Telegram Ban | ಭಾರತದಲ್ಲಿ ಬ್ಯಾನ್ ಆಗುತ್ತಾ ಟೆಲಿಗ್ರಾಂ ಆ್ಯಪ್?

Public TV
1 Min Read

ನವದೆಹಲಿ: ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್‌ನ (Telegram) ಬಿಲಿಯನೇರ್ ಸಂಸ್ಥಾಪಕ ಮತ್ತು ಸಿಇಒ ಪಾವೆಲ್ ಡುರೊವ್ ಅವರನ್ನು ಶನಿವಾರ ಪ್ಯಾರಿಸ್ ಬಳಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇದರ ನಡುವೆ ಪಾವೆಲ್​ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಭಾರತದಲ್ಲಿ (India) ಟೆಲಿಗ್ರಾಮ್​​ ಬ್ಯಾನ್​ (Telegram Ban) ಮಾಡಲು ಸರ್ಕಾರ ಯೋಚಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸುಲಿಗೆ ಮತ್ತು ಜೂಜಾಟ ಹೀಗೆ ಇತ್ಯಾದಿಗಳನ್ನು ಒಳಗೊಂಡಿರುವ ಅಪರಾಧ ಚಟುವಟಿಕೆಗಳಲ್ಲಿ ಈ ಅಪ್ಲಿಕೇಶನ್‌ನ್ನು ಬಳಸಲಾಗುತ್ತಿದೆಯೇ ಎಂದು ತಿಳಿಯಲು ಸರ್ಕಾರ ಇದೀಗ ತನಿಖೆ ಪ್ರಾರಂಭಿಸಿದೆ. ಈ ಬಗ್ಗೆ ಕೆಲವು ಮಾಧ್ಯಮಗಳು ಸಹ ವರದಿ ಮಾಡಿದ್ದು, ತನಿಖೆಯಲ್ಲಿ ಸತ್ಯ ಬಯಲಾದ್ರೆ, ಟೆಲಿಗ್ರಾಮ್ ಅಪ್ಲಿಕೇಶನ್​ ನಿಷೇಧಿಸುವ ಸಾಧ್ಯತೆಯಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಭಾರತದಲ್ಲಿ, ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾದ ಇಂಡಿಯನ್ ಸೈಬರ್ ಕ್ರೈಮ್ ಕೋ ಆರ್ಡಿನೇಷನ್ ಸೆಂಟರ್ (I4C) ಮೂಲಕ ಈ ತನಿಖೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಡುರೊವ್ ತನ್ನ ಅಪ್ಲಿಕೇಷನ್ ಕ್ರಿಮಿನಲ್ ಬಳಕೆಯನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲು ವಿಫಲರಾಗಿದ್ದಾರೆ ಎನ್ನಲಾಗಿದೆ.

ರಷ್ಯಾದ ಮೂಲದ ಡುರೊವ್ ಅವರು ಈ ಸಂದೇಶ ಕಳುಹಿಸುವ ಅಪ್ಲಿಕೇಶನ್ ಟೆಲಿಗ್ರಾಮ್‌ನ್ನು ಪ್ರಾರಂಭಿಸಿದ್ದರು. ಟೆಲಿಗ್ರಾಮ್ ಭಾರತದಲ್ಲಿ ಸುಮಾರು 5 ಮಿಲಿಯನ್​ಗೂ ಅಧಿಕ ಬಳಕೆದಾರರನ್ನು ಹೊಂದಿದೆ.

Share This Article