ಥೈಲ್ಯಾಂಡ್ ಅತ್ಯಂತ ಸುಂದರವಾದ ದೇಶ. ವಿಶ್ವದ ಅನೇಕ ಭಾಗದ ಪ್ರವಾಸಿಗರು ಇಲ್ಲಿನ ಪ್ರವಾಸಿತಾಣಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಥೈಲ್ಯಾಂಡ್ ಎಲ್ಲಾ ವಯೋಮಾನದವರಿಗೂ ಬಹಳ ಪ್ರಿಯವಾದ ದೇಶ ಎಂದೇ ಹೇಳಬಹುದು. ಭಾರತೀಯರಿಗೂ ಥೈಲ್ಯಾಂಡ್ ಅಚ್ಚುಮೆಚ್ಚಿನ ತಾಣ. ಆದರೆ ಇದೀಗ ಥೈಲ್ಯಾಂಡ್ ಸರ್ಕಾರ ತನ್ನ ದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ತೆರಿಗೆ ವಿಧಿಸಲು ಮುಂದಾಗಿದೆ. ಹಾಗಿದ್ರೆ ಥೈಲ್ಯಾಂಡ್ ದೇಶಕ್ಕೆ ಪ್ರವಾಸ ಹೋಗಬೇಕಾದರೆ ಎಷ್ಟು ತೆರಿಗೆ ಕಟ್ಟಬೇಕು? ಭಾರತೀಯರಿಗೆ ಇದರ ಪರಿಣಾಮವೇನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.
ವಿದೇಶಿ ಪ್ರವಾಸಿಗರಿಗೆ 300 ಬಹ್ತ್ ತೆರಿಗೆ:
ಥೈಲ್ಯಾಂಡ್ ಸರ್ಕಾರವು ತನ್ನ ದೇಶಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ವಿದೇಶಿ ಪ್ರವಾಸಿಗರ ಮೇಲೆ 300 ಬಹ್ತ್ (ಸರಿಸುಮಾರು 820 ರೂ.) ಪ್ರವಾಸೋದ್ಯಮ ತೆರಿಗೆಯನ್ನು ವಿಧಿಸುವ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಈ ತೆರಿಗೆ ಪ್ರವಾಸೋದ್ಯಮ ಸೌಲಭ್ಯಗಳನ್ನು ಸುಧಾರಿಸಲು ಹಾಗೂ ವಿದೇಶಿ ಪ್ರವಾಸಿಗರಿಗೆ ವಿಮೆಯನ್ನು ಒದಗಿಸಲು ಬಳಸುತ್ತದೆ ಎಂದು ನೂತನ ಸಚಿವ ಅತ್ತಕೋರ್ನ್ ಸಿರಿಲತ್ತಾಯಕೋರ್ನ್ ತಿಳಿಸಿದ್ದಾರೆ.
ಈ ಮೊದಲು ವಿಮಾನದ ಮೂಲಕ ಬರುವ ಪ್ರಯಾಣಿಕರಿಂದ 300 ಬಹ್ತ್ ಮತ್ತು ಭೂಮಿ ಅಥವಾ ಸಮುದ್ರದ ಮೂಲಕ ಬರುವವರಿಂದ 150 ಬಹ್ತ್ ವಿಧಿಸುವುದಾಗಿ ಅಲ್ಲಿನ ಸರ್ಕಾರ ಹೇಳಿತ್ತು. ಆದರೆ ಇದೀಗ ಎಲ್ಲರಿಗೂ ಒಂದೇ ತೆರಿಗೆಯನ್ನು ವಿಧಿಸಲು ಥೈಲ್ಯಾಂಡ್ ಸರ್ಕಾರ ನಿರ್ಧರಿಸಿದೆ.
ತೆರಿಗೆ ವಸೂಲಿ ಯಾವಾಗಿಂದ ಆರಂಭ?
ವರದಿಗಳ ಪ್ರಕಾರ, ಈ ಹೊಸ ನಿಯಮವನ್ನು ನಾಲ್ಕು ತಿಂಗಳೊಳಗೆ ಪರಿಚಯಿಸಲು ಯೋಜಿಸಿದೆ. ಅಂದರೆ 2026ರ ಮೊದಲಾರ್ಧದ ವೇಳೆಗೆ ಈ ಯೋಜನೆ ಜಾರಿಗೆ ಬರುವ ಸಾಧ್ಯತೆಯಿದೆ. ಈ ಯೋಜನೆ ಜಾರಿಯಾದ ಬಳಿಕ ಥೈಲ್ಯಾಂಡ್ ಪ್ರವಾಸ ಕೊಂಚ ದುಬಾರಿಯಾಗಲಿದೆ. ಪ್ರವಾಸದ ವೇಳೆ ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗುತ್ತದೆ.
ಈ ತೆರಿಗೆ ಜಾರಿ ಬಳಿಕ ಥೈಲ್ಯಾಂಡ್‌ಗೆ ಭೇಟಿ ನೀಡುವ ಪ್ರತಿ ವ್ಯಕ್ತಿ ಸರಿಸುಮಾರು 800-900 ರೂ. ಹೆಚ್ಚು ಪಾವತಿಸಬೇಕಾಗುತ್ತದೆ. ಈ ಮೊತ್ತವು ಹೆಚ್ಚೇನು ದುಬಾರಿಯಲ್ಲವಾದರೂ ಬಜೆಟ್ ಸ್ನೇಹಿ ಪ್ರಯಾಣ ಮಾಡುವವರ ಮೇಲೆ ಕೊಂಚಮಟ್ಟಿಗೆ ಪರಿಣಾಮ ಬೀರುವ ಸಾಧ್ಯತೆಯಿದೆ.
