ಬುಧವಾರ ನಾಪತ್ತೆಯಾಗಿದ್ದ ಪಶುವೈದ್ಯೆ ಇಂದು ಶವವಾಗಿ ಪತ್ತೆ

Public TV
2 Min Read

– ಅಂಡರ್ ಬ್ರಿಡ್ಜ್  ಕೆಳಗೆ ಜೀವಂತವಾಗಿ ಸುಟ್ರು

ಹೈದರಾಬಾದ್: ಬುಧವಾರ ರಾತ್ರಿ ನಾಪತ್ತೆಯಾಗಿದ್ದ 26 ವರ್ಷದ ಪಶುವೈದ್ಯೆಯ ಶವ ಇಂದು ಬೆಳಿಗ್ಗೆ ಸುಟ್ಟು ಕರಕಲಾದ ರೀತಿಯಲ್ಲಿ ಪತ್ತೆಯಾಗಿದೆ.

ತೆಲಂಗಾಣದ ಕೊಲ್ಲೂರು ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಪಶುವೈದ್ಯೆಯಾದ ಪ್ರಿಯಾಂಕಾ ರೆಡ್ಡಿ, ಬುಧವಾರ ಬೆಳಗ್ಗೆ ಶಾದ್‍ನಗರದ ತನ್ನ ಮನೆಯಿಂದ ತಾನು ಕೆಲಸ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ನಂತರ ರಾತ್ರಿ ಬೈಕ್ ಪಂಕ್ಚರ್ ಆಗಿದೆ ಎಂದು ತನ್ನ ತಂಗಿಗೆ ಕರೆ ಮಾಡಿ ನಂತರ ನಾಪತ್ತೆಯಾಗಿದ್ದರು. ಆದರೆ ಇಂದು ಬೆಳಗ್ಗೆ ಶಾಡ್‍ನಗರದಲ್ಲಿ ಅಂಡರ್ ಬ್ರಿಡ್ಜ್ ನ ಕೆಳಗೆ ಶವವಾಗಿ ಪತ್ತೆಯಾಗಿದ್ದಾರೆ.

ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪ್ರಿಯಾಂಕ ಅವರ ತಂಗಿ ಭವ್ಯ, ನನಗೆ ಪ್ರಿಯಾಂಕ ರಾತ್ರಿ 9:15 ಸುಮಾರಿಗೆ ಕರೆ ಮಾಡಿದಳು. ನನ್ನ ಬೈಕ್ ಪಂಕ್ಚರ್ ಆಗಿದೆ. ನನಗೆ ಭಯವಾಗುತ್ತಿದೆ ಎಂದು ಹೇಳಿದಳು. ನಂತರ ನಾನು ಅವಳಿಗೆ ಹತ್ತಿರದ ಟೋಲ್ ಬಳಿ ಹೋಗಲು ಹೇಳಿದೆ. ಆದರೆ ಅವಳು ನನಗೆ ತುಂಬಾ ಭಯವಾಗುತ್ತಿದೆ. ಇಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಓಡಾಡುತ್ತಿದ್ದಾರೆ ಹಾಗೂ ತುಂಬಾ ಲಾರಿಗಳನ್ನು ಪಾರ್ಕ್ ಮಾಡಲಾಗಿದೆ ಎಂದು ಹೇಳಿದಳು ಎಂದು ತಿಳಿಸಿದ್ದಾರೆ.

ನಾನು ನಂತರ ಅವಳಿಗೆ ಭಯಪಡಬೇಡ ಬೈಕನ್ನು ಅಲ್ಲೇ ನಿಲ್ಲಿಸಿ ನೀನು ಅಲ್ಲಿಂದ ಬಾ ಎಂದು ಹೇಳಿದೆ. ನಂತರ ಮತ್ತೆ ಅವಳ ಫೋನ್‍ಗೆ ಕರೆ ಮಾಡಿದಾಗ ಅವಳ ಫೋನ್ ಸ್ವಿಚ್ ಆಫ್ ಬಂತು. ಆದರೆ ಬೆಳಗ್ಗೆ ಶಾಡ್‍ನಗರದಲ್ಲಿ ಅಂಡರ್ ಬ್ರಿಡ್ಜ್ ಕೆಳಗೆ ಕಂಡು ಹಿಡಿಯಲು ಆಗದ ರೀತಿಯಲ್ಲಿ ಸುಟ್ಟು ಹೋದ ಅವಳ ದೇಹ ದೊರಕಿದೆ. ಆಕೆ ಹಾಕಿದ್ದ ಚೈನ್ ಲಾಕೆಟ್ ನೋಡಿ ನಾವು ದೇಹವನ್ನು ಗುರುತಿಸಿದೆವು ಎಂದು ಭವ್ಯ ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಶಂಶಾಬಾದ್ ಡಿಸಿಪಿ ಪ್ರಕಾಶ್ ರೆಡ್ಡಿ, ನಾವು ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಸ್ಥಳೀಯರು ಸುಮಾರು 7:30 ಶವದ ಬಗ್ಗೆ ನಮಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕೆ ಹೋಗಿ ನೋಡಿದಾಗ, ಸೀಮೆಎಣ್ಣೆ ಹಾಕಿ ದೇಹವನ್ನು ಸಂಪೂರ್ಣ ಸುಡಲಾಗಿದೆ. ಆಕೆ ಬೈಕ್ ಇನ್ನೂ ಸಿಕ್ಕಿಲ್ಲ. ಅದನ್ನು ಹುಡುಕುತ್ತಿದ್ದೇವೆ. ಆಕೆಯನ್ನು ಜೀವಂತವಾಗಿ ಸುಟ್ಟಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಪ್ರಕರಣವನ್ನು ತನಿಖೆ ಮಾಡಲು ಹತ್ತು ತಂಡಗಳನ್ನು ನೇಮಿಸಲಾಗಿದೆ ಎಂದು ಹೇಳಿದ್ದಾರೆ.

ಮಗಳ ಸಾವಿನಿಂದ ಆಘಾತಕ್ಕೀಡಾಗಿರುವ ಸರ್ಕಾರಿ ನೌಕರ ಪ್ರಿಯಾಂಕ ಅವರ ತಂದೆ, ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಅವಳನ್ನು ಕೊಲೆ ಮಾಡಿ ಸುಟ್ಟವರನ್ನು ನೇಣು ಹಾಕಬೇಕು ಎಂದು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *