ಪ್ರತಿದಿನ ನಮ್ಮ ಹೆಸರು ಹಾಕ್ತೀರಲ್ಲ ನಿಮಗೆ ಧನ್ಯವಾದ: ಮಾಧ್ಯಮಗಳಿಗೆ ಎಚ್ ಡಿ ರೇವಣ್ಣ

Public TV
2 Min Read

ಹಾಸನ: ಒಳ್ಳೆಯದ್ದೋ ಕೆಟ್ಟದ್ದೊ ಪ್ರತಿ ದಿನ ನಮ್ಮ ಹೆಸರು ಹಾಕ್ತೀರಲ್ಲ. ನಿಮಗೆ ಧನ್ಯವಾದಗಳೆಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಶ್ರವಣಬೆಳಗೊಳದಲ್ಲಿ ಏರ್ಪಟ್ಟಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಳ್ಳೆಯದ್ದೋ ಕೆಟ್ಟದ್ದೊ ದಿನಾ ಮಾಧ್ಯಮದಲ್ಲಿ ನಮ್ಮ ಹೆಸರು ಹಾಕ್ತೀರಲ್ಲಾ ನಿಮಗೆಲ್ಲಾ ಧನ್ಯವಾದಗಳು. ಇದರಿಂದಾಗಿ ಜನರು ನಿತ್ಯ ನಮ್ಮ ಬಗ್ಗೆ ಮಾತನಾಡುವಂತೆ ಮಾಡುತ್ತಿದ್ದೀರಿ ಎಂದು ಮಾಧ್ಯಮಗಳಿಗೆ ಕಿಚಾಯಿಸಿದರು.

ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಆರೋಪಗಳಿಗೂ ಕಾಲ ಬಂದಾಗ ಉತ್ತರ ಕೊಡುತ್ತೇನೆ. ನಾನು ವಾಸ್ತು ಪ್ರಕಾರ ಮನೆ ಮಾಡಿಸಿಕೊಂಡ ವಿಚಾರವನ್ನು ತೋರಿಸುತ್ತೀರಿ. ಕೆಲವು ಕೆಲಸಗಳು ಆಗಬೇಕಿತ್ತು ಅದನ್ನು ನಾವು ಮಾಡಿಸಿಕೊಂಡ್ರೆ ತಪ್ಪಾ? ಹಾಗೆ ನಾವು ರಾಜ್ಯದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಸಹ ತೋರಿಸಿ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

ಪ್ರತ್ಯೇಕ ರಾಜ್ಯ ಕುರಿತು ಪ್ರತಿಕ್ರಿಯಿಸಿ, ನಮಗೆ ಅಖಂಡ ಕರ್ನಾಟಕ ಒಂದಾಗಿ ಇರಬೇಕು. ಇದರ ಕುರಿತು ನೇರ ಚರ್ಚೆಗೆ ನನ್ನ ಮುಂದೆ ಬನ್ನಿ ಎಂದು ಬಿಜೆಪಿ ನಾಯಕರುಗಳಿಗೆ ಸವಾಲು ಹಾಕಿದ ಅವರು ಯಡಿಯೂರಪ್ಪ ಉತ್ತರ ಕರ್ನಾಟಕಕ್ಕೆ ಏನು ಮಾಡಿದ್ದಾರೆ? ಅವರು ಅಧಿಕಾರದಲ್ಲಿದ್ದಾಗ ನಾವೇನು ಹಿಡ್ಕೊಂಡಿದ್ದೀವಾ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ನೀರಾವರಿ ಕಾಮಗಾರಿಗಳಿಗೆ ದೇವೇಗೌಡರ ಕೊಡುಗೆ ಸಾಕಷ್ಟಿದೆ. ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಏನೇನು ಕೆಲಸಗಳಾಗಿವೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ದಿನ ಬೆಳಿಗ್ಗೆ ಮಾಧ್ಯಮಗಳನ್ನು ಇಟ್ಟುಕೊಂಡು ಎಷ್ಟು ದಿನ ಈ ರೀತಿ ಮಾಡುತ್ತೀರಿ ಎಂದು ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದರು.

ಉಮೇಶ್ ಕತ್ತಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ತಮ್ಮ ತಮ್ಮ ಅಧ್ಯಕ್ಷರಾಗಿದ್ದಾಗ ಬೆಳಗಾವಿಯ ಡಿ.ಸಿ.ಸಿ. ಬ್ಯಾಂಕಿನಲ್ಲಿ ಎಷ್ಟು ಸಾಲಮನ್ನಾ ಆಗಿದೆ. ಆ ಸಾಲ ಯಾರಿಗೆ ಕೊಟ್ಟಿದ್ದರು. ಅಲ್ಲದೇ ರಾಜಕಾರಣ ಯಾವತ್ತು ಸುಳ್ಳಿನಿಂದ ಆಗಲ್ಲ. ಓಟಿಗಾಗಿ ಬಡವರನ್ನು ಯಾಕೆ ಹಾಳು ಮಾಡುತ್ತೀರಿ. ನಿಮಗೆ ನಾಚಿಕೆಯೇ ಇಲ್ಲ. ಮಹದಾಯಿ ವಿಚಾರವನ್ನು ಇಷ್ಟು ದಿನಗಳಿಂದ ಯಾಕೆ ಪರಿಹರಿಸಿಲ್ಲ ಎಂದು ಹರಿಹಾಯ್ದರು.

ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಪ್ರಥಮ ದರ್ಜೆ ಕಾಲೇಜುಗಳಿರಲಿಲ್ಲ. ಅದನ್ನ ಮಾಡೋದಕ್ಕೆ ಕುಮಾರಸ್ವಾಮಿಯವರೇ ಬರಬೇಕಿತ್ತಾ? ಇದರಲ್ಲಿ ಯಾರ ಮಕ್ಕಳು ಓದುತ್ತಾರೆ? ಇದರಲ್ಲಿ ಓದೋದು ಬಡವರ ಮಕ್ಕಳಲ್ಲವೇ? ಕುಮಾರಣ್ಣ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಯಾರ್ರಿ ದಿನದ 20 ಗಂಟೆ ಕೆಲ್ಸ ಮಾಡೊದು ಈ ದೇಶದಲ್ಲಿ. ಕುಮಾರಸ್ವಾಮಿ 49 ಸಾವಿರಕೋಟಿ ಸಾಲಾಮನ್ನಾ ಮಾಡಿದ್ದಾರೆ. ಕೇಂದ್ರ ಸರ್ಕಾರವೂ 50 ಸಾವಿರಕೋಟಿ ಸಾಲಮನ್ನಾ ಮಾಡಿಸಲಿ ಎಂದು ಬಿಜೆಪಿ ಹಾಗು ಯಡಿಯೂರಪ್ಪನವರಿಗೆ ಸವಾಲು ಹಾಕಿದರು.

Share This Article
1 Comment

Leave a Reply

Your email address will not be published. Required fields are marked *