ದಿಢೀರ್ ತೆರಿಗೆ ಏಕೆ?
ಈ ತೆರಿಗೆ ಬಗ್ಗೆ ಮೊದಲ ಬಾರಿಗೆ 2020ರಲ್ಲಿಯೇ ಪ್ರಸ್ತಾಪಿಸಲಾಗಿತ್ತು. ಅಲ್ಲದೇ 2023ರಲ್ಲಿ ಮಂತ್ರಿಮಂಡಲದಿಂದ ಈ ತೆರಿಗೆ ಜಾರಿಗೆ ಅನುಮೋದನೆ ಕೂಡ ದೊರಕಿತ್ತು. ಆದರೆ ಅಂದಿನಿಂದ ಈ ತೆರಿಗೆ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಮೊದಲಿನ ಯೋಜನೆ ಪ್ರಕಾರ, ವಿಮಾನದ ಮೂಲಕ ಬರುವ ಪ್ರಯಾಣಿಕರಿಂದ 300 ಬಹ್ತ್ ಮತ್ತು ಭೂಮಿ ಅಥವಾ ಸಮುದ್ರದ ಮೂಲಕ ಬರುವವರಿಂದ 150 ಬಹ್ತ್ ವಿಧಿಸುವುದಾಗಿ ನಿರ್ಧರಿಸಲಾಗಿತ್ತು. ಆದರೆ ಈಗ ಎಲ್ಲರಿಗೂ ಸಮಾನ ತೆರಿಗೆ ವಿಧಿಸಲು ಥೈಲ್ಯಾಂಡ್ ಸರ್ಕಾರ ಮುಂದಾಗಿದೆ.
ಭಾರತೀಯರ ಮೇಲೆ ಪರಿಣಾಮ ಏನು?
ಭಾರತವು ಈಗ ಥೈಲ್ಯಾಂಡ್‌ಗೆ ಪ್ರಮುಖ ಪ್ರವಾಸಿ ಮೂಲ ರಾಷ್ಟ್ರವಾಗಿದೆ. ಭಾರತವು ಥೈಲ್ಯಾಂಡ್‌ನ ಮೂರನೇ ಅತಿದೊಡ್ಡ ಪ್ರವಾಸಿ ಮೂಲ ದೇಶವಾಗಿದ್ದು,ಈ ಹೊಸ ತೆರಿಗೆಯು ಗಮನಾರ್ಹ ಪರಿಣಾಮ ಬೀರಬಹುದು. ವರದಿಗಳ ಪ್ರಕಾರ, 2024ರಲ್ಲಿ ಸುಮಾರು 2.1 ಮಿಲಿಯನ್ ಭಾರತೀಯರು ಥೈಲ್ಯಾಂಡ್ ದೇಶಕ್ಕೆ ಪ್ರಯಾಣಿಸಿದ್ದಾರೆ. ಇದು 2023ಕ್ಕಿಂತ ಸುಮಾರು 30% ಹೆಚ್ಚಾಗಿದೆ.
ಇನ್ನು ಈ ತೆರಿಗೆ ಜಾರಿ ಬಳಿಕ ಬಜೆಟ್ ಫ್ರೆಂಡ್ಲಿ ಪ್ರವಾಸಿಗರಿಗೆ ಇದು ಹೊರೆ ಎನಿಸುವ ಸಾಧ್ಯತೆಯಿದೆ. ಆದ್ದರಿಂದ ಈ ತೆರಿಗೆ ಜಾರಿ ಬಳಿಕ ಥೈಲ್ಯಾಂಡ್ ಪ್ರವಾಸ ಕೈಗೊಳ್ಳುವ ಭಾರತೀಯರ ಸಂಖ್ಯೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಒಂದುವೇಳೆ ಥೈಲ್ಯಾಂಡ್ ಸರ್ಕಾರ ತೆರಿಗೆ ಸರಿಯಾದ ರೀತಿಯಲ್ಲಿ ಬಳಸಿಕೊಂಡು ಪ್ರವಾಸಿಗರಿಗೆ ಹೆಚ್ಚಿನ ಸುರಕ್ಷತೆ ಹಾಗೂ ಸೌಲಭ್ಯವನ್ನು ಒದಗಿಸಿದ್ದೇ ಆದಲ್ಲಿ ಥೈಲ್ಯಾಂಡ್‌ಗೆ ಇನ್ನೂ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವುದರಲ್ಲಿ ಅನುಮಾನವೇ ಇಲ್ಲ.
ಯಾವ ವರ್ಷದಲ್ಲಿ ಎಷ್ಟು ಭಾರತೀಯರು ಥೈಲ್ಯಾಂಡ್ ಭೇಟಿ?
2020 – 70,000 ಭಾರತೀಯರು
2021 – 80,000 ಭಾರತೀಯರು
2022 – 138,000 ಭಾರತೀಯರು
2023 – 1,628,542 ಭಾರತೀಯರು
2024 – 2.1 ಮಿಲಿಯನ್ ಭಾರತೀಯರು