ಮರ್ಯಾದಾ ಹತ್ಯೆ- ಗರ್ಭಿಣಿ ಅಮೃತಾಗೆ ಸರ್ಕಾರಿ ಉದ್ಯೋಗ, ಮನೆ, 8.25 ಲಕ್ಷ ರೂ. ಪರಿಹಾರ

Public TV
2 Min Read

ಹೈದರಾಬಾದ್: ಮರ್ಯಾದಾ ಹತ್ಯೆಗೆ ಬಲಿಯಾದ ಪ್ರಣಯ್ ಕುಟುಂಬದವರಿಗೆ ರಾಜ್ಯ ಸರ್ಕಾರವೂ ಪರಿಹಾರ ಧನವನ್ನು ಫೋಷಿಸಿತ್ತು. ಈಗ ಮೃತ ಪ್ರಣಯ್ ಪತ್ನಿ ಅಮೃತಾಗೆ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಭರವಸೆಯನ್ನು ಕೂಡ ನೀಡಿದೆ.

ಗುರುವಾರ ತೆಲಂಗಾಣ ಪರಿಶಿಷ್ಟ ಜಾತಿ ಅಭಿವೃದ್ಧಿ ಸಚಿವ ಜಿ. ಜಗದೀಶ್ ರೆಡ್ಡಿ ಅವರು ನಲ್ಗೊಂಡ ಜಿಲ್ಲೆಯ ಮಿರಿಯಾಲಗುಡದಲ್ಲಿ ಮೃತ ಪ್ರಣಯ್ ಕುಟುಂಬದವರನ್ನು ಭೇಟಿ ಮಾಡಿದ್ದು, ಸಂತಾಪ ವ್ಯಕ್ತಪಡಿಸಿದ್ದರು. ಇವರ ಜೊತೆಗೆ ತುಂಗತುರ್ತಿ ಶಾಸಕ ಗದರಿ ಕಿಶೋರ್ ಮತ್ತು ರಾಜ್ಯಸಭೆ ಸದಸ್ಯ ಬಾದುಗುಲಾ ಲಿಂಗಯ್ಯ ಯಾದವ್, ಪೊಲೀಸ್ ಅಧೀಕ್ಷಕ ಎ.ವಿ ರಂಗನಾಥ್ ಮತ್ತು ಜಿಲ್ಲಾಧಿಕಾರಿ ಗೌರವ್ ಉಪ್ಪಲ್ ಅವರು ಭೇಟಿಯಾಗಿದ್ದಾರೆ. ಇದನ್ನೂ ಓದಿ: ಮರ್ಯಾದಾ ಹತ್ಯೆಗೆ ಬಲಿಯಾದ ಪ್ರಣಯ್ ಬದುಕಿರುವುದು ಈ ವಿಡಿಯೋದಲ್ಲಿ ಮಾತ್ರ

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ, ಇಂತಹ ಘಟನೆಗಳು ಪ್ರಸ್ತುತ ದಿನಗಳಲ್ಲಿ ಇನ್ನೂ ನಡೆಯುತ್ತಿವೆ ಎಂದು ನಾಚಿಕೆ ಆಗುತ್ತದೆ. ಈ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಮೃತ ಪ್ರಣಯ್ ಪತ್ನಿ ಅಮೃತ ವರ್ಶಿನಿ ಅವರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. ಜೊತೆಗೆ ಕೃಷಿ ಭೂಮಿ ಮತ್ತು ಡಬಲ್ ಬೆಡ್ ರೂಮ್ ಮನೆಯನ್ನು ಅವರ ಕುಟುಂಬಕ್ಕೆ ನೀಡುತ್ತೇವೆ. ಈಗಾಗಲೇ ಪ್ರಣಯ್ ಕುಟುಂಬವರಿಗೆ ತಕ್ಷಣದ ವೆಚ್ಚಕ್ಕಾಗಿ ಸರ್ಕಾರ 8.25 ಲಕ್ಷ ರೂ. ಅನುಮೋದಿಸಿದೆ. ಇದರ ಜೊತೆ ನಾನು ವೈಯಕ್ತಿಕವಾಗಿ ಅಮೃತಾಗೆ 4.12 ಲಕ್ಷ ರೂ. ಚೆಕ್ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರಣಯ್ ಮತ್ತು ಅಮೃತ ಇಬ್ಬರು ಪ್ರೀತಿಸಿದ್ದು, ಎರಡೂ ಕುಟುಂಬಗಳ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದವು. ಇಬ್ಬರ ಜಾತಿ ಬೇರೆಯಾಗಿದ್ದರಿಂದ ಅಮೃತಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರು ಯುವ ಜೋಡಿ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಆದರೆ ಸೆಪ್ಟಂಬರ್ 15 ಶನಿವಾರ ಪ್ರಣಯ್ ಮತ್ತು ಅಮೃತಾ ಆಸ್ಪತ್ರೆ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಚ್ಚಿನಿಂದ ಪ್ರಣಯ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದನು. ಆದರೆ ಪ್ರಣಯ್ ಕೊಲೆಗೆ ಆತ ಮಾವ ಮಾರುತಿ ರಾವ್ ಬರೋಬ್ಬರಿ ಒಂದು ಕೋಟಿ ಹಣವನ್ನು ಹಂತಕರಿಗೆ ನೀಡಿದ್ದನು ಎಂದು ತನಿಖೆ ವೇಳೆ ತಿಳಿದಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
1 Comment

Leave a Reply

Your email address will not be published. Required fields are marked *