ಚಡ್ಡಿ ಹಾಕೊಂಡು ಪಾಸ್‍ಪೋರ್ಟ್ ವೆರಿಫಿಕೇಷನ್‍ಗೆ ಬಂದ ವ್ಯಕ್ತಿಯನ್ನ ಠಾಣೆಯಿಂದ ಹೊರಕಳಿಸಿದ ಪೊಲೀಸರು

Public TV
1 Min Read

ಥಾಣೆ: ಶನಿವಾರ ಸಂಜೆ ಮಹಾರಾಷ್ಟ್ರದ ಕಲ್ಯಾಣ್ ನಿವಾಸಿಯಾದ ಮಂಗೇಶ್ ದೇಸಲೆ ಪಾಸ್‍ಪೋರ್ಟ್ ವೆರಿಫಿಕೇಷನ್‍ಗಾಗಿ ಇಲ್ಲಿನ ಖಡಕ್‍ಪಾದಾ ಪೊಲೀಸ್ ಠಾಣೆಗೆ ಹೋಗಿದ್ರು. ಆದ್ರೆ ಅವರನ್ನ ಪೊಲೀಸರು ಠಾಣೆಯಿಂದ ಹೊರಗಟ್ಟಿದ್ರು ಎಂದು ಹೇಳಿದ್ದಾರೆ. ಅವರು ಮಾಡಿದ ಅಪರಾಧವಾದ್ರೂ ಏನು ಅಂದ್ರಾ? ಚಡ್ಡಿ ಹಾಕೊಂಡು ಠಾಣೆಗೆ ಹೋಗಿದ್ದು.

ಈ ಬಗ್ಗೆ ಮಂಗೇಶ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದು, ತಾನು ಹಾಕಿದ ಬಟ್ಟೆಗೆ ಪೊಲೀಸರು ಅವಮಾನ ಮಾಡಿದ್ರು ಎಂದಿದ್ದಾರೆ. ನಾನು ಚಡ್ಡಿ ಹಾಕಿದ್ದೆ. ಅದಕ್ಕೆ ಅವರು ನನ್ನ ಮೇಲೆ ಕೂಗಾಡಲು ಶುರು ಮಾಡಿದ್ರು. ಪೊಲೀಸ್ ಠಾಣೆಗೆ ಬರಲು ಇಂತದ್ದೇ ಬಟ್ಟೆ ತೊಡಬೇಕೆಂಬ ನಿಯಮವೇನಾದ್ರೂ ಇದೆಯಾ ಎಂದು ಕೇಳಿದೆ. ಅವರು ನನಗೆ ಯಾವ ನಿಯಮವನ್ನೂ ತೋರಿಸಲಿಲ್ಲ. ಆದ್ರೆ ಇದು ಭಾರತ, ಅಮೆರಿಕ ಅಲ್ಲ ಎಂದು ಹೇಳಿದ್ರು ಅಂತ ಫೇಸ್‍ಬುಕ್‍ನಲ್ಲಿ ಮಂಗೇಶ್ ಬರೆದುಕೊಂಡಿದ್ದಾರೆ. ಇದರ ಜೊತೆ ಎರಡು ವಿಡಿಯೋಗಳನ್ನೂ ಹಾಕಿದ್ದಾರೆ.

ಮಂಗೇಶ್ ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದ ನಡೆಯುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಮೊದಲನೇ ವಿಡಿಯೋದಲ್ಲಿ ಪೊಲೀಸರೊಬ್ಬರು ಮಂಗೇಶ್‍ಗೆ ಸರಿಯಾದ ಉಡುಪು ಧರಿಸಿ. ಠಾಣೆಗೆ ಮಹಿಳೆಯರು, ಮಕ್ಕಳು ಕೂಡ ಬರುತ್ತಾರೆ ಎಂದು ಹೇಳಿದ್ದಾರೆ.

ತನ್ನನ್ನು ಪೊಲೀಸ್ ಠಾಣೆಯಿಂದ ಬಲವಂತವಾಗಿ ಹೊರಹಾಕಲಾಯ್ತು. ಕೇಸ್ ಹಾಕ್ತೀವೆಂದು ಬೆದರಿಸಿದ್ರು ಅಂತ ಮಂಗೇಶ್ ಹೇಳಿದ್ದಾರೆ.

ವಿಡಿಯೋ ಬಗ್ಗೆ ವಿಚಾರಿಸಿದ್ದಕ್ಕೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿ ಬಾಳಾ ಸಹೇಬ್ ಕದಮ್, ಪೊಲೀಸ್ ಠಾಣೆಗೆ ಬರುವಾಗ ಸರಿಯಾದ ಬಟ್ಟೆ ಹಾಕಿಕೊಂಡು ಬರಲು ನಮ್ಮ ಅಧಿಕಾರಿಗಳು ಅವರಿಗೆ ಹೇಳಿದ್ದಾರಷ್ಟೆ. ಠಾಣೆಗೆ ಮಹಿಳೆಯರೂ ಬರುತ್ತಾರೆ. ಚಡ್ಡಿ ಚೆನ್ನಾಗಿ ಕಾಣೋದಿಲ್ಲ. ಅವರು ಎಂಜಿನಿಯರ್, ಅವರಿಗೆ ಒಳ್ಳೆ ನಡವಳಿಕೆ ಹಾಗೂ ಪೊಲೀಸ್ ಠಾಣೆಗೆ ಬರುವಾಗ ಹೇಗಿರಬೇಕು ಅನ್ನೋದು ತಿಳಿದಿರಬೇಕು ಎಂದು ಹೇಳಿದ್ದಾರೆ.

ಫೇಸ್‍ಬುಕ್‍ನಲ್ಲಿ ಹಂಚಿಕೊಂಡಾಗಿನಿಂದ ಈವರೆಗೆ ಮಂಗೇಶ್ ಅವರ ವಿಡಿಯೋ 1700ಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಮತ್ತೊಂದು ಕಡೆ ಸಾಕಷ್ಟು ಜನ ಮಂಗೇಶ್ ಅವರು ಪೊಲೀಸ್ ಠಾಣೆಗೆ ಚಡ್ಡಿ ಹಾಕಿಕೊಂಡು ಹೋಗಿದ್ದಕ್ಕೆ ಅವರನ್ನ ಟೀಕಿಸಿದ್ದಾರೆ.

https://www.facebook.com/mangesh.desale/videos/pcb.10213002560631602/10213002511350370/?type=3&theater

https://www.facebook.com/mangesh.desale/videos/pcb.10213002560631602/10213002486989761/?type=3&theater

Share This Article
Leave a Comment

Leave a Reply

Your email address will not be published. Required fields are marked *