆ ಸಮರ್ಪಿಸುತ್ತೇನೆ ಎಂದು ತಿಳಿಸಿದ್ದಾಳೆ.

ಪಾಕಿಸ್ತಾನದ ಉಗ್ರರು ಭಾರತದಲ್ಲಿ ದಾಳಿ ಮಾಡಿ 40 ಸೈನಿಕರನ್ನು ಹತ್ಯೆ ಮಾಡಿದ ಫೋಟೋಗಳನ್ನು ನೋಡಿ ಬಹಳ ಬೇಸರವಾಗಿದೆ. ಈಗ ನಮ್ಮ ದೇಶದ ಸೈನಿಕರು ಪಾಕಿಸ್ತಾನದವರನ್ನು ದಾಳಿ ಮಾಡಿ ಕೊಂದಿದ್ದಾರೆ. ನನ್ನ ಎಲ್ಲಾ ಪ್ರಶಸ್ತಿಯ ಗೌರವ ನಮ್ಮ ದೇಶದ ಸೈನಿಕರಿಗೆ ಸಲ್ಲಬೇಕು. ಇದು ನನ್ನ ಆಸೆಯೂ ಹೌದು, ನಮ್ಮ ತಂದೆ ತಾಯಿಯ ಆಸೆಯೂ ಹೌದು. ನಾವು ಮನೆಯಲ್ಲಿ ಆರಾಮವಾಗಿ ಇರುತ್ತೇವೆ. ಸೈನಿಕರು ಮನೆ ಬಿಟ್ಟು- ಸಂಬಂಧದವರನ್ನು ಬಿಟ್ಟು ದೇಶ ರಕ್ಷಣೆ ಮಾಡುತ್ತಾರೆ. ಪ್ರಶಸ್ತಿಯನ್ನು ಸೈನಿಕರಿಗೆ ಅರ್ಪಣೆಮಾಡಿದ್ದು ಶಾಲೆಯ ಶಿಕ್ಷಕರಿಗೂ ಖುಷಿಯಾಗಿದೆ ಎಂದು ತನುಶ್ರೀ ಸಂತೋಷಪಟ್ಟಳು.

ತನುಶ್ರೀ ಪಿತ್ರೋಡಿ ಪೋಷಕರು ಮಾತನಾಡಿ, ದೇಶಾಭಿಮಾನ ಮಕ್ಕಳಲ್ಲಿ ತುಂಬುವುದು ಎಲ್ಲಾ ತಂದೆ ತಾಯಿಗಳ ಕರ್ತವ್ಯ. ದೇಶಕ್ಕೆ, ಸೈನಿಕರಿಗೆ ನಮ್ಮಿಂದ ಏನೂ ಕೊಡಲು ಸಾಧ್ಯವಿಲ್ಲ. ಬಿಸಿಲು ಮಳೆ ಚಳಿಯನ್ನು ಲೆಕ್ಕಿಸದೇ ದೇಶವನ್ನು ಹಗಲಿರುಳು ಅವರು ಕಾಯುತ್ತಾರೆ. ಈ ಪ್ರಶಸ್ತಿಯನ್ನು ಯೋಧರಿಗೆ ಅರ್ಪಿಸುವುದರಿಂದ ಅವರ ಮನಸ್ಸಿಗೆ ಖುಷಿಯಾದರೆ, ಅವರ ಮುಖದಲ್ಲಿ ಒಂದು ನಗು ಮೂಡಿದರೆ ಅಷ್ಟೇ ಸಾಕು. ಮಗಳು ವಿಶ್ವದಾಖಲೆ ಯೋಧರಿಗೆ ಅರ್ಪಿಸಿದ್ದು ಬಹಳ ಖುಷಿಯಾಗಿದೆ. ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ಸಂಹಾರ ಮಾಡಿದ್ದು ಮನಸ್ಸಿಗೆ ನೆಮ್ಮದಿ ತಂದಿದೆ. 40 ಯೋಧರ ಆತ್ಮಕ್ಕೆ ಶಾಂತಿ ಸಿಕ್ಕರೆ ಅಷ್ಟೇ ಸಾಕು. ಭಾರತೀಯ ಸೇನೆಗೆ ನಮ್ಮದೊಂದು ಸೆಲ್ಯೂಟ್ ಎಂದು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಇಡೀ ಕುಟುಂಬ ಶ್ರದ್ಧಾಂಜಲಿ ಸಲ್ಲಿಸಿ, ವಾಯುಸೇನೆಯ ದಾಳಿಗೆ ಅಭಿನಂದನೆ ಸಲ್ಲಿಸಿದೆ.

https://www.youtube.com/watch?v=zduxBSmQEHo

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *