ಸಿನಿಮಾ ಡೈಲಾಗ್ ಮೂಲಕ ಬ್ರಹ್ಮಾನಂದಂ ಪ್ರಚಾರ

Public TV
1 Min Read

ಚಿಕ್ಕಬಳ್ಳಾಪುರ: ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಇಂದು ಸಹ ಟಾಲಿವುಡ್ ಹಾಸ್ಯ ನಟ ಬ್ರಹ್ಮಾನಂದಂ ಚುನಾವಣಾ ಪ್ರಚಾರ ನಡೆಸಿದ್ದಾರೆ.

ಬ್ರಹ್ಮಾನಂದಂ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದರು. ಈ ವೇಳೆ ಹೊನ್ನಪ್ಪನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಬ್ರಹ್ಮಾನಂದಂ ಕಾರನ್ನು ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಚೇನಹಳ್ಳಿ ಹೋಬಳಿಯ ಹಳೇಹಳ್ಳಿ, ಪುರ, ಜರಬಂಡಹಳ್ಳಿ ಸೇರಿದಂತೆ ಮಂಚೇನಹಳ್ಳಿ ಪಟ್ಟಣದಲ್ಲಿ ಬ್ರಹ್ಮಾನಂದಂ ಚುನಾವಣಾ ಪ್ರಚಾರ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಬ್ರಹ್ಮಾನಂದಂ, ಎಲ್ಲರಿಗೂ ನಮಸ್ಕಾರ, ಇಂದು ನಾನು ಹೈದರಾಬಾದಿನಿಂದ ಇಲ್ಲಿವರೆಗೂ ಬಂದಿದ್ದೇನೆ ಎಂದರೆ ಅದಕ್ಕೆ ಸುಧಾಕರ್ ಅವರೇ ಕಾರಣ. ಬಿಜೆಪಿ ಅಭ್ಯರ್ಥಿ ಸುಧಾಕರ್ ಬುದ್ಧಿವಂತರು ಮತ್ತು ವಿದ್ಯಾವಂತರು. ಹೀಗಾಗಿ ಜನರಿಗಾಗಿ ಯಾವ ಯಾವ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ತಿಳಿದಿರುತ್ತದೆ. ಸುಧಾಕರ್ ಅವರು ನನ್ನ ಒಳ್ಳೆಯ ಸ್ನೇಹಿತ. ಅವರು ತುಂಬಾ ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ. ಹೀಗಾಗಿ ಅವರಿಗೆ ನಿಮ್ಮ ಮತವನ್ನು ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ ತಮ್ಮ ಸಿನಿಮಾ ಸ್ಟೈಲಿನಲ್ಲಿ ಅಭಿಮಾನಿಗಳಿಗಾಗಿ ಡೈಲಾಗ್ ಹೇಳಿದ್ದಾರೆ. ಈ ವೇಳೆ ಹಾಸ್ಯ ನಟ ಬ್ರಹ್ಮಾನಂದಂ ನೋಡಲು ಜನರು ಮುಗಿಬಿದ್ದಿದ್ದರು. ಈ ಹಿಂದಿನ ಚುನಾವಣೆಗಳಲ್ಲೂ ಸುಧಾಕರ್ ಅವರ ಪರವಾಗಿ ಟಾಲಿವುಡ್‍ನ ನಟ ಮೆಗಾಸ್ಟಾರ್ ಚಿರಂಜೀವಿ, ಬಹುಭಾಷಾ ತಾರೆಗಳಾದ ರಮ್ಯಕೃಷ್ಣ, ಖುಷ್ಬೂ ಸೇರಿದಂತೆ ಅನೇಕರು ಪ್ರಚಾರ ನಡೆಸಿದ್ದರು. ಈ ಮೂಲಕ ಕ್ಷೇತ್ರದಲ್ಲಿ ತೆಲುಗು ಭಾಷಿಕ ಮತದಾರರ ಮನಸೆಳೆದಿದ್ದರು.

ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೆ ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿದ್ದು, ಇಲ್ಲಿನ ಜನ ಈಗಲೂ ತೆಲುಗು ಭಾಷೆಯನ್ನು ಮಾತನಾಡುತ್ತಾರೆ. ಜೊತೆಗೆ ಟಾಲಿವುಡ್ ಸಿನಿಮಾಗಳನ್ನೇ ನೋಡುವುದರಿಂದ ಟಾಲಿವುಟ್ ನಾಯಕ, ನಟ-ನಟಿಯರನ್ನ ಇಷ್ಟಪಡುತ್ತಾರೆ. ಹೀಗಾಗಿ ಈ ಬಾರಿ ಯೂ ಸ್ಯಾಂಡಲ್‍ವುಡ್ ಸ್ಟಾರ್ಸ್ ಹಾಗೂ ಟಾಲಿವುಡ್ ಕಾಮಿಡಿ ಕಿಂಗ್ ಸುಧಾಕರ್ ಅವರ ಪರ ಪ್ರಚಾರಕ್ಕೆ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